Advertisement

ಕಲ್ಲು ಗಣಿಗಾರಿಕೆ ಆರ್ಭಟಕ್ಕೆ ನಲುಗಿದ ಜಿಲ್ಲೆ ಜನತೆ

02:58 PM Jan 25, 2021 | Team Udayavani |

ದೇವನಹಳ್ಳಿ: ಶಿವಮೊಗ್ಗ ಜಿಲ್ಲೆಯ ಹುಣಸೋಡು ವ್ಯಾಪ್ತಿಯ ಗಣಿ ಪ್ರದೇಶದಲ್ಲಿ ನಡೆದ ಸ್ಫೋಟದ ಬಗ್ಗೆ ರಾಜ್ಯದ ಜನ ಭಯಭೀತರಾಗಿರುವ ಬೆನ್ನಲ್ಲೇ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಬಗ್ಗೆ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಮೀಸಗಾನಹಳ್ಳಿ, ತೈಲಗೆರೆ, ಮುದ್ದ ನಾಯಕನ ಹಳ್ಳಿ, ಸೊಣ್ಣೇನಹಳ್ಳಿ ಇತರೆ ಕಡೆ ವ್ಯಾಪಕವಾಗಿ ಕಲ್ಲುಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ನಂದಿಬೆಟ್ಟದ ಮಾರ್ಗದ ಕಲ್ಲುಗಣಿಗಾರಿಕೆಯ ಸ್ಫೋಟದ ಶಬ್ದಕ್ಕೆ ಅನೇಕ ಮನೆಗಳು ಬಿರುಕು ಬಿಟ್ಟಿರುವ ಉದಾಹರಣೆಗಳಿವೆ. ಅಲ್ಲದೇ, ದೂಳಿನಿಂದಾಗಿ ಆರೋ ಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ.

ಗಣಿಗಾರಿಕೆಯಿಂದ ಅದರ ಶಬ್ಧದಿಂದ ನಡುಕ ಒಂದು ಕಡೆಯಾದರೆ, ಬೆಳೆ ನಷ್ಟ ಹಾಗೂ ರಾಸಾಯನಿಕ ಬಳಕೆ ಮಾಡಿ, ಸ್ಫೋಟಿಸುತ್ತಿರುವ ಗಣಿ ದೂಳಿನಿಂದ ಮಕ್ಕಳಲ್ಲಿ ಕಣ್ಣು, ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಸೃಷ್ಟಿಸುತ್ತಿವೆ. ಸೊಣ್ಣೇನಹಳ್ಳಿ ಶಾಲೆ ಮಕ್ಕಳಿಗೆ ದೂಳಿನಿಂದ ಬಂದಂತಹ ಕಾಯಿಲೆಗಳಿಗೆ ಸಂಬಂಧಿಸಿದಂತೆ, ಆರೋಗ್ಯ ಇಲಾಖೆಯೂ
ಪತ್ರ ನೀಡಿತ್ತು. ಈ ಭಾಗದ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ, ಸ್ಫೋಟದ ಶಬ್ದ ಹೆಚ್ಚಾಗಿರುವುದರಿಂದಲೇ ಜಾನುವಾರುಗಳು ಸಾವನ್ನಪ್ಪುತ್ತಿವೆ.

ನಂದಿ ಬೆಟ್ಟದ ಬುಡದಿಂದ ಪ್ರಾರಂಭವಾಗುವ ಅರ್ಕಾವತಿ ಕ್ಯಾಚ್‌ಮೆಂಟ್‌ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಈ ಗಣಿಗಾರಿಕೆ ವ್ಯಾಪ್ತಿ, 2 ಕಿ.ಮೀ. ಕನಿಷ್ಠ ಮಿತಿಯಲ್ಲಿ ಒಟ್ಟು 27 ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮ, ಸಕ್ರಮ ಗಣಿಗಾರಿಕೆಗೆ ಅವಕಾಶ ನೀಡುವಂತಿಲ್ಲ ಎಂದು 2013 ಸೆ.24ರಂದು ನಗರಾಭಿವೃದ್ಧಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ವಿಶ್ವನಾಥಪುರ ಠಾಣೆ ಪಿಎಸ್‌ಐ ಆಗಿದ್ದ ಶ್ರೀನಿವಾಸ್‌ ನೇತೃತ್ವದಲ್ಲಿ ಸ್ಫೋಟಕ ಜಿಲಾಟಿನ್‌ ಕಡ್ಡಿಗಳ ಬಾಕ್ಸ್‌ಗಳನ್ನು 2018ರಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಆದರೆ, ಈ ಪ್ರಕರಣ ಏನಾಗಿದೆ ಎಂಬುದು ತಿಳಿದು ಬಂದಿಲ್ಲ. ಇಷ್ಟು ಸ್ಫೋಟಕ ವಸ್ತುಗಳು 2018ರಲ್ಲಿಯೇ ಸಿಕ್ಕಿ ಬಿದ್ದಿತ್ತು. ಇದೇ ರೀತಿ ಕಲ್ಲುಗಣಿಗಾರಿಕೆ ಮಾಡುವ ಕಡೆಗಳಲ್ಲೆಲ್ಲಾ ದಾಸ್ತಾನು ಮಾಡಿರುವುದರಿಂದ ಸುತ್ತಮುತ್ತ
ಲಿನ ಗ್ರಾಮಸ್ಥರಲ್ಲಿ ಶಿವಮೊಗ್ಗ ಜಿಲ್ಲೆಯ ಹುಣಸೋಡು ಮಾದರಿಯಲ್ಲಿ ಏನಾದರೂ ಸ್ಫೋಟಗೊಂಡರೆ, ಇಡೀ ಗ್ರಾಮಗಳೇ ನಿರ್ನಾಮವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ:ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ “AAP” ಅಖಾಡಕ್ಕೆ; 160 ಅಭ್ಯರ್ಥಿ ಹೆಸರು ಘೋಷಣೆ

Advertisement

ಜಿಲ್ಲಾಡಳಿತದಿಂದ ಹೊಸದಾಗಿ ಗಣಿಗಾರಿಕೆಗೆ 2020ರಿಂದ 2040ರವರೆಗೆ ಗುತ್ತಿಗೆ ನೀಡಲಾಗಿದೆ. ಬಿದಲೂರು, ಬ್ಯಾಡರಹಳ್ಳಿ, ಚಿಕ್ಕಗೊಲ್ಲಹಳ್ಳಿ, ಮಾಯ ಸಂದ್ರ, ಮೀಸಗಾನಹಳ್ಳಿ ವ್ಯಾಪ್ತಿಯಲ್ಲಿ ಹೊಸದಾಗಿ ಕಲ್ಲುಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದೆ ಎಂದು ಆರ್‌ ಟಿಐ ಕಾರ್ಯಕರ್ತರು ಆರೋಪಿಸುತ್ತಾರೆ. ಕಲ್ಲುಗಣಿ ಗಾರಿಕೆಯಿಂದ ಬೋರ್‌ವೆಲ್‌ಗ‌ಳಲ್ಲಿರುವ ನೀರೂ ಬತ್ತಿಹೋಗುತ್ತಿವೆ. ಬೋರ್‌ವೆಲ್‌ ಕೊರೆಸಿದರೂ ನೀರು ಸಿಗದ ಸ್ಥಿತಿ ಬಂದೊದಗಿದೆ. 15 ರಿಂದ 20 ವರ್ಷಗಳಿಂದ ಗಣಿ ಸುತ್ತಮುತ್ತ ಇರುವ ಪ್ರದೇಶದಲ್ಲಿ
ಕೃಷಿ ಮತ್ತು ತೋಟಗಾರಿಕಾ ಬೆಳೆ ಫಸಲು ಕಂಡಿಲ್ಲ.

ಹೆಚ್ಚು ಗಣಿ ದೂಳಿನಿಂದ ರೈತರಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ. 2016ರಲ್ಲಿ ಮುದ್ದನಾಯಕನಹಳ್ಳಿ, ಸೊಣ್ಣೇನಹಳ್ಳಿ ಸುತ್ತಮುತ್ತ ವ್ಯಾಪಕ ಗಣಿಗಾರಿಕೆ ನಡೆಯುತ್ತಿರುವುದರಿಂದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗದೇ ಇದ್ದಾಗ ಸುತ್ತಮುತ್ತಲಿನ ಗ್ರಾಮಸ್ಥರು, ರಾಜ್ಯಪಾಲರ ಬಳಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದರು. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು
ಕೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು, ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

2020 ಜ.30ರಂದು ಕಾರಹಳ್ಳಿ ಗ್ರಾಪಂ ಸಭೆಯಲ್ಲಿ ನಿರ್ಣಯಗೊಂಡು ಗಣಿಗಾರಿಕೆ ನಡೆಸುವವರಿಗೆ ನೋಟೀಸ್‌ ನೀಡಲಾಗಿತ್ತು. ಸಭೆ ನಿರ್ಣಯದ ಪ್ರತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿಗಳಿಗೆ, ಕರ್ನಾಟಕ ಗೃಹ ಮಂಡಳಿ, ಪರಿಸರ
ಮಾಲಿನ್ಯ ಇಲಾಖೆಗೆ ರವಾನಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಸರ್ಕಾರವೆಂದೇ ಬಿಂಬಿತವಾಗಿರುವ ಗ್ರಾಪಂ ನಿರ್ಣಯಕ್ಕೆ ಬೆಲೆಯೇ ಇಲ್ಲ ಎಂದು ರೈತ ಚಿಕ್ಕೇಗೌಡ ದೂರುತ್ತಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ದಿನಕ್ಕೆರಡು ಅಪಘಾತ, ಕನಿಷ್ಠ 2 ಸಾವು! ದ್ವಿಚಕ್ರ ಸವಾರರಿಂದಲೇ ಅಪಘಾತ ಅಧಿಕ

ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು: ಶಿವಮೊಗ್ಗ ಜಿಲ್ಲೆಯ ಹುಣಸೋಡು ಇಲ್ಲಿ ನಡೆದ ಭಯಾನಕ ಸ್ಫೋಟ‌ದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಲ್ಲುಗಣಿಗಾರಿಕೆ, ಗ್ರಾನೈಟ್‌, ಜಲ್ಲಿ ಕ್ರಷರ್‌ಗಳ ಎಲ್ಲಾ ಮಾಹಿತಿ ಕಲೆ ಹಾಕಲು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚಿಸಿದೆ. ಸರ್ಕಾರದ ಆದೇಶದಂತೆ ಪ್ರತಿಯೊಂದು ಕಡೆ ಸುರಕ್ಷತೆ ಕಾಪಾಡಿದ್ದಾರೆಯೋ ಇಲ್ಲವೋ ಎಂಬ ಮಾಹಿತಿ, 4 ತಾಲೂಕುಗಳ ವ್ಯಾಪ್ತಿಯ ತಹಶೀಲ್ದಾರ್‌ಗಳಿಗೆ ಗಣಿಗಾರಿಕೆ ಮೇಲೆ ಕಣ್ಗಾವಲು ಇಡುವಂತೆ ಸೂಚನೆ, ಅನಧಿಕೃತ ಜಾಗಗಳಲ್ಲಿ ಕಲ್ಲುಗಣಿಗಾರಿಕೆ ಕಂಡು ಬಂದರೆ, ತಕ್ಷಣ ಮುಲಾಜಿಲ್ಲದೆ ಕ್ರಮಕೈಗೊಳ್ಳಲು ಆದೇಶ ನೀಡಲಾಗಿದೆ. ಗಣಿ ಭೂ ವಿಜ್ಞಾನ ಇಲಾಖೆ ಸಾಕಷ್ಟು ಎಚ್ಚರ ವಹಿಸುವುದು, ಯಾವ ಪ್ರಮಾಣದಲ್ಲಿ ನ್ಪೋಟಕ ಸಿಡಿಸಬೇಕು ಎಂಬ ಕಾನೂನು ಅಧಿನಿಯಮ ಪಾಲನೆ ಮಾಡಬೇಕು. ಹೀಗೆ ಹಲವಾರು ನಿಬಂಧನೆಗಳು ಇವೆ.

ವರದಿ ನೀಡಲು ಸೂಚನೆ: ಜಿಲ್ಲಾಧಿಕಾರಿ
ಶಿವಮೊಗ್ಗ ಜಿಲ್ಲೆಯ ಹುಣಸೋಡುವಿನಲ್ಲಿ ಆಗಿರುವ ಘಟನೆ ಬೆನ್ನಲ್ಲೇ ಜಿಲ್ಲಾಡಳಿತ ಹೆಚ್ಚಿನ ಕ್ರಮವನ್ನು ಕೈಗೊಳ್ಳುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲ್ಲುಗಣಿಗಾರಿಕೆ, ಗ್ರಾನೈಟ್‌, ಜಲ್ಲಿ ಕ್ರಷರ್‌ಗಳ ಸಂಪೂರ್ಣ ಮಾಹಿತಿಯ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ಫೋಟಕ ವಸ್ತುಗಳು ಎಲ್ಲೆಲ್ಲಿ ದಾಸ್ತಾನು ಮಾಡಿದೆ. ಅವುಗಳ ಸಮಗ್ರ ಮಾಹಿತಿ ನೀಡಬೇಕು. ಕಲ್ಲುಗಣಿಗಾರಿಕೆ ಮಾಡುವ ಕಡೆ, ಸುರಕ್ಷತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಿಳಿಸಿದ್ದಾರೆ.

– ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next