Advertisement

ನದಿ ಹರಿಯುವ ಊರಿನಲ್ಲಿ ಮರಳಿಗೆ ಈಗ ಬರ

10:01 PM Oct 29, 2020 | mahesh |

ಪುತ್ತೂರು: ಹನ್ನೆರಡು ಸಾವಿರ ರೂ.ಗೆ ಸಿಗುತ್ತಿದ್ದ ಮೂರು ಯುನಿಟ್‌ ಮರಳಿಗೆ ಈಗ 18 ರಿಂದ 20 ಸಾವಿರ ರೂ. ಧಾರಣೆ. ಅಷ್ಟಾಗಿಯೂ ಮರಳು ಸಿಕ್ಕರೆ ಆತನ ಪುಣ್ಯ. ಅಸಮರ್ಪಕ ನೀತಿ, ಕಾರ್ಮಿಕರ ಕೊರತೆ ಇತ್ಯಾದಿ ಪರಿಣಾಮ ಜಿಲ್ಲೆಯಲ್ಲಿ ಸಕ್ರಮ ಮರಳುಗಾರಿಕೆ ಸ್ಥಗಿತಗೊಂಡಿದ್ದು, ಇದರ ಪರಿಣಾಮ ತೆರೆಮರೆಯಲ್ಲೇ ಸಾಗಿಸುವ ಮರಳಿನ ಧಾರಣೆಯೀಗ ಗಗನಕ್ಕೇರಿದೆ.

Advertisement

ದೇವರು ಕೊಟ್ಟರೂ ಪೂಜಾರಿ ಬಿಡ
ಈ ಗಾದೆಯಂತೆ ಮರಳಿನ ಸ್ಥಿತಿ ಇದೆ. ಕುಮಾರಧಾರಾ, ನೇತ್ರಾವತಿ, ಪಯಸ್ವಿನಿ, ಉಪನದಿಗಳಾದ ಗೌರಿ ಹೊಳೆಯಲ್ಲಿ ಮರಳಿನ ಲಭ್ಯತೆ ಇದ್ದರೂ ಸರಕಾರದ ನೀತಿಯ ಪರಿಣಾಮ ಮರಳು ತೆಗೆಯುವಂತಿಲ್ಲ. ಹೀಗಾಗಿ ಒಡಲಲ್ಲಿ ಮರಳಿದ್ದರೂ ಬರಿಗೈಯಲ್ಲಿ ಇರುವ ಸ್ಥಿತಿ ಜಿಲ್ಲೆಯ ಜನರದ್ದು. ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕುವ ಸಲುವಾಗಿ ಸರಕಾರ ಹೊಸ ನೀತಿ ತಂದಿದೆ ಎಂದಿದ್ದರೂ ಇದರಿಂದ ಕರಾವಳಿ ಜನರಿಗೆ ಅನುಕೂಲ ಆಗಿಲ್ಲ.

ಜಿಲ್ಲೆಯಲ್ಲಿ ಕಳೆದ ವರ್ಷ ಪರವಾನಿಗೆ ಪಡೆದಿರುವ 15 ಮಂದಿಗೆ ಮರಳುಗಾರಿಕೆಗೆ ಅವಕಾಶ ಇದೆ. ಹೊಸ ನೀತಿ ಅನ್ವಯ ಸಿಆರ್‌ಝೆಡ್‌ನ‌ಲ್ಲಿ 95 ಮಂದಿಗೆ ಅನುಮತಿ ನೀಡಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗದ ಕಾರಣ ಮರಳುಗಾರಿಕೆ ಸ್ಥಗಿತಗೊಂಡಿದೆ.

ಕೋವಿಡ್‌ ಕಾರಣದಿಂದ ಹೊರ ರಾಜ್ಯಕ್ಕೆ ತೆರಳಿರುವ ಕಾರ್ಮಿಕರು ಮರಳಿ ಬರುತ್ತಿದ್ದು, ಮುಂದಕ್ಕೆ ಕಾರ್ಮಿಕರ ಸಮಸ್ಯೆ ನೀಗಲಿದೆ. ಈ ಹಿಂದೆ ಸ್ಟಾಕ್‌ ಮಾಡಿರುವ ಮರಳನ್ನು ಈಗ ಮಾರಾಟ ಮಾಡುತ್ತಿರುವ ಕಾರಣ ಧಾರಣೆ ಹೆಚ್ಚಳವಾಗಿದೆ ಎನ್ನುತ್ತಾರೆ ಮರಳು ಪರವಾನಿಗೆದಾರರೋರ್ವರು.

ಅಕ್ರಮಕ್ಕೆ ಕಾರಣ
ಸಕ್ರಮ ಮರಳುಗಾರಿಕೆ ಸ್ಥಗಿತವಾಗಿರುವ ಕಾರಣ ತೆರೆಮರೆಯಲ್ಲಿ ದುಪ್ಪಟ್ಟು ದರಕ್ಕೆ ಮರಳು ಪೂರೈಕೆ ಮಾಡುವವರ ಪಾಲಿಗೆ ಈಗ ಸುಗ್ಗಿ. ಮೂರು ಯುನಿಟ್‌ ಮರಳಿನಲ್ಲಿ ಆರು ಯುನಿಟ್‌ ಮರಳು ಧಾರಣೆ ಗಿಟ್ಟಿಸಲಾಗುತ್ತಿದೆ. ಅದೂ ಹಗಲು ವೇಳೆ, ಹೇಳಿದ ಸಮಯಕ್ಕೆ ಮರಳು ಸಿಗುತ್ತಿಲ್ಲ. ಮುಸ್ಸಂಜೆ ಹೊತ್ತಲ್ಲಿ, ರಾತ್ರಿ ವೇಳೆ ಸರಬರಾಜುದಾರರು ಹೇಳಿದ ಸಮಯಕ್ಕೆ ಮರಳು ಇಳಿಸಿಕೊಳ್ಳಬೇಕು. ಒಳ್ಳೆಯ ಮರಳೂ ಸಿಗುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಮಣ್ಣೇ ಇರುತ್ತದೆ. ಈ ಮಣ್ಣಿನಂಥ ಮರಳಿಗೂ ವಿಪರೀತ ದುಡ್ಡು ಎನ್ನುತ್ತಾರೆ ಮರಳಿಗಾಗಿ ಕಾಯುತ್ತಿರುವ ಸರಕಾರಿ ವಸತಿ ಸಹಾಯಧನದ ಫಲಾನುಭವಿ ಐತ್ತಪ್ಪ ಸುಳ್ಯ.

Advertisement

ನಿರ್ಮಾಣ ಕಾಮಗಾರಿಗೆ ಕುತ್ತು
ಜಿಲ್ಲೆಯಲ್ಲಿ ಸಾವಿರಾರು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಇವರೆಲ್ಲರೂ ಮರಳಿಗೆ ಪರದಾಡು ತ್ತಿದ್ದಾರೆ. ಆರ್‌ಸಿಸಿ(ಮೌಲ್ಡಿಂಗ್‌) ಹಾಕುವ ಹಂತಕ್ಕೆ ಬಂದರೂ ಮರಳು ದರ ನೋಡಿ ಕಂಗಾಲಾಗಿ ಅರ್ಧಕ್ಕೇ ನಿಲ್ಲಿಸಿದ್ದಾರೆ. ಪ್ರತಿ ಗ್ರಾಮದಲ್ಲಿ 10-15 ಕಟ್ಟಡಗಳು ಮರಳು ಸಿಗದೆ ಕಾಮಗಾರಿ ಸ್ಥಗಿತವಾಗಿದೆ. ಮರಳನ್ನೇ ಆಧರಿಸಿರುವ ಮೋರಿ, ಸಿಸಿ ರಸ್ತೆ, ಸೇತುವೆ, ಚರಂಡಿ, ಕಟ್ಟಡಗಳು ಹೀಗೆ ನಡೆಯುತ್ತಿರುವ ಸರಕಾರಿ ಕಾಮಗಾರಿಗಳಿಗೂ ಮರಳು ಬೇಕೇ ಬೇಕು. ಆದರೆ, ಮರಳು ಮಾತ್ರ ಸಿಗುತ್ತಿಲ್ಲ.

ನೆರೆ ಪ್ರದೇಶದಲ್ಲಿಲ್ಲ ಅಭಾವ
ಬೆಳ್ತಂಗಡಿ: ಎರಡು ವರ್ಷಗಳಿಗೆ ಹೋಲಿಸಿದರೆ ತಾಲೂಕಿನಲ್ಲಿ ಮರಳಿನ ಅಭಾವ ಹೇಳುವಷ್ಟಿಲ್ಲ. ಕಳೆದ ಆಗಸ್ಟ್‌ ನಲ್ಲಿ ಪಶ್ಚಿಮ ಘಟ್ಟದಲ್ಲಿ ಉಂಟಾದ ನೆರೆಯಿಂದ ಹೇರಳ ಮರಳಿನ ದಿಬ್ಬಗಳು ಸೃಷ್ಟಿಯಾಗಿವೆ. ಈ ನಡುವೆ ತೋಟಗಳಲ್ಲಿ ಬಿದ್ದ ಮರಳು ತೆರವಿಗೆ ಜಿಲ್ಲಾಡಳಿತವೇ ಗ್ರಾ.ಪಂ. ಮಟ್ಟ ದಲ್ಲಿ ಪರವಾನಿಗೆ ನೀಡಿದೆ. ನೆರೆಯಿಂದ ತಾಲೂಕಿನಲ್ಲಿ 250ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿದ್ದವು. ಇದರಿಂದ ಪರವಾನಿಗೆ ನೀಡಿದ್ದರೂ ಒಂದೊಂದೆಡೆ ಒಂದೊಂದು ಧಾರಣೆ ವಿಧಿಸಲಾಗುತ್ತಿದೆ ಎಂದು ಎಂಜಿನಿ ಯರ್‌ಗಳು ತಿಳಿಸುತ್ತಾರೆ. ಹಿಂದೆ ಮೂರು ಯುನಿಟ್‌ಗೆ ಸುಮಾರು 18ರಿಂದ 20 ಸಾವಿರ ರೂ., ನಿಗದಿಯಾಗಿತ್ತು ಪ್ರಸಕ್ತ 12ರಿಂದ 14 ಸಾವಿರ ರೂ.ಗೆ ಸಿಗುತ್ತಿದೆ.

ಬಂಟ್ವಾಳ: ಸಿಗುವುದೇ ಸವಾಲು
ಬಂಟ್ವಾಳ: ತಾಲೂಕಿನಲ್ಲೂ ಮರಳಿನ ಅಭಾವದಿಂದ ಸಾಕಷ್ಟು ನಿರ್ಮಾಣ ಕಾಮಗಾರಿಗಳಿಗೆ ತೊಡಕಾಗುತ್ತಿರುವ ಮಾತುಗಳು ಕೇಳಿ ಬರುತ್ತಿವೆ. ಮರಳಿನ ಧಾರಣೆಗಿಂತಲೂ ಅದು ಸಿಗುವುದೇ ಸವಾಲಿನ ವಿಚಾರ ಎಂದು ಸಿವಿಲ್‌ ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಒಂದೊಂದು ಧಾರಣೆ ಇದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಮರಳೇ ಸಿಗುತ್ತಿಲ್ಲ. ಹೆಚ್ಚು ಮರಳು ಲಭ್ಯವಿದ್ದಾಗ ಸ್ಪರ್ಧೆಯಲ್ಲಿ ಧಾರಣೆ ವ್ಯತ್ಯಾಸ ಮಾಡಿ ಮರಳು ತಂದು ಹಾಕುತ್ತಾರೆ. ಆದರೆ ಮರಳಿನ ಕೊರತೆ ಇದ್ದಾಗ ಧಾರಣೆ ಹೆಚ್ಚು ಮಾಡುತ್ತಾರೆ ಎಂದು ಕಟ್ಟಡ ನಿರ್ಮಾಣ ಗುತ್ತಿಗೆದಾರರು ಹೇಳುತ್ತಾರೆ. ಸರಕಾರ ಸ್ಪಷ್ಟ ಮರಳು ನೀತಿ ರೂಪಿಸಿ, ಜನರಿಗೆ ಅನುಕೂಲವಾಗುವ ಬೆಲೆಗೆ ಮರಳು ದೊರಕಿಸಿ ಕೊಡಬೇಕು ಎಂದು ಜನತೆ ಆಗ್ರಹಿಸುತ್ತಿದ್ದು, ಬೇಡಿಕೆಯಷ್ಟು ಮರಳು ಸಿಕ್ಕರೆ ಕಾರ್ಮಿಕರಿಗೂ ಕೆಲಸ ಸಿಗಲಿದೆ. ಮರಳಿನ ಧಾರಣೆ ಹೆಚ್ಚಿರುವ ಜತೆಗೆ ಮರಳು ಸಿಗದೆ ಇರುವ ಕಾರಣಕ್ಕೂ ಸಾಕಷ್ಟು ಕಡೆ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಸಿವಿಲ್‌ ಎಂಜಿನಿಯರ್‌ಗಳು, ಕಟ್ಟಡ ನಿರ್ಮಾಣ ಗುತ್ತಿಗೆದಾರರಿಂದ ಮರಳು ಅಭಾವದ ಕುರಿತು ಆರೋಪ ಕೇಳಿ ಬರುತ್ತಿದೆ. ಸರಕಾರ ಸ್ಪಷ್ಟ ಮರಳು ನೀತಿ ರೂಪಿಸಿದಾಗ ಎಲ್ಲರಿಗೂ ಅನುಕೂಲವಾಗುತ್ತದೆ. ಈ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ನಮ್ಮ ಅಸೋಸಿಯೇಶನ್‌ ವತಿಯಿಂದ ಸರಕಾರಕ್ಕೆ ಮನವಿ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದೇವೆ ಎಂದು ಬಂಟ್ವಾಳ ಸಿವಿಲ್‌ ಎಂಜಿನಿಯರ್ ಅಸೋಸಿಯೇಶನ್‌ ಅಧ್ಯಕ್ಷ ಮ್ಯಾಥು ಫ್ರಾನ್ಸಿಸ್‌ ಡಿ’ಕುನ್ಹಾ ಹೇಳುತ್ತಾರೆ.

ಎಲ್ಲರಿಗೂ ಅನುಮತಿ ಸಿಗಲಿ
ಸರಕಾರ ಗ್ರಾ.ಪಂ. ಮಟ್ಟದಲ್ಲಿ ಎಲ್ಲರಿಗೂ ಅನುಮತಿ ನೀಡಬೇಕಿದೆ. ಲಾಬಿಗಳಿಗೆ ಕಡಿವಾಣ ಹಾಕಿ ಹೆಚ್ಚಿನ ಅನುಮತಿ ನೀಡಿದಲ್ಲಿ ಮರಳು ಅಭಾವ ತಪ್ಪಿಸಬಹುದು.
-ಶೈಲೇಶ್‌ ಆರ್‌.ಜೆ.,  ಬೆಳ್ತಂಗಡಿ ಸಿವಿಲ್‌ ಎಂಜಿನಿಯರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ

ಜಲ್ಲಿಗಿಂತ ದುಬಾರಿ
ಮೂರು ಯುನಿಟ್‌ ಜಲ್ಲಿ ಬೆಲೆ 13,000 ರೂ. ಅದೇ ಮೂರು ಯುನಿಟ್‌ ಮರಳಿನ ಬೆಲೆ 18ರಿಂದ 20 ಸಾವಿರ ರೂ. ಜಲ್ಲಿಗಿಂತ ಭಾರೀ ಬೆಲೆ ಮರಳಿಗೆ! ಒಟ್ಟಿನಲ್ಲಿ ಅವೈಜ್ಞಾನಿಕ ಮರಳು ನೀತಿಯಿಂದ ಜನಸಾಮಾನ್ಯರ ಮೇಲೆ ಭಾರೀ ಹೊರೆ ಬೀಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next