ವರ್ಷ ಕೊನೆಯಾಗುತ್ತಿದೆ. ನಿರೀಕ್ಷೆ, ಕನಸುಗಳು ಕೂಡಾ ಹೊಸ ವರ್ಷಕ್ಕೆ ಶಿಫ್ಟ್ ಆಗುತ್ತಿವೆ. ಅದಕ್ಕೆ ತಕ್ಕಂತೆ 2025ರ ಮೊದಲ ತಿಂಗಳು ರಂಗೇರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅಲ್ಲಿಗೆ ಜನವರಿ.. ನೋ ವರಿ ಎನ್ನಬಹುದು. ಹೌದು, ಹೊಸ ವರ್ಷದ ಮೊದಲ ತಿಂಗಳಾದ ಜನವರಿ ಭಿನ್ನ-ವಿಭಿನ್ನ ಸಿನಿಮಾಗಳ ಮೂಲಕ ಕಲರ್‌ಫುಲ್ ಆಗಲಿದೆ. ಸಿನಿಮಾ ಮಂದಿ ತಡಮಾಡದೇ ಜನವರಿ ಪ್ರತಿ ವಾರ ವಾರ ಪ್ರೇಕ್ಷಕರ ಜೊತೆ ಸಿನಿಹಬ್ಬ ಮಾಡಲು ಮುಂದಾಗಿದ್ದಾರೆ.
ಸದ್ಯ ಘೋಷಣೆಯಾಗಿರುವ ಸಿನಿಮಾಗಳನ್ನು ನೋಡಿದಾಗ 2025ರ ಮೊದಲ ತಿಂಗಳೇ ಒಂದು ಪಾಸಿಟಿವ್ ಫೀಲ್ ನೀಡುತ್ತಿರುವುದು ಸುಳ್ಳಲ್ಲ. ಹಾಗೆ ನೋಡಿದರೆ ಈ ವರ್ಷದ (2024) ಮೊದಲ ತಿಂಗಳು ಚಿತ್ರರಂಗಕ್ಕೆ ಅಷ್ಟೇನು ಆಶಾದಾಯಕವಾಗಿರಲಿಲ್ಲ. ಯಾವುದೇ ನಿರೀಕ್ಷಿತ ಸಿನಿಮಾಗಳು ಕೂಡಾ ತೆರೆಕಾಣಲಿಲ್ಲ. ಆದರೆ, ಹೊಸ ವರ್ಷದ ಜನವರಿ ಆ ಕೊರಗನ್ನು ನೀಗಿಸುವ ಸೂಚನೆ ನೀಡಿದೆ. ಸದ್ಯ ಘೋಷಣೆಯಾಗಿರುವ ಸಿನಿಮಾಗಳು ಒಂದಲ್ಲ, ಒಂದು ಕಾರಣಕ್ಕೆ ಚಿತ್ರರಂಗದಲ್ಲಿ ಸದ್ದು ಮಾಡಿದ ಸಿನಿಮಾಗಳು. ಇಂತಹ ಸಿನಿಮಾಗಳು ರಿಲೀಸ್‌ಗೆ ಬಂದಾಗ ಸ್ಯಾಂಡಲ್‌ವುಡ್ ಒಂದು ಕಣ್ಣಿಡೋದು ಸಹಜ.
ಸದ್ಯ ನಾಗಶೇಖರ್ ನಿರ್ದೇಶನದ “ಸಂಜು ವೆಡ್ಸ್ ಗೀತಾ-2′, ಶರಣ್ ನಟನೆಯ “ಛೂ ಮಂತರ್’, ರಿಷಿ ನಟನೆಯ “ರುದ್ರ ಗರುಡ ಪುರಾಣ’, ದಿನಕರ್ ತೂಗುದೀಪ ನಿರ್ದೇಶನದ “ರಾಯಲ್’, ನವೀನ್ ಶಂಕರ್ ನಟನೆಯ “ನೋಡಿದವರು ಏನಂತಾರೆ’, ಚಿಕ್ಕಣ್ಣ ನಟನೆಯ “ಫಾರೆಸ್ಟ್’, ವಿಜಯ ರಾಘವೇಂದ್ರ ನಟನೆಯ “ರಿಪ್ಪನ್ ಸ್ವಾಮಿ’, ಪ್ರಜ್ವಲ್ ನಟನೆಯ “ರಾಕ್ಷಸ’.. ಹೀಗೆ ಅನೇಕ ಸಿನಿಮಾಗಳು ಜನವರಿಯಲ್ಲಿ ತೆರೆಕಾಣಲಿದೆ. ಹಾಗಂತ ಪಟ್ಟಿ ಇಲ್ಲಿಗೆ ನಿಲ್ಲುವುದಿಲ್ಲ. ಇನ್ನೊಂದಿಷ್ಟು ಸಿನಿಮಾಗಳು ರಿಲೀಸ್ ಮಾತುಕತೆಯಲ್ಲಿದೆ.
ನಿರೀಕ್ಷಿತ ಸಿನಿಮಾಗಳ ಜಾತ್ರೆ…
ಸದ್ಯ ಬಿಡುಗಡೆ ಘೋಷಿಸಿಕೊಂಡಿರುವ ಸಿನಿಮಾಗಳು ಒಂದಲ್ಲ ಒಂದು ಕಾರಣಕ್ಕೆ ನಿರೀಕ್ಷೆ ಹುಟ್ಟಿಸಿವೆ. “ಸಂಜು ವೆಡ್ಸ್ ಗೀತಾ’ ಮೊದಲ ಭಾಗ ಗೆಲ್ಲುವ ಮೂಲಕ ಈಗ “ಸಂಜು ವೆಡ್ಸ್ ಗೀತಾ-2′ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ನು ಶರಣ್ ನಟನೆಯ “ಛೂ ಮಂತರ್’ ಮೇಲೂ ಸ್ಯಾಂಡಲ್ ವುಡ್ ಒಂದು ಕಣ್ಣಿಟ್ಟಿದೆ. “ಕರ್ವ’ ನಿರ್ದೇಶಕ ನವನೀತ್ ಹಾಗೂ ಶರಣ್ ಕಾಂಬಿನೇಶನ್‌ನ ಚಿತ್ರ ಎಂಬುದು ಒಂದು ಕಾರಣವಾದರೆ ಚಿತ್ರದ ಹಾಡು, ಟೀಸರ್ ಗಮನ ಸೆಳೆದಿರುವುದು ಮತ್ತೂಂದು ಕಾರಣ. ಇದರ ಜೊತೆಗೆ “ರುದ್ರ ಗರುಡ ಪುರಾಣ’, “ರಾಕ್ಷಸ’, “ಫಾರೆಸ್ಟ್’ ಚಿತ್ರಗಳ ಮೇಲೂ ಪ್ರೇಕ್ಷಕರು ನಂಬಿಕೆ ಇಟ್ಟಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಜನವರಿ ಮೇಲೆ ನಿರೀಕ್ಷೆ ಹೆಚ್ಚಿದೆ. ಸದ್ಯ ಈ ಚಿತ್ರಗಳು ತಮ್ಮ ಪ್ರಚಾರದಲ್ಲಿ ತೊಡಗಿದ್ದು, ಹೊಸ ವರ್ಷದ ಮೊದಲ ತಿಂಗಳು ಒಂದೊಳ್ಳೆಯ ಓಪನಿಂಗ್‌ನೊಂದಿಗೆ ಶುರುವಾಗಲಿದೆ ಎಂಬ ನಂಬಿಕೆ ಸಿನಿಮಂದಿಯದ್ದು.
ಫಸ್ಟ್‌ಹಾಫ್ನಲ್ಲಿ ಸ್ಟಾರ್ ಸಿನಿಮಾಗಳಿಲ್ಲ..
2025ರ ಮೊದಲ ಐದಾರು ತಿಂಗಳಿನಲ್ಲಿ ಯಾವುದೇ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಈ ಮೂಲಕ ಹೊಸಬರು ಹಾಗೂ ಇತರ ಪರಿಚಿತ ಮುಖಗಳ ಸಿನಿಮಾಗಳಷ್ಟೇ ತೆರೆಕಾಣಲಿದೆ. ಉಪೇಂದ್ರ, ಸುದೀಪ್, ವಿಜಯ್, ಶ್ರೀಮುರಳಿ, ಯಶ್, ಶಿವರಾಜ್ ಕುಮಾರ್, ಗಣೇಶ್, ರಿಷಬ್… ಹೀಗೆ ಮುಂಚೂಣಿ ನಟರ ಸಿನಿಮಾ ಗಳು ತೆರೆಕಾಣುತ್ತಿಲ್ಲ. ಹೊಸ ವರ್ಷದ ಮೊದಲ ಸ್ಟಾರ್ ಸಿನಿಮಾವಾಗಿ ಧ್ರುವ ಸರ್ಜಾ ನಟನೆಯ “ಕೆಡಿ’ ಬರಲಿದೆ. ಚಿತ್ರರಂಗದ ಮೂಲಗಳ ಪ್ರಕಾರ, ಈ ಚಿತ್ರ ಕೂಡಾ ಏಪ್ರಿಲ್ ನಂತರವೇ ತೆರೆಕಾಣಲಿದೆ. ಆ ನಂತರ ಶಿವಣ್ಣ ಹಾಗೂ ಉಪೇಂದ್ರ ಕಾಂಬಿನೇಶನ್‌ನ “45′ ಚಿತ್ರ ಬರಲಿದೆ.
ಡಿಸೆಂಬರ್ ಸಿನಿಮಾಗಳು ಜನವರಿಗೆ
ಜನವರಿಯಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಸಿನಿಮಾ ಗಳು ಡಿಸೆಂಬರ್‌ನಲ್ಲಿ ತೆರೆಕಾಣಬೇಕಿತ್ತು. ಆದರೆ, ಡಿಸೆಂಬರ್ ನಲ್ಲಿ “ಪುಷ್ಪ-2′ ಹವಾ ಜೊತೆಗೆ “ಯು-ಐ’ ಹಾಗೂ “ಮ್ಯಾಕ್ಸ್’ ಚಿತ್ರಗಳು ತೆರೆಕಾಣುತ್ತಿರುವುದರಿಂದ ಬೇರೆ ಚಿತ್ರಗಳು ತಮ್ಮ ಬಿಡುಗಡೆಯನ್ನು ಜನವರಿಗೆ ಮುಂದೂಡಿವೆ.
ರವಿಪ್ರಕಾಶ್ ರೈ