Advertisement
– ಆರು ತಿಂಗಳ “ಬರಗಾಲ’ದ ನಂತರ ಒಳ್ಳೆಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬಹುದು ಎಂದುಕೊಂಡ ಸಿನಿಮಾ ಪ್ರೇಮಿಗಳಿಗೆ ಸದ್ಯ ಜೋರಾಗಿ ಕೇಳಿಬರುತ್ತಿರುವುದು ಸಿನಿಮಾಗಳ “ಖುಷಿ’ಯ ಸುದ್ದಿಗಳಿಗಿಂತ ವಿವಾದಗಳ ಕುರಿತಾದ “ವಿಷಾದ’ದ ಸುದ್ದಿ. ಇಲ್ಲಿ ವಾದ ಏನೆಂಬುದು ಹಾಗೂ ಅದರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂಬುದು ಮುಖ್ಯವಲ್ಲ. ಅದು ಅವರವರ ನಡುವಿನ ಮಾತುಕತೆ…ಆದರೆ, ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯಲ್ಲಿ ಈ ತರಹದ ವಿವಾದಗಳು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬಾರದಿತ್ತು ಎನ್ನುವುದು ನಿಜವಾದ ಸಿನಿಮಾ ಪ್ರೇಮಿಗಳ ಹೃದಯಪೂರ್ವಕ ಕಳಕಳಿ.ಈ ಕಳಕಳಿಯ ಹಿಂದೊಂದು ಕಾಳಜಿಯೂ ಇದೆ. ಇಂತಹ ವಿವಾದಗಳು ಚಿತ್ರರಂಗದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂಬುದೇ ಆ ಕಾಳಜಿ.
Related Articles
Advertisement
ನಿರ್ಮಾಪಕನೊಬ್ಬನ ಸಿನಿಮಾ ಹಣಕಾಸಿನ ಮುಗ್ಗಟ್ಟಿನಿಂದ ರಿಲೀಸ್ ನಿಂತುಹೋಗುತ್ತದೆ ಎಂದಾಗ, ತಾನೇ ಮುಂದೆ ಬಂದು ಸಿನಿಮಾ ರಿಲೀಸ್‌ಗೆ ಬೇಕಾದ ಹಣ ಹೊಂದಿಸಿಕೊಟ್ಟು ಯಾವುದೇ ಕ್ರೆಡಿಟ್ ತಗೊಳದೇ, ಎಲೆಮರೆಯ ಕಾಯಿಯಂತೆ ಹೀರೋ ಇರುತ್ತಾನೆ ಎಂದರೆ ಅದು ಆ ನಿರ್ಮಾಪಕನ ಮೇಲಿನ ವಿಶ್ವಾಸ, ಗೌರವದಿಂದ… ನಿರ್ಮಾಪಕರು ಅಷ್ಟೇ, ಯಾವತ್ತೋ ಮಾಡುವ ಸಿನಿಮಾಕ್ಕೆ ವರ್ಷಕ್ಕೆ ಮೊದಲೇ ಅಡ್ವಾನ್ಸ್ ಮಾಡಿ, ಹೀರೋಗಾಗಿ ಕಾಯುತ್ತಾರೆ ಎಂದರೆ ಅಲ್ಲೂ ಕಾಣುವುದು ವಿಶ್ವಾಸ, ನಂಬಿಕೆಯೇ. ಹಾಗಾಗಿ, ಕನ್ನಡ ಚಿತ್ರರಂಗದಲ್ಲಿ ಅವತ್ತಿನಿಂದ ಇವತ್ತಿನವರೆಗೂ “ಪತ್ರ ವ್ಯವಹಾರ’ಕ್ಕಿಂತ ನಂಬಿಕೆ ಎಂಬುದೇ “ಮೂಲ ಪತ್ರ’. ಆದರೆ, ಕಾಲ ಸರಿಯುತ್ತಾ ಹೋದಂತೆ, ಸಣ್ಣಪುಟ್ಟ ಮನಸ್ತಾಪಗಳು ಮನಸ್ಸು ಕೆಡಿಸಿದಂತೆ ನಂಬಿಕೆ ಎಂಬ ಮೂಲಪತ್ರ ಕ್ಷೀಣಿಸುತ್ತಾ ಹೋಗಿ ವಿವಾದವಾಗಿ ಮಾರ್ಪಾಡಾಗುವುದು ದುರದೃಷ್ಟಕರ. ಒಂದು ವಿವಾದ ಬಗೆಹರಿಯಬಹುದು, ಆದರೆ ಇಂತಹ ವಿವಾದಗಳಿಗೆ ಕೊನೆ ಎಂಬುದೇ ಇಲ್ಲ. ಕೆಲವು ದೊಡ್ಡದಾಗಿ ಸದ್ದು ಮಾಡಿದರೆ, ಇನ್ನು ಕೆಲವು ಸಣ್ಣದಾಗಿ ಬಂದು ಹೋಗುತ್ತವೆ.
ಯಶಸ್ಸಿನ ಖುಷಿ ಮತ್ತು ಬೇಸರ
ಒಂದು ಸಿನಿಮಾದ ಗೆಲುವು ಆಯಾ ತಂಡಕ್ಕೆ, ಆಯಾ ಹೀರೋಗೆ ಖುಷಿ ಕೊಟ್ಟರೆ, ಅದೇ ಯಶಸ್ಸು ಆ ಹೀರೋನ ನಂಬಿಕೊಂಡು ಮುಂದಿನ ಚಿತ್ರಕ್ಕೆ ಅಣಿಯಾಗಿದ್ದ ನಿರ್ಮಾಪಕ, ನಿರ್ದೇಶಕನಿಗೆ ಸಣ್ಣ ಬೇಸರ ತರುತ್ತದೆ. ಅದು ಹೇಗೆ ಎಂದು ನೀವು ಕೇಳಬಹುದು. ಸಾಮಾನ್ಯವಾಗಿ ಹೀರೋಗಳ ಏಕಕಾಲಕ್ಕೆ ಎರಡೂ¾ರು ಸಿನಿಮಾಗಳನ್ನು ಒಪ್ಪಿಕೊಂಡು, ಅಡ್ವಾನ್ಸ್ ಹಣ ಪಡೆದಿರುತ್ತಾರೆ. ಆದರೆ, ಮೊದಲು ಬಿಡುಗಡೆಯಾದ ತನ್ನ ಚಿತ್ರ ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗಿ, ಸ್ಟಾರ್ ಡಮ್ ಹೆಚ್ಚಾಗಿ ತನ್ನ “ಕೀರ್ತಿ’ ಊರೆಲ್ಲಾ ಪಸರಿಸಿದಾಗ ತಾನು ಹಿಂದೆ ಕಮಿಟ್ ಆಗಿದ್ದ ಸಿನಿಮಾಗಳ ಆಸಕ್ತಿ ಕಳೆದುಕೊಳ್ಳುತ್ತಾನೆ. ತಾನು ಈ ಹಿಂದೆ ಕಮಿಟ್ ಆದ ಸಿನಿಮಾ ಇವತ್ತಿನ ತನ್ನ ಮಾರ್ಕೆಟ್ ವ್ಯಾಲ್ಯೂಗೆ “ಸಣ್ಣ’ದಾಗಿ ಕಾಣುತ್ತದೆ. ಹಾಗಾಗಿ, ತನ್ನ ಸರತಿಯಲ್ಲಿದ್ದ ಸಿನಿಮಾವನ್ನು ಬಿಟ್ಟು, ಹೊಸದನ್ನು ಹುಡುಕಲಾರಂಭಿಸುತ್ತಾನೆ. ಇದು ಅಷ್ಟು ವರ್ಷ ಆ ಹೀರೋಗಾಗಿ ಕಾದ ನಿರ್ಮಾಪಕರಿಗೆ ನಿರಾಸೆ ಉಂಟು ಮಾಡುವ ಜೊತೆಗೆ ಸಣ್ಣ ಅಸಮಾಧಾನಕ್ಕೂ ಕಾರಣವಾಗುತ್ತದೆ. ಸೂಪರ್ ಹಿಟ್ ಆಗಿ, ಸ್ಟಾರ್‌ಡಮ್ ಹೆಚ್ಚಿಸಿಕೊಂಡ ಹೀರೋ ತಾನು ಕಮಿಟ್ ಆದ ಅಡ್ವಾನ್ಸ್ ಹಣವನ್ನು ನಿರ್ಮಾಪಕರಿಗೆ ವಾಪಾಸ್ ಮಾಡಬಹುದು. ಆದರೆ, ಹೀರೋಗಾಗಿ ಕಾದ ನಿರ್ಮಾಪಕರ ಮನಸ್ಸಿನಲ್ಲಾದ ಅಸಮಾಧಾನ, ಬೇಸರವನ್ನು ಶಮಗೊಳಿಸುವುದು ಕಷ್ಟ. ಈ ತರಹದ ಉದಾಹರಣೆಗಳು ಕನ್ನಡ ಚಿತ್ರರಂಗ ಸೇರಿ ಬೇರೆ ಬೇರೆ ಚಿತ್ರರಂಗಗಳಲ್ಲಿ ಕಾಣಸಿಗುತ್ತವೆ.
ರವಿಪ್ರಕಾಶ್ ರೈ