Advertisement

ಶ್ರೀಗಂಧ ಬೆಳೆ ರೈತರಿಗೆ ವರದಾನ: ಕನ್ನಂಗಿ ಶೇಷಾದ್ರಿ

12:00 PM Feb 16, 2019 | |

ತೀರ್ಥಹಳ್ಳಿ: ಅರಣ್ಯೇತರ ಪ್ರದೇಶದ ಕೃಷಿ ಜಮೀನುಗಳಲ್ಲಿ ರೈತರು ಶ್ರೀಗಂಧ ಗಿಡಗಳನ್ನು ನೆಟ್ಟು ಸಂರಕ್ಷಿಸಿ ಪೋಷಿಸಿ ಸಮೃದ್ಧವಾಗಿ ಬೆಳೆಸಬಹುದು. ಶ್ರೀಗಂಧ ಬೆಳೆ ರೈತರಿಗೆ ವರದಾನವಿದ್ದಂತೆ. ಕೃಷಿ ಜಮೀನುಗಳಲ್ಲಿ ಗಂಧದ ಸಸಿಗಳನ್ನು ನೆಡಲು ರೈತರನ್ನು ಪ್ರೇರೇಪಿಸುವ ಕೆಲಸವೇ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ತುಂಗಾ ವಿದ್ಯಾವರ್ಧಕ ಸಂಘದ ನಿರ್ದೇಶಕ, ಪ್ರಗತಿಪರ ಕೃಷಿಕ ಕನ್ನಂಗಿ ಶೇಷಾದ್ರಿ ಹೇಳಿದರು.

Advertisement

ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ತುಂಗಾ ವಿದ್ಯಾವರ್ಧಕ ಸಂಘ, ಬೆಂಗಳೂರಿನ ಮರವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ತೋಟಗಾರಿಕೆ ಇಲಾಖೆ, ವೆನಿಲ್ಲಾ ಬೆಳೆಗಾರರ ಸಂಘ ಹಾಗೂ ತುಂಗಾ ಕಾಲೇಜಿನ ಮಾನವಿಕ ಸಂಘ ಮತ್ತು ಯೋಜನಾ ವೇದಿಕೆ ಸಹಯೋಗದಲ್ಲಿ ನಡೆದ ಶ್ರೀಗಂಧ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಬೆಳೆದ ಶ್ರೀಗಂಧದ ಗಿಡಗಳಿಗೆ ಪ್ರೋತ್ಸಾಹದ ರೂಪದಲ್ಲಿ ಸರ್ಕಾರ ಅನುದಾನ ನೀಡುತ್ತಿದೆ. ಬೆಳೆದ ಬಲಿತ ಶ್ರೀಗಂಧದ ಮರಗಳಿಂದ ತಮ್ಮ ಆರ್ಥಿಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು. 

ಬೆಂಗಳೂರಿನ ಮರವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಸಂಶೋಧನಾಧಿಕಾರಿ ಡಾ| ಪಿ.ವಿ. ಸೋಮಶೇಖರ್‌, ಶ್ರೀಗಂಧ ಬೆಳೆಯುವ ವಿಧಾನ ಮತ್ತು ಆರ್ಥಿಕತೆಯ ವಿಚಾರಗಳ ಬಗ್ಗೆ ಮಾತನಾಡಿ, ಶ್ರೀಗಂಧದ ಕೃಷಿಯಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿ ಶ್ರೀಗಂಧವು ಮೂಲತಃ ಭಾರತದಾಗಿದ್ದು, ಪುರಾಣದ ಮಹಾಭಾರತ ಹಾಗೂ ರಾಮಾಯಣ ಕಾಲದಲ್ಲೂ ಶ್ರೀಗಂಧದ ಬಳಕೆಯ ಬಗ್ಗೆ ಉಲ್ಲೇಖವಿದೆ. 

2001 ರಲ್ಲಿ ಸರ್ಕಾರ ಶ್ರೀಗಂಧದ ಮೇಲಿನ ನಿರ್ಬಂಧವನ್ನು ತೆಗೆದಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ರೈತರದ್ದಾಗಿದೆ ಎಂದರು. ಶ್ರೀಗಂಧದ ರಕ್ಷಣೆ ಕೊಯ್ಲು ಮತ್ತು ಮಾರುಕಟ್ಟೆಯ ಬಗ್ಗೆ ಮಾತನಾಡಿದ ಬೆಂಗಳೂರಿನ ಮರವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿ ಡಾ| ಕೆ.ಟಿ.ಚಂದ್ರಶೇಖರ್‌ ಮಾತನಾಡಿ, ರೈತರು ಶ್ರೀಗಂಧ ಬೆಳೆಯ ಬೆಳೆಯುವ ಬಗ್ಗೆ ಜಾಗೃತರಾಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿದೆ. ರಾಜ್ಯದಲ್ಲಿಂದು ಶ್ರೀಗಂಧ ಮತ್ತು ಶ್ರೀಗಂಧದ ಎಣ್ಣೆಯ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಎಣ್ಣೆಯ ಮೇಲಿನ ಬೇಡಿಕೆಯು ಹೆಚ್ಚಾಗಿದೆ. 2000ನೇ ಇಸವಿಯಲ್ಲಿ ಒಂದು ಕೆಜಿ ಗಂಧದ ಎಣ್ಣೆಗೆ 18 ಸಾವಿರ ರೂ. ಬೆಲೆ ಇದ್ದರೆ 2014ರಲ್ಲಿ ಒಂದು ಕೆ.ಜಿ ಎಣ್ಣೆಗೆ 1ಲಕ್ಷದ 35 ಸಾವಿರ ರೂ.ಆಗಿದೆ. 

Advertisement

ಹಾಗೆಯೇ 1ಕೆಜಿ ಗಂಧದ ತುಂಡಿಗೆ 5 ರಿಂದ 6 ಸಾವಿರ ರೂ ಹೆಚ್ಚಳಗೊಂಡಿದೆ ಎಂದು ಮಾಹಿತಿ ನೀಡಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೌಲಾನಿ ಧರ್ಮಯ್ಯ, ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಗಣಪತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next