Advertisement

ಚುನಾವಣ ಕಾವಿನ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಗಡಾಯಿಸಿದ ಮರಳು ಸಮಸ್ಯೆ!

12:35 AM May 03, 2023 | Team Udayavani |

ಮಂಗಳೂರು: ರಾಜ್ಯಾದ್ಯಂತ ಚುನಾವಣ ಕಾವು ಏರುತ್ತಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಿಗಡಾಯಿಸಿದೆ. ನಿರ್ಮಾಣ ಕ್ಷೇತ್ರಕ್ಕೆ ಮರಳಿನ ಕೊರತೆ ಕಾಡುತ್ತಿದ್ದು, ದುಪ್ಪಟ್ಟು ಬೆಲೆ ನೀಡಿದರೆ ಮಾತ್ರ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕರಾವಳಿಯಲ್ಲಿ ಈಗಾಗಲೇ ಸಿಆರ್‌ ಝಡ್‌ನ‌ಡಿ ಮರಳುಗಾರಿಕೆಗೆ ನಿರ್ಬಂಧವಿದೆ. ಒಂದೆಡೆ ಚುನಾವಣೆ, ಅದು ಮುಗಿಯುತ್ತಿದ್ದಂತೆಯೇ ಮಳೆಗಾಲ ಆರಂಭವಾಗುವುದರಿಂದ ಮತ್ತೆ ಮರಳು ಸರಬರಾಜಿನಲ್ಲಿ ಬಹು ಕೊರತೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಗೃಹ ನಿರ್ಮಾಣ ಸೇರಿದಂತೆ ನಿರ್ಮಾಣ ಕಾಮಗಾರಿಗೆ ಇನ್ನಷ್ಟು ತೊಂದರೆಯಾಗಲಿದೆ.

ಈ ಮಧ್ಯೆ ದ.ಕ. ಜಿಲ್ಲೆಯಲ್ಲಿ ಮರಳು ಗಾರಿಕೆ ನಡೆಸಲು ಅನುಮತಿ ಇಲ್ಲವಾದರೂ ದುಪ್ಪಟ್ಟು ಬೆಲೆ ತೆತ್ತರೆ ಮರಳು ಸಿಗುತ್ತಿದೆ ಎಂಬ ಅಪವಾದವೂ ಇದೆ. ಸಾಮಾನ್ಯವಾಗಿ 5ರಿಂದ 6 ಸಾವಿರ ರೂ. ಬೆಲೆಗೆ ದೊರೆಯುವ ಲೋಡ್‌ ಮರಳನ್ನು (2 ಯುನಿಟ್‌) 10 ಸಾವಿರದಿಂದ 12 ಸಾವಿರ ರೂ.ಗಳಿಗೆ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ನಿರ್ಮಾಣ ಕ್ಷೇತ್ರಕ್ಕೆ ಅಗತ್ಯವಿರುವವರು ದುಬಾರಿ ಬೆಲೆ ನೀಡಿ ಮರಳು ಪಡೆಯುವ ಪ್ರಮೇಯವಿದೆ.

ಸದ್ಯ ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ದಾಸ್ತಾನು ಇರುವ ಮರಳು ವಿತರಣೆಗೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲವಾದ್ದ ರಿಂದ ಮರಳಿನ ಸಮಸ್ಯೆ ಎದುರಾಗಿದೆ.

ನಾನ್‌ ಸಿಆರ್‌ಝಡ್‌ ಮರಳು ಗಾತ್ರ ದಲ್ಲಿ ದಪ್ಪವಾಗಿರುವ ಕಾರಣ ಮನೆ ನಿರ್ಮಾಣದಲ್ಲಿ “ಪ್ಲಾಸ್ಟರಿಂಗ್‌’ಗೆ ಬಳಸು ವುದು ವಿರಳ. ಇದಲ್ಲದೆ ಇದರ ಸಾಗಾಟ ವೆಚ್ಚವೂ ಅಧಿಕ. ಕಳೆದ ವರ್ಷವೂ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಹಲವು ತಿಂಗಳ ಕಾಲ ನಿಷೇಧವಿದ್ದ ಕಾರಣ ಕರಾವಳಿ ಯಲ್ಲಿ ಮರಳಿನ ಕೊರತೆ ಕಾಡಿತ್ತು. ಇದರಿಂದ ಕ್ಲಪ್ತ ಸಮಯದಲ್ಲಿ ಮನೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗದೆ ತೊಂದರೆ ಅನುಭವಿಸಬೇಕಾಗಿತ್ತು.

Advertisement

“ನಾನ್‌ ಸಿಆರ್‌ಝಡ್‌ಮರಳನ್ನು ಮರಳು ಮಿತ್ರ ಆ್ಯಪ್‌ ಮೂಲಕ ವಿತರಿಸುವ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ಪೂರೈಕೆಯಾಗುವ ಎಂ ಸ್ಯಾಂಡ್‌ ಕೂಡ ತಾಂತ್ರಿಕ ನಿಯಮಾವಳಿಗೆ ತಕ್ಕಂತೆ ಇಲ್ಲ. ಕಾಂಕ್ರೀಟ್‌, ಪ್ಲಾಸ್ಟರಿಂಗ್‌, ಕಲ್ಲು ಕಟ್ಟಲು ಎಲ್ಲದಕ್ಕೂ ಮರಳು ಬೇಕು. ಸ್ಟಾಕ್‌ ಯಾರ್ಡ್‌ಗಳಲ್ಲಿ ದಾಸ್ತಾನು ಮಾಡಿರುವ ಹಾಗೂ ಇಲಾಖೆಯು ಕಾನೂನು ಮೂಲಕ ವಶಪಡಿಸಿಕೊಂಡಿರುವ ಮರಳನ್ನು ವಿತರಿಸುವಂತೆ ದ.ಕ. ಜಿಲ್ಲಾಧಿಕಾರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಗುತ್ತಿಗೆದಾರರು. ಉಡುಪಿಯಲ್ಲಿ ಸದ್ಯಕ್ಕೆ ಮರಳಿನ ಸಮಸ್ಯೆ ಇಲ್ಲ. ಗ್ರಾ.ಪಂ. ಮಟ್ಟದಲ್ಲಿಯೇ ಮರಳು ಪೂರೈಕೆಯಾಗುತ್ತಿದೆ ಎನ್ನುತ್ತಾರೆ ಉಡುಪಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸಂದೀಪ್‌.

ಮರಳಿಲ್ಲದೆ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರೈಸಲು ತೊಂದರೆಯಾಗಿದೆ. ಕೆಲಸಗಾರರಿಗೆ ಸರಿಯಾಗಿ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಸದ್ಯ ಚುನಾವಣೆಯಲ್ಲಿ ವ್ಯಸ್ತವಾಗಿರುವ ಕಾರಣ ನಿರ್ಧಾರ ಆಗಿಲ್ಲ. ಎರಡು ತಿಂಗಳ ಅವಧಿಗೆ 2 ಯುನಿಟ್‌ನ 1 ಸಾವಿರ ಲೋಡ್‌ ಮರಳು ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯ ಇರುವುದಾಗಿ ಜಿಲ್ಲಾಡಳಿತಕ್ಕೆ ಮನವಿಯಲ್ಲಿ ತಿಳಿಸಲಾಗಿದೆ.
– ಎಂ. ಮಹಾಬಲ ಕೊಟ್ಟಾರಿ, ಅಧ್ಯಕ್ಷರು, ಸಿವಿಲ್‌ ಗುತ್ತಿಗೆದಾರರ ಸಂಘ, ದ.ಕ.

ಸದ್ಯ ಜಿಲ್ಲೆಯಲ್ಲಿ ನಾವು ಚುನಾವಣೆಯ ಬಗ್ಗೆಯೇ ಬಹುಮುಖ್ಯವಾಗಿ ಗಮನ ಹರಿಸಲಾಗುತ್ತಿದೆ. ಕುಡಿಯುವ ನೀರು ಸೇರಿದಂತೆ ತುರ್ತು ಆವಶ್ಯಕತೆಗಳನ್ನು ಹೊರತುಪಡಿಸಿ ಇತರ ವಿಷಯಗಳ ಬಗ್ಗೆ ಮೇ 13ರ ಅನಂತರ ಜಿಲ್ಲಾಡಳಿತ ಗಮನ ಹರಿಸಲಿದೆ.
– ಎಂ.ಆರ್‌. ರವಿಕುಮಾರ್‌, ಜಿಲ್ಲಾಧಿಕಾರಿ. ದ.ಕ.

Advertisement

Udayavani is now on Telegram. Click here to join our channel and stay updated with the latest news.

Next