Advertisement

ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ: ಬಗೆಹರಿಯದ ಗೊಂದಲ, ಮತ್ತೆ ಮರಳು ಅಭಾವ

09:04 AM Nov 10, 2022 | Team Udayavani |

ಮಂಗಳೂರು : ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಗೊಂದಲ ಮುಂದುವರಿದಿರುವಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮರಳು ಅಭಾವ ಸೃಷ್ಟಿಯಾಗಿದೆ.

Advertisement

ಪ್ರಸ್ತುತ ನಾನ್‌ ಸಿಆರ್‌ಝಡ್‌ ಹಾಗೂ ಶಂಭೂರು ಹಾಗೂ ಅದ್ಯಪಾಡಿ ಯಾರ್ಡ್‌ನಿಂದ ಮರಳು ಸರಬರಾಜು ಆಗುತ್ತಿದ್ದರೂ ಇದರ ಗುಣಮಟ್ಟದ ಬಗ್ಗೆ ಎದ್ದಿರುವ ಅಪಸ್ವರ ಮತ್ತು ಅಸಮರ್ಪಕ ಸರಬರಾಜು ವ್ಯವಸ್ಥೆ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳ ಮರಳು ಆವಶ್ಯಕತೆಯನ್ನು ನೀಗಿಸಲು ವಿಫಲವಾಗಿದೆ. ಮುಖ್ಯವಾಗಿ ವೈಯುಕ್ತಿಕ ಮನೆಗಳನ್ನು ನಿರ್ಮಾಣ ಮಾಡುವವರು ಕಾಮಗಾರಿ ಸ್ಥಗಿತಗೊಳಿಸಿ ಮರಳಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದರವೂ ದುಬಾರಿಯಾಗಿದೆ ಎಂದು ಮನೆ ನಿರ್ಮಾಣಗಾರರು ಹೇಳುತ್ತಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಇದೀಗ ಮತ್ತೆ ಮರಳು ಸಮಸ್ಯೆ ಸೃಷ್ಟಿ ಯಾಗಿದ್ದು ನಿರ್ಮಾಣ ಕಾಮಗಾರಿಗಳಿಗೆ ಅವಶ್ಯ ಮರಳು ಕೊರತೆ ಎದುರಾಗಿದೆ. ಇದರಿಂದಾಗಿ ಕಾಮ ಗಾರಿಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ಜಿಲ್ಲಾ ಸಿವಿಲ್‌ ಕಂಟ್ರಾಕ್ಟರ್‌ ಅಸೋಸಿಯೇಶನ್‌ನ
ಮಹಾಬಲ ಕೊಟ್ಟಾರಿಯವರು ಉದಯವಾಣಿಗೆ ತಿಳಿಸಿದ್ದಾರೆ.

ಅನುಮತಿ: ಬಗೆಹರಿಯದ ಗೊಂದಲ
ದ.ಕ. ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ವಿಧಿಸಿದ್ದ ನಿಷೇಧವನ್ನು ಪ್ರಶ್ನಿಸಿ ಒಟ್ಟು 57 ಮಂದಿ ತಾತ್ಕಾಲಿಕ ಪರವಾನಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಸಿಆರ್‌ಝಡ್‌ ವಲಯದಲ್ಲಿ ಯಂತ್ರೋಪಕರಣಗಳನ್ನು ಬಳಸದೆ ಮಾನವ ಶ್ರಮದ ಮೂಲಕ ಮರಳುಗಾರಿಕೆ ನಡೆಸುವ ಬಗ್ಗೆ ಆದೇಶ ನೀಡಿದೆ. ಆದರೆ ಈ ಆದೇಶದ ಅನುಷ್ಟಾನದ ಕುರಿತಂತೆ ಜಿಲ್ಲಾಡಳಿತದ ಗೊಂದಲದಿಂದಾಗಿ ಇನ್ನೂ ಮರಳುಗಾರಿಕೆ ಆರಂಭವಾಗಿಲ್ಲ.

ತಾತ್ಕಾಲಿಕ ಪರವಾನಿಗೆದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ದ.ಕ.ಜಿಲ್ಲಾಡಳಿತದ ಜತೆಗೆ ರಾಜ್ಯ ಸರಕಾರ ಕೂಡಾ ಪ್ರತಿವಾದಿಗಳಾಗಿದ್ದು ಇದರಿಂದಾಗಿ ಅನುಮತಿ ನೀಡಲು ರಾಜ್ಯ ಸರಕಾರದಿಂದ ಸೂಚನೆ ಅಗತ್ಯವಿದೆ ಎಂಬ ನೆಲೆಯಲ್ಲಿ ಈ ಬಗ್ಗೆ ವಿವರಣೆ ಕೋರಿ ಜಿಲ್ಲಾಡಳಿತ ಈಗಾಗಲೇ ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವುದಾಗಿ ನಿಕಟಪೂರ್ವ ಜಿಲ್ಲಾಧಿಕಾರಿ ಡಾ| ಕೆ.ವಿ.ರಾಜೇಂದ್ರ ತಿಳಿಸಿದ್ದರು. ಸಿಆರ್‌ಝಡ್‌ ವಲಯದಲ್ಲಿ ಸಾಂಪ್ರಾದಾಯಿಕ ಮರಳುಗಾರಿಕೆಗೆ ಸಂಬಂಧಿಸಿ ಜಿಲ್ಲಾಡಳಿತ ವಿಧಿಸಿದ್ದ ನಿಷೇಧವನ್ನು ಹೈಕೋರ್ಟ್‌ ರದ್ದು ಪಡಿಸಿ ಮರಳುಗಾರಿಕೆಗೆ ಅನುಮತಿ ನೀಡುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಇದಕ್ಕೆ ಮತ್ತೆ ರಾಜ್ಯ ಸರಕಾರದ ಅನುಮತಿ ಅವಶ್ಯವಿರುವುದಿಲ್ಲ ಎಂಬುದು ಅರ್ಜಿ ಸಲ್ಲಿಸಿದ್ದ ತಾತ್ಕಾಲಿಕ ಪರವಾನಿಗೆದಾರರ ವಾದವಾಗಿದೆ.

Advertisement

ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ನಿಷೇಧ ಕೋರಿ ಅಲ್ಲಿನ ಕೆಲವು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹಸಿರುಪೀಠ ಅಲ್ಲಿ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿ 2022ರ ಮೇ 18 ರಂದು ಆದೇಶ ನೀಡಿತ್ತು. ಇದರಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಮೇ 21 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದರು.ಇದನ್ನು ಪ್ರಶ್ನಿಸಿ 57 ಮಂದಿ ಪರವಾನಿಗೆದಾರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಪರಿಶೀಲಿಸಿ ಕ್ರಮ
ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡುವಂತೆ ತಾತ್ಕಾಲಿಕ ಪರವಾನಿಗೆದಾರರು ಅರ್ಜಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ನಿರ್ಧಾರ ಕೈಗೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ಅರ್ಜಿಯನ್ನು ಸಮಿತಿಗೆ ಕಳುಹಿಸಲಾಗುವುದು. ಸಮಿತಿ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ.

– ರವಿ ಕುಮಾರ್‌ ಎಂ.ಆರ್‌.
ದ.ಕ.ಜಿಲ್ಲಾಧಿಕಾರಿ,ಅಧ್ಯಕ್ಷರು, ಜಿಲ್ಲಾ ಮರಳು ಉಸ್ತುವಾರಿ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next