Advertisement

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

01:42 AM Dec 04, 2021 | Team Udayavani |

ಮಂಗಳೂರು: ಮರಳು ಸಮಸ್ಯೆಯಿಂದ ನಿರ್ಮಾಣ ಚಟುವಟಿಕೆಗಳು ಸಂಕಷ್ಟದಲ್ಲಿದ್ದು ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡು ಕೈಗೆಟಕುವ ದರದಲ್ಲಿ ಮರಳು ಲಭ್ಯವಾಗುವಂತೆ ಮಾಡಬೇಕು ಎಂದು ದ.ಕ. ಸಿವಿಲ್‌ ಕಾಂಟ್ರಾಕ್ಟರ್ ಅಸೋಸಿಯೇಶನ್‌ ಆಗ್ರಹಿಸಿದೆ.

Advertisement

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್‌ ಅಧ್ಯಕ್ಷ ಮಹಾಬಲ ಕೊಟ್ಟಾರಿ ಅವರು ಜಿಲ್ಲೆಯಲ್ಲಿ ಮರಳುಗಾರಿಕೆ ಪರವಾನಿಗೆ ಅವಧಿ ಸೆ. 16ಕ್ಕೆ ಮುಗಿದಿದೆ. ಮರಳುಗಾರಿಕೆ ನಿಷೇಧಿಸಲ್ಪಟ್ಟು ಎರಡು ತಿಂಗಳು ಕಳೆದಿದ್ದು ನವೆಂಬರ್‌ ಕೊನೆಗೆ ಮರಳು ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಡಿಸೆಂಬರ್‌ ತಿಂಗಳಾದರೂ ಇನ್ನೂ ಮರಳು ಲಭ್ಯವಾಗುತ್ತಿಲ್ಲ ಎಂದರು.

ಮಂಗಳೂರಿನಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಪ್ರತಿದಿನ ಸುಮಾರು 500 ಲೋಡ್‌ ಮರಳು ಅವಶ್ಯವಿದೆ. ದುಬಾರಿ ದರದಿಂದಾಗಿ ಅಗತ್ಯ ಮರಳು ಖರೀದಿಸಲು ಆಗುತ್ತಿಲ್ಲ. ಇದರಿಂದ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ ಎಂದರು.

ಇದನ್ನೂ ಓದಿ:ರಾಜ್ಯದಲ್ಲಿ 413 ಕೋವಿಡ್‌ ಪಾಸಿಟಿವ್‌ ಸೋಂಕು ಪತ್ತೆ: ನಾಲ್ವರು ಸಾವು 

ಬೆಥಮೆಟ್ರಿಕ್ಸ್‌ ಸರ್ವೆ ವರದಿ ಎನ್‌ಐಟಿಕೆಗೆ ಹೋಗಿದ್ದು ಅವರ ತಾಂತ್ರಿಕ ವರದಿ ಜಿಲ್ಲಾಡಳಿತಕ್ಕೆ ಇನ್ನೂ ಸಲ್ಲಿಕೆಯಾಗಿಲ್ಲ .ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮರಳು ಸಮಿತಿಯಲ್ಲಿ ಇದನ್ನು ಮಂಡಿಸಿ, ಅನುಮೋದನೆ ಪಡೆದ ಅನಂತರ ಸರಕಾರಕ್ಕೆ ಅನುಮತಿಗೆ ಕಳುಹಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ತ್ವರಿತವಾಗಿ ನಡೆಯಬೇಕಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಗಮನಹರಿಸಬೇಕು. ತಪ್ಪಿದಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದರು.

Advertisement

ಉಪಾಧ್ಯಕ್ಷ ದಿನಕರ ಸುವರ್ಣ,ಕಾರ್ಯದರ್ಶಿ ಉಮೇಶ್‌ ದಂಡಕೇರಿ, ಜತೆ ಕಾರ್ಯದರ್ಶಿ ಅಶೋಕ್‌ ಕುಲಾಲ್‌ ಇದ್ದರು.

ಕಡಿಮೆ ಮರಳು ದಿಬ್ಬ ?
ಬೆಥಮೆಟ್ರಿಕ್ಸ್‌ ಸರ್ವೆ ವರದಿಯಲ್ಲಿ ಮರಳುದಿಬ್ಬ ಸಂಖ್ಯೆ ಅತ್ಯಂತ ಕಡಿಮೆ ಇರುವುದಾಗಿ ಮಾಹಿತಿ ಲಭ್ಯವಾಗಿದೆ. ಇದು ನಿಜವಾಗಿದ್ದರೆ ಮರಳು ಸಮಸ್ಯೆ ಕಾಡಲಿದೆ. ಮರಳು ದಿಬ್ಬ ಪತ್ತೆ ಕಾರ್ಯದಲ್ಲಿ ನದಿ ಪರಿಸರದ ಬಗ್ಗೆ ವಾಸ್ತವಿಕ ಜ್ಞಾನ ಹೊಂದಿರುವ ಸ್ಥಳೀಯ ಮೀನುಗಾರರ ನೆರವು ಪಡೆಯುತ್ತಿಲ್ಲ. ಇದು ಒಟ್ಟು ಮರಳು ಲಭ್ಯತೆ ಗುರುತಿಸುವಲ್ಲಿ ಬಹಳಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಗೌರವಾಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next