Advertisement

ಉಪ್ಪಿ ನೂತನ ಪಕ್ಷದ ಹೆಸರು “KPJP” ಬದಲಾವಣೆಯೇ ಪಕ್ಷದ ಗುರಿ

11:47 AM Oct 31, 2017 | Sharanya Alva |

ಬೆಂಗಳೂರು: ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್, ಖ್ಯಾತ ನಿರ್ದೇಶಕ ನಟ ಉಪೇಂದ್ರ ಅವರ ಪಕ್ಷದ ಹೆಸರು ಮಂಗಳವಾರ ಕೊನೆಗೂ ಘೋಷಿಸುವ ಮೂಲಕ ರಾಜಕೀಯ ಪಕ್ಷ ಸ್ಥಾಪನೆಯಾದಂತಾಗಿದೆ.

Advertisement

ಮಂಗಳವಾರ ಗಾಂಧಿಭವನಕ್ಕೆ ಖಾಕಿ ಡ್ರೆಸ್ ಧರಿಸಿ ಆಗಮಿಸಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಪೇಂದ್ರ ಅವರು, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ) ಎಂಬುದಾಗಿ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.

ಉಪೇಂದ್ರ ಅವರು ಹೇಳೋದೇನು?

ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯಾಗಬೇಕು. ಬದಲಾವಣೆ ಎಲ್ಲದರಲ್ಲೂ ಆಗಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನರೇ ಬದಲಾವಣೆಯ ಸೃಷ್ಟಿಕರ್ತರು. ನಾನು ತುಂಬಾ ಯುವಕರಲ್ಲಿ ಕೇಳಿದ್ದೆ, ನೀವು ಏನು ಓದಿದ್ದೀರಿ, ಇಂಜಿನಿಯರ್, ಟೆಕ್ನಿಶಿಯನ್ ಹೀಗೆ ಅವರವರ ಕಲಿಕೆ ಬಗ್ಗೆ ಹೇಳಿದ್ದರು. ಕೆಲಸ ಸಿಕ್ಕಿದೆಯಾ ಅಂತ ಕೇಳಿದರೆ, ಇಲ್ಲಾ ಸರ್..ಟ್ರೈನಿಂಗ್ ಇಲ್ಲದೆ ಕೆಲಸ ಸಿಗುತ್ತಾ? ಅಂತ ಹೇಳಿದರು. ಎಷ್ಟು ತಿಂಗಳು ಟ್ರೈನಿಂಗ್ ಅಂತ ಕೇಳಿದ್ರೆ 6 ತಿಂಗಳು ಅಂತ ಹೇಳಿದರು. ಹೌದಾ ಹಾಗಾದ್ರೆ 5,6 ವರ್ಷ ಕಲಿತರೂ ಸಿಗದ ಅನುಭವ, 6 ತಿಂಗಳ ಟ್ರೈನಿಂಗ್ ನಲ್ಲಿ ಸಿಗುತ್ತೆ ಅಂದರೆ ಆರು ತಿಂಗಳ ಓದಿಗೆ ನಾಲ್ಕು ವರ್ಷ ಯಾಕೆ ವೇಸ್ಟ್ ಮಾಡಬೇಕು. ನಾಲ್ಕು ವರ್ಷಕ್ಕೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕು. ಹೀಗೆ ಕೃಷಿ, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲದರಲ್ಲೂ ನಾವು ಬದಲಾವಣೆ ಪರ್ವದತ್ತ ಹೆಜ್ಜೆ ಹಾಕಬೇಕು ಎಂಬುದು ಉಪೇಂದ್ರ ಅವರ ವಿಶ್ಲೇಷಣೆಯಾಗಿದೆ.

ನೀವು ಮುಂದೆ ಬೇರೆ ಯಾವುದಾದರು ಪಕ್ಷದ ಜತೆ ಸೇರ್ಪಡೆಯಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪೇಂದ್ರ ಅವರು,  ಇದು ನಿಜಕ್ಕೂ ಒಳ್ಳೇಯ ಪ್ರಶ್ನೆ. ನಾವು ಅಬ್ಬಬ್ಬಾ ಅಂದರೆ ನಾಲ್ಕು, ಐದು ಸ್ಥಾನ ಗೆಲ್ಲಬಹುದು, ನಂತರ ಬೇರೆ ಪಕ್ಷ ಸೇರ್ಪಡೆ ಅನಿವಾರ್ಯ ಎಂಬುದು ಎಲ್ಲರ ಭಾವನೆ. ಆದರೆ ನಾವು ಯಾವ ಪಕ್ಷದ ಜತೆಯೂ ಸೇರಲ್ಲ, ಆರಂಭದಲ್ಲೇ ಅಫಿಡವಿತ್ ಮಾಡಿಸಿಕೊಳ್ಳುತ್ತೇವೆ.

Advertisement

ಆರಂಭಿಕವಾಗಿ ಗಾಯಕಿ ಶಮಿತ ಮಲ್ನಾಡ್ ಅವರಿಂದ ಭಕ್ತಿಗೀತೆ, ಖ್ಯಾತ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರು ಕಲಾಕೃತಿ ಬಿಡಿಸಿದರು.

ನಾನೊಂದು ವೇದಿಕಯನ್ನಷ್ಟೇ ನಿರ್ಮಾಣ ಮಾಡಿದ್ದೇನೆ. ಎಲ್ಲರೂ ಸೇರಿದರೆ ಪ್ರಜಾಕೀಯ ಮಾಡಬಹುದು. ಎಲ್ಲರೂ ಸೇರಿ ಈ ಪಕ್ಷವನ್ನು ಕಟ್ಟುತ್ತಿದ್ದೇವೆ. ನವೆಂಬರ್ 10ಕ್ಕೆ ಪಕ್ಷದ ವೆಬ್ ಸೈಟ್ ಲಾಂಚ್ ಆಗಲಿದೆ. ನಮಗೆ ಸಾಧಿಸುವ ಕನಸಿರುವ ನಾಯಕರು ಬೇಕಾಗಿದ್ದಾರೆ. ಎಲ್ಲಾ ರಂಗದಲ್ಲಿಯೂ ಬದಲಾವಣೆ ಆಗಬೇಕಾಗಿದೆ. ಇದೇ ನನ್ನ ಕನಸು, ಆಶಯ ಮತ್ತು ಪ್ರಯತ್ನವಾಗಿದೆ. ಗೆದ್ದ ಮೇಲೂ ಲೀಡರ್ಸ್, ವರ್ಕಸ್ಸ್ ಆಗಿಯೇ ಇರಬೇಕು ಎಂದು ಉಪ್ಪಿ ಹೇಳಿದರು.

ಉಪ್ಪಿ ಭಾಷಣದ ಹೈಲೈಟ್ಸ್:

ರಾಜಕೀಯ ವ್ಯವಸ್ಥೆಯಲ್ಲಿ ಹಣಬಲ ಬೇಕು, ಜಾತಿ ಬಲಬೇಕು. ಇಲ್ಲಿ ಅದ್ಯಾವುದೂ ಇರುವ ಅವಶ್ಯಕತೆ ಇಲ್ಲ

ನಿಮಗೆ ಅಭಿವೃದ್ಧಿಯ ಬಗ್ಗೆ ಒಂದು ಐಡಿಯಾ ಇದ್ರೆ ಸಾಕು

ನನ್ನ ಪ್ರಕಾರ ಎಲ್ಲರೂ ಪ್ರಜ್ಞಾವಂತರೇ

ಮೋದಿ ಸ್ಮಾರ್ಟ್ ಸಿಟಿಯ ಕನಸು ಕಂಡಿದ್ದಾರೆ

ನಾನು ಹಳ್ಳಿಗಳು ಸ್ಮಾರ್ಟ್ ಆಗಬೇಕು ಅಂತ ಹೇಳ್ತಿದ್ದೇನೆ. ಹಳ್ಳಿಗಳು ಸ್ಮಾರ್ಟ್ ಆದರೆ ಸಿಟಿ ತಂತಾನೆ ಸ್ಮಾರ್ಟ್ ಆಗುತ್ತೆ

ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಆಗಬೇಕು

ನನ್ನ ಸಿನಿಮಾ ಬುದ್ಧಿವಂತರಿಗೆ, ಪಕ್ಷ ಪ್ರಜ್ಞಾವಂತರಿಗೆ

ಉಪ್ಪಿ ಪಕ್ಷದ ನೂತನ ಪಕ್ಷದ ಹೆಸರು “ಕೆಪಿಜೆಪಿ”

ನಮಗೆ ಜನರೇ ಹೈಕಮಾಂಡ್, ಬೇರೆ ಯಾರು ಹೈಕಮಾಂಡ್ ಇಲ್ಲ

ಸೋಲು ಗೆಲುವು ನಂತರ ಮೊದಲು ಪ್ರಯತ್ನ ಮಾಡಬೇಕು

ಪಾರದರ್ಶಕತೆಯೇ ಪಕ್ಷದ ಮೊದಲ ಸಿದ್ಧಾಂತ

ನನಗೆ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಬರಬೇಕು ಅಂತ ಇದೆ

Advertisement

Udayavani is now on Telegram. Click here to join our channel and stay updated with the latest news.

Next