ಉಡುಪಿ: ಸಿಆರ್‌ಝಡ್ ವ್ಯಾಪ್ತಿಯಲ್ಲಿ ಎಲ್ಲ 171 ಮಂದಿ ಸಾಂಪ್ರದಾಯಿಕ ಮರಳು ಪರವಾನಿ ಗೆದಾರರಿಗೂ ಅನುಮತಿ ನೀಡಬೇಕು. ಜನರಿಗೆ ಮರಳು ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಮಣಿಪಾಲದಲ್ಲಿರುವ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸೋಮವಾರ ಆರಂಭಗೊಂಡಿತು.
ಶಾಸಕ ರಘುಪತಿ ಭಟ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ನೋಂದಾಯಿತ ಪರವಾನಿಗೆದಾರರಿಗೂ ಅನುಮತಿ ನೀಡುವಂತೆ ಜ. 14ಕ್ಕೆ ಜಿಲ್ಲಾಧಿಕಾರಿಯವರಿಗೆ ಆದೇಶ ಕಳುಹಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಇದುವರೆಗೂ ಏಳು ಸದಸ್ಯರ ಸಮಿತಿ ಸಭೆ ಮಾಡಿಲ್ಲ. ಗುರುತಿಸಲಾಗಿರುವ ಮರಳುದಿಬ್ಬಗಳ ತೆರವಿಗೆ ಕೆಎಸ್‌ಸಿಝಡ್‌ಎಂಎಗೆ ವರದಿ ಸಲ್ಲಿಸಿ ಒಪ್ಪಿಗೆ ಪಡೆದುಕೊಂಡಿಲ್ಲ. ಜಿಲ್ಲಾಡಳಿತದ ತಪ್ಪು ನಿಲುವಿನಿಂದಾಗಿ ಸಮಸ್ಯೆ ಉಂಟಾಗಿದೆ. ಎಲ್ಲ ಪರವಾನಿಗೆ ದಾರರಿಗೂ ಅವಕಾಶ ನೀಡಿ ಮರಳು ಸಮಸ್ಯೆ ನೀಗಿಸಬೇಕು. ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಲಾಲಾಜಿ ಆರ್. ಮೆಂಡನ್, ಸುನಿಲ್ ಕುಮಾರ್, ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಬೆಳಪು, ಜೆಡಿಎಸ್ ಮುಖಂಡ ಸಬ್ಲಾಡಿ ಮಂಜಯ್ಯ ಶೆಟ್ಟಿ, ಹೋರಾಟ ಸಮಿತಿಯ ಸತ್ಯರಾಜ್‌ಬಿರ್ತಿ, ಪ್ರವೀಣ್ ಸುವರ್ಣ, ಚಂದ್ರಪೂಜಾರಿ,ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಅಕ್ಟೋಬರ್‌ನಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದಾಗ 8ನೇ ದಿನ ಗಣಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಆಗಮಿಸಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಧರಣಿ ಅಂತ್ಯಗೊಳಿಸಲಾಗಿತ್ತು.
ಇಂದು ಗಣಿ ಸಚಿವರ ಮಾತುಕತೆ?
ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜಶೇಖರ ಬಿ. ಪಾಟೀಲ್ ಜ. 29ರಂದು ಉಡುಪಿಗೆ ಆಗಮಿಸಿ ಧರಣಿ ನಿರತರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.