ಸಿದ್ದಾಪುರ: ಸಮೀಪದ ಕಕ್ಕರಗೋಳ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಾಟ ನಿರಾತಂಕವಾಗಿ ನಡೆಯುತ್ತಿದ್ದು, ಈ ಅಕ್ರಮ ಮರಳು ಸಾಗಾಟ ತಡೆಯಲು ರಚಿಸಿರುವ ಜಾಗೃತ ದಳ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದರಿಂದ ಸರಕಾರದ ಖಜಾನೆ ಸೇರಬೇಕಾದ ಕೋಟ್ಯಂತರ ರೂ. ಮರಳು ಕಳ್ಳರ ಪಾಲಾಗುತ್ತಿದೆ.
ಮರಳು ಸಾಗಾಟ ಮಾಡಲು ಯಾವುದೇ ಪರವಾನಗಿ ಇಲ್ಲದೇ ಕಕ್ಕರಗೋಳ ಬಳಿಯ ತುಂಗಭದ್ರಾ ನದಿಯಲ್ಲಿ ನೂರಾರು ಕೂಲಿ ಕಾರ್ಮಿಕರ ಮೂಲಕ ನಿತ್ಯ 400ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳ ಮೂಲಕ ಅಕ್ರಮ ಮರಳು ಸಾಗಾಟ ಜಿಲ್ಲೆ ಸೇರಿದಂತೆ ಹೊರಜಿಲ್ಲೆಗಳಿಗೂ ಸಾಗಾಟ ನಡೆದಿದೆ. ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕಾದ ಸ್ಥಳೀಯ ಪೊಲೀಸ್, ಗ್ರಾಪಂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿ ಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಇನ್ನೂ ಸ್ಥಳೀಯ ಕೆಲವರು ದೇವಸ್ಥಾನದ ಜೀರ್ಣೋದ್ಧಾರದ ಹೆಸರಲ್ಲಿ ಕಾನೂನು ಬಾಹಿರವಾಗಿ ಟ್ರ್ಯಾಕ್ಟರ್ ಒಂದಕ್ಕೆ 200 ರೂ. ವಸೂಲಿ ಮಾಡುತ್ತಿದ್ದು, ಮತ್ತು ಟ್ರ್ಯಾಕ್ಟರ್‌ಗೆ ಮರಳು ತುಂಬಿಸಿಕೊಡಲು 800 ರೂ. ಒಟ್ಟು 1,000 ರೂ. ಹಣ ವಸೂಲಿ ಮಾಡುತ್ತಿದ್ದಾರೆ. ದಿನವೊಂದಕ್ಕೆ 300ರಿಂದ 400 ಟ್ರ್ಯಾಕ್ಟರ್ ಗಳ ಮರಳು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.
ಹದಗೆಟ್ಟ ರಸ್ತೆ: ಈ ಅಕ್ರಮ ಮರಳು ಸಾಗಾಟದಿಂದಾಗಿ ಬೆನ್ನೂರು, ಉಳೇನೂರು ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು, ಎಲ್ಲೆಂದರಲ್ಲಿ ಬೃಹತ್ ಗುಂಡಿಗಳು ಬಿದ್ದಿವೆ. ಅಲ್ಲದೇ ನಿತ್ಯ ಹಗಲು-ರಾತ್ರಿ ಎನ್ನದೇ ಮರಳು ಸಾಗಾಟದಿಂದಾಗಿ ರಸ್ತೆ ಪಕ್ಕಪಕ್ಕದವರಿಗೆ ಟ್ರ್ಯಾಕ್ಟರ್ ಶಬ್ಧದಿಂದ ನೆಮ್ಮದಿ ಇಲ್ಲದಂತಾಗಿದೆ. ಅತಿಯಾಗಿ ವೇಗ (ಓವರ್ ಸ್ಪಿಡ್)ನಿಂದ ಚಲಿಸುತ್ತಿರುವ ಟ್ರ್ಯಾಕ್ಟರ್‌ಗಳಿಂದಾಗಿ ಸಾರ್ವಜನಿಕರು ರಸ್ತೆಮೇಲೆ ಓಡಾಡೋದಕ್ಕೂ ಭಯ ಪಡುತ್ತಿದ್ದಾರೆ. ಈ ಹಿಂದೆ ಅಕ್ರಮ ಮರಳು ಟಿಪ್ಪರ್ ಹರಿದು ಉಳೇನೂರ ಕ್ಯಾಂಪ್‌ನ ವ್ಯಕ್ತಿ ಮೃತಪಟ್ಟಿದ್ದರು. ಇತ್ತೀಚೆಗೆ ಅದೇ ಕ್ಯಾಂಪ್‌ನ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆಗಳು ನಡೆದರು ಪೊಲೀಸ್ ಇಲಾಖೆ ಮತ್ತು ವಿವಿಧ ಇಲಾಖೆಯವರು ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ಸಾರ್ವಜನಿಕರು ಅಧಿ ಕಾರಿಗಳ ಮೇಲೆ ಆರೋಪಿಸಿತ್ತಾರೆ.
ನಿರಂತರ ಮರಳು ಸಾಗಾಟದಿಂದಾಗಿ ಜಲಚರ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅಲ್ಲದೇ ಇದೆ ತುಂಗಭದ್ರಾ ನದಿಯ ನೀರು ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಅನೇಕ ಹಳ್ಳಿ ಮತ್ತು ಪಟ್ಟಣಗಳಿಗೆ ಕುಡಿಯುವ ನೀರಿನ ಮೂಲವಾಗಿದೆ. ನಿರಂತರ ಮರಳು ಸಾಗಾಟದಿಂದ ನೀರು ಕಲುಷಿತಗೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಕಕ್ಕರಗೋಳ ಬಳಿ ಹರಿಯುವ ತುಂಗಭದ್ರಾ ನದಿ ಪಾತ್ರದಿಂದ ಅಕ್ರಮ ಮರಳು ಸಾಗಾಟದ ಬಗ್ಗೆ ಮಾಹಿತಿ ಬಂದಿದ್ದು, ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಸುರೇಶ ತಳವಾರ, ಸಿಪಿಐ
-ಸಿದ್ದನಗೌಡ ಹೊಸಮನಿ