ಬೆಂಗಳೂರು: ಕರಾವಳಿ ಜಿಲ್ಲೆಗಳ ಮರಳಿನ ಸಮಸ್ಯೆ ನೀಗಿಸಲು ಅ.15ರೊಳಗೆ ಎಲ್ಲ ನಿಯಮ ಸಡಿಲಗೊಳಿಸಿ ಸಾರ್ವಜನಿಕರಿಗೆ ಮರಳು ಸಿಗುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಮುಖ್ಯಮಂತ್ರಿಯವರು, ಎರಡೂ ಜಿಲ್ಲೆಗಳ ಜನತೆಗೆ ಅ. 15ರ ಅನಂತರ ಸುಗಮ ವಾಗಿ ಮರಳು ದೊರೆಯಲಿದೆ ಎಂದು ಭರವಸೆ ನೀಡಿದರು.
ಕರಾವಳಿ ನಿಯಂತ್ರಣ ವಲಯ(ಸಿಆರ್ ಝಡ್)ದಲ್ಲಿ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ತಡೆಯೊಡ್ಡಿರುವುದರಿಂದ ಎರಡೂ ಜಿಲ್ಲೆಗಳಲ್ಲಿ ಮರಳಿನ ಕೊರತೆ ಯುಂಟಾಗಿದೆ. ಆದ್ದರಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ಖಾಸಗಿ ಯೋಜನೆಗಳಷ್ಟೇ ಅಲ್ಲದೆ ಸರಕಾರದ ವಸತಿ ಯೋಜನೆಗಳಿಗೂ ಮರಳು ಸಿಗುತ್ತಿಲ್ಲ ಎಂದು ಶಾಸಕರ ನಿಯೋಗ ಮುಖ್ಯಮಂತ್ರಿಯವರ ಗಮನಕ್ಕೆ ತಂದಿತು. ಈ ಹಿನ್ನೆಲೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಸ್ಥಳದಲ್ಲೇ ಸೂಚನೆ ನೀಡಿದರು.
ಸಿಆರ್‌ಝಡ್ ಪ್ರದೇಶದ ಸಮೀಕ್ಷೆ ನಡೆಸಲಾಗಿದ್ದು, ಮರಳು ದೊರೆ ಯುವ ಕುರಿತಂತೆ ಸುರತ್ಕಲ್ ಎನ್‌ಐಟಿಕೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ರಾಜ್ಯ ಸರಕಾರ ಈಗಾಗಲೇ ಸಾಂಪ್ರದಾಯಿಕ ಮರಳುಗಣಿಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಮರಳು ತೆಗೆಯಲು ಅನುಮತಿ ನೀಡಲಿದೆ ಎಂದು ಹೇಳಿದರು. ನಾನ್ ಸಿಆರ್‌ಝಡ್ ಪ್ರದೇಶದಲ್ಲಿಯೂ ಟೆಂಡರ್ ಪ್ರಕ್ರಿಯೆ ಕೈ ಬಿಟ್ಟು ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅವಕಾಶ ನೀಡುವಂತೆ ಜನಪ್ರತಿನಿಧಿಗಳು ಮನವಿ ಮಾಡಿದ್ದು, ಅದಕ್ಕೂ ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಸಾರ್ವಜನಿಕರು ಮನೆ ಕಟ್ಟಿಕೊಳ್ಳಲು ಹಾಗೂ ಸಣ್ಣಪುಟ್ಟ ಕೆಲಸಗಳಿಗೆ ಸ್ವಂತ ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಗಳಲ್ಲಿ ಮರಳು ಸಾಗಿಸುವುದಕ್ಕೆ ಗಣಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಕಿರುಕುಳ ಕೊಡುವುದನ್ನು ತಡೆಯುವಂತೆ ಸೂಚಿಸಲಾಗಿದೆ. ಅಗತ್ಯ ಕಾರ್ಯಗಳಿಗೆ ಸಾರ್ವಜನಿಕರು ಮರಳು ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಹೇಳಲಾಗಿದೆ.
ಪ್ರಸ್ತುತ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ನಿರ್ಬಂಧ ಹೇರಿರುವು ದರಿಂದ ಪ್ರತಿ ಲೋಡ್‌ಗೆ 28ರಿಂದ 30 ಸಾವಿರ ರೂ. ನೀಡಬೇಕಾಗುತ್ತಿದೆ. ಸರಕಾರ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅನುಮತಿ ನೀಡಿದರೆ ಎರಡೂ ಜಿಲ್ಲೆಗಳಲ್ಲಿ 3 -4 ಸಾವಿರ ರೂ.ಗೆ ಒಂದು ಲೋಡ್ ಮರಳು ಸಿಗುವಂತಾಗುತ್ತದೆ. ಇದರಿಂದ ಅವಳಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳೂ ತ್ವರಿತವಾಗಿ ಪೂರ್ಣಗೊಳ್ಳಲಿವೆ ಎಂದು ಶಾಸಕರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ಸಚಿವರಾದ ಯು.ಟಿ.ಖಾದರ್, ಜಯಮಾಲಾ, ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್ ಪೂಂಜಾ, ಸುಕುಮಾರ ಶೆಟ್ಟಿ, ಅಂಗಾರ, ರಮೇಶ್ ನಾಯ್ಕ, ವಿಧಾನಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಭೂ ಪರಿವರ್ತನೆ: ಮತ್ತೆ ಸಭೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಪರಿವರ್ತನೆ ಕುರಿತ ಸಮಸ್ಯೆಗೂ ಪರಿಹಾರ ಕಲ್ಪಿಸುವಂತೆ ಶಾಸಕರು ಮನವಿ ಮಾಡಿದರು. ಈ ಕುರಿತು ಶೀಘ್ರ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಮತ್ತೂಂದು ಸಭೆ ಕರೆದು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು ಎನ್ನಲಾಗಿದೆ.