ಪುತ್ತೂರು: ನಾನ್ ಸಿಆರ್‌ಝಡ್ ಮೂಲಕ ಕಾನೂನುಬದ್ಧವಾಗಿ ಅಧೀಕೃತವಾಗಿ ಮರಳುಗಾರಿಕೆ ನಡೆಯುತ್ತಿದೆ. ನಾನ್ ಸಿ.ಆರ್.ಜಡ್‌ನಲ್ಲಿ ಮರಳಿಗೆ ಅಭಾವವಿಲ್ಲ. ಆದರೆ ಕಾನೂನು ಬಾಹಿರವಾಗಿ ನಡೆಯುವ ಮರಳುಗಾರಿಕೆಯಿಂದ ನಮಗೆ ತೊಂದರೆ ಆಗಿದೆ. ಕಾನೂನು ಬಾಹಿರವಾಗಿ ಅನಧಿಕೃತವಾಗಿ ನಡೆಯುವ ಮರಳುಗಾರಿಕೆ ವಿರುದ್ಧ ಸರಕಾರ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ದ.ಕ. ಜಿಲ್ಲಾ ನಾನ್ ಸಿಆರ್‌ಝಡ್ ಮರಳುಗಾರಿಕೆ ಮಾರಾಟಗಾರರ ಸಂಘದ ಅಧ್ಯಕ್ಷ ದಿನೇಶ್ ಮೆದು ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಸರಕಾರದಿಂದ ಅಧಿಕೃತವಾಗಿ ಗುತ್ತಿಗೆ ಪಡೆದು ಮರಳು ಮಾಡುತ್ತಿರುವ ನಮ್ಮ ಬಗ್ಗೆ ಮಾಹಿತಿ ಬೇಕಾದಲ್ಲಿ ಗಣಿ ಇಲಾಖೆಯನ್ನು ಸಂಪರ್ಕಿಸಬಹುದು. ನಮ್ಮ ಎಲ್ಲ ಬ್ಲಾಕ್‌ಗಳಲ್ಲೂ ವೇ ಬ್ರಿಜ್ ಅಳವಡಿಸಲಾಗಿದೆ. ಅಲ್ಲಿಂದ ಜಿಪಿಎಸ್ ಮೂಲಕವೇ ಮರಳು ಸಾಗಾಟ ನಡೆಯುತ್ತದೆ. ನಮಗೆ ಕಿರುಕುಳ ಕೊಡುವುದು ಬಿಟ್ಟು ಕಾನೂನು ಬಾಹಿರವಾಗಿ ಸಾಗಾಟವಾಗುತ್ತಿರುವ ಮರಳುಗಾರಿಕೆ ಕುರಿತು ಕಠಿನ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ನಮ್ಮ ಬ್ಲಾಕ್‌ಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ತನಕ ಕಾರ್ಯ ನಿರ್ವಹಿಸಲಾಗುತ್ತದೆ. ರಾತ್ರಿ ಹೊತ್ತು ಮರಳು ಸಾಗಾಟ ಮಾಡುವುದಿಲ್ಲ. ಆದರೆ ರಾತ್ರಿ ಸಮಯ ರಾಜಾರೋಷವಾಗಿ ಕಾನೂನು ಬಾಹಿರ ಮರಳು ಸಾಗಾಟ ನಡೆಯುತ್ತಿದೆ. ಅದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು. ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ ಎಂದವರು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ, ಉಪಾಧ್ಯಕ್ಷ ಮೋನು ಬೆಳ್ತಂಗಡಿ ಮುಂತಾದವರು ಉಪಸ್ಥಿತರಿದ್ದರು.