Advertisement
ಬ್ಯಾಗ್ ಗಳಲ್ಲಿ ಮಾರಾಟ ಮಾಡುವ ಉದ್ದೇಶವೇನೆಂದರೆ ಸರಕಾರದ ವತಿಯಿಂದಲೇ ಕೈಗೆಟುಕವ ದರದಲ್ಲಿ ಜನಸಾಮಾನ್ಯರು ಹಾಗೂ ಎಲ್ಲಾ ವರ್ಗದವರಿಗೂ ಮರಳು ಸಿಗಲಿದ್ದು ಇದರ ಪ್ರಸ್ತಾವನೆಯು ಸಹಾ ಸಿದ್ದವಾಗಿದೆ. ಇದರಿಂದಾಗಿ ಮನೆ ಕಟ್ಟುವವರು ಹಾಗೂ ಇತರರಿಗೆ ಸುಲಭ ಮಾರ್ಗದಲ್ಲಿ ಮರಳು ಲಭ್ಯವಾಗಲಿದೆ.
Related Articles
Advertisement
ಪ್ರಾಯೋಗಿಕವಾಗಿ ರಾಜ್ಯದ ಐದು ಕಡೆ ಈ ಘಟಕಗಳನ್ನು ಪ್ರಾರಂಭ ಮಾಡಲಾಗುವುದು. ಮರಳು ಮಾರಾಟ ಮಾಡಲು ಬ್ಯಾಗ್‍ಗಳನ್ನು ಸಿದ್ಧಪಡಿಸುವುದು, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ತರಬೇತಿಯನ್ನು ಸಂಬಂಧಪಟ್ಟವರಿಗೆ ನೀಡಲಿದ್ದೇವೆ ಎಂದು ತಿಳಿಸಿದರು.
ಬ್ಯಾಗ್ ಮೂಲಕ ಮಾರಾಟ ಮಾಡುವಾಗ ಎ, ಬಿ ಮತ್ತು ಸಿ ಶ್ರೇಣಿ ಎಂದು ವರ್ಗೀಕರಣ ಮಾಡುತ್ತೇವೆ. ಮೊದಲು ಸ್ಟಾಕ್ ಯಾರ್ಡ್‍ಗಳಲ್ಲಿ ಪ್ರತ್ಯೇಕಗೊಳಿಸಿ ನಂತರ ಅದನ್ನು ಕೈಗೆಟಕುವ ದರದಲ್ಲಿ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ಮರಳುಗಾರಿಕೆಯನ್ನು ಕೇವಲ ಆರು ತಿಂಗಳು ಮಾತ್ರ ನಡೆಸಬಹುದು. ನದಿಗಳಲ್ಲಿ ನೀರು ಸಂಗ್ರಹಣೆಯಾದರೆ ಮರಳು ತೆಗೆಯಲು ಅವಕಾಶವಿರುವುದಿಲ್ಲ. ಬ್ಯಾಗ್‍ಗಳಲ್ಲಿ ಮರಳು ಸಂಗ್ರಹಿಸಿಟ್ಟುಕೊಂಡರೆ, ವರ್ಷ ಪೂರ್ತಿ ಬಳಕೆ ಮಾಡಬಹುದು ಎಂದು ಸಲಹೆ ಮಾಡಿದರು.
ಬ್ಯಾಗ್ ಗಳಲ್ಲಿ ಮರಳು ಸಂಗ್ರಹಣೆಯಾದರೆ ಸಾರ್ವಜನಿಕರಿಗೆ ಗುಣಮಟ್ಟದ ಮರಳು ಸಿಗಲಿದೆ. ತಮ್ಮ ವಾಹನಗಳಲ್ಲಿ ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು.ಇದರಿಂದ ಸಾಗಾಣಿಕೆ ವೆಚ್ಚವು ಕಡಿಮೆಯಾಗಲಿದೆ ಎಂದರು.
ವರ್ಷಪೂರ್ತಿ ಮರಳು ಸಿಗದ ಕಾರಣ ಮಾರುಕಟ್ಟೆಯಲ್ಲಿ ಮರಳಿನ ದರವು ದುಪ್ಪಟ್ಟಾಗುತ್ತಿತ್ತು. ಈಗ ಇಂತಹುದನ್ನು ತಪ್ಪಿಸಲು ಈ ಮಾರ್ಗೋಪಾಯ ಕಂಡುಕೊಳ್ಳಲಾಗಿದೆ ಎಂದು ಹೇಳಿದರು. ಬ್ಯಾಗ್‍ಗಳಲ್ಲಿ ಮರಳನ್ನು ಸಂಗ್ರಹಿಸಿಟ್ಟರೆ ಯಾವಾಗ ಬೇಕಾದರೂ ವಿತರಣೆ ಮಾಡಬಹುದು. ಇದಕ್ಕೆ ದರ ಕಡಿಮೆ ಇರುತ್ತದೆ. ಇದಕ್ಕೆ 50ರೂ. ಖರ್ಚಾಗಬಹುದು ಎಂದರು.
5 ಲಕ್ಷಕ್ಕಿಂತ ಕಡಿಮೆ ದರದಲ್ಲಿ ಮನೆ ಕಟ್ಟಿಸಿಕೊಳ್ಳುವವರಿಗೆ ಯಾವುದೇ ರೀತಿಯ ರಾಜಧನ ಕಟ್ಟಿಸಿಕೊಳ್ಳುವುದಿಲ್ಲ. ಬಡವರು, ಬಡತನ ರೇಖೆಗಿಂತ ಕೆಳಗಿನವರು ಗ್ರಾಪಂ ಮಟ್ಟದಲ್ಲಿ ಆಶ್ರಯ ಮನೆ ಕಲ್ಪಿಸಿಕೊಳ್ಳುವವರಿಗೆ ಉಚಿತ ಮರಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.
ಬ್ಲಾಕ್ ಗಳನ್ನು ಗುರುತಿಸಿ
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಉಪಸಂರಕ್ಷಣಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಸಚಿವ ಮುರುಗೇಶ್ ನಿರಾಣಿ ಅವರು ತತ್‍ಕ್ಷಣವೇ ನದಿ ಪಾತ್ರಗಳಲ್ಲಿ ಒಂದು, ಎರಡು, ಮೂರನೆ ಶ್ರೇಣಿಯ ಮರಳು ಬ್ಲಾಕ್‍ಗಳನ್ನು ಗುರುತಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟರು.
ಕೆಎಸ್‍ಎಂಸಿಎಲ್, ಹೆಚ್‍ಜಿಎಂಎಲ್ ವತಿಯಿಂದ ನಾಲ್ಕು, ಐದು ಮತ್ತು ಆರನೆ ಶ್ರೇಣಿಯ ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಮರಳು ಬ್ಲಾಕ್‍ಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಿ ಕಾರ್ಯಾದೇಶ ನೀಡಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಇದು ಏಕೆ ಸಾಧ್ಯವಾಗಿಲ್ಲ. ಕೂಡಲೇ ಬ್ಲಾಕ್ ಗುರುತಿಸುವ ಕಾರ್ಯ ಮಾಡಿ ಎಂದು ಸೂಚಿಸಿದರು.
ಡ್ರೋಣ್ ಮೂಲಕ ಸಮೀಕ್ಷೆ ನಡೆಸಬೇಕು. ಹೊಸದಾಗಿ ಟೆಂಡರ್ ಕರೆಯುವುದು ಅಥವಾ ಮರು ಟೆಂಡರ್ ಕರೆದಾದರೂ ಬ್ಲಾಕ್‍ಗಳನ್ನು ಗುರುತಿಸಬೇಕು. ಇಲ್ಲಸಸಲ್ಲದ ಸಬೂಬು ಹೇಳಬೇಡಿ ಎಂದು ನಿರಾಣಿ ತಾಕೀತು ಮಾಡಿದರು.
ಈಗಾಗಲೇ ನೂತನ ಮರಳು ನೀತಿ ಸಿದ್ದವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆಸಿ ಅದಷ್ಟು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ. ಇದು ದೇಶಕ್ಕೆ ಮಾದರಿಯಾದ ನೀತಿ ಇದಾಗಲಿದೆ ಎಂದು ಅಭಿಪ್ರಾಯಪಟ್ಟರು.
ಗಣಿಬಾಧಿತ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾ ಅದಿರು ನಿಧಿಯಿಂದ ದೊಡ್ಡ ದೊಡ್ಡ ಯೋಜನೆಗಳನ್ನು ರೂಪಿಸಲು ವಿಸ್ತೃತ ಯೋಜನ ವರದಿ(ಡಿಪಿಆರ್) ಸಿದ್ದಪಡಿಸಲು ಸಚಿವ ನಿರಾಣಿ ಅವರು ಸೂಚಿಸಿದರು.ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ,ಸೇರಿದಂತೆ ಮತ್ತಿತರ ಜೊತೆ ಪ್ರತ್ಯೇಕವಾಗಿ ವಿಡಿಯೋ ಸಂವಾದ ನಡೆಸಿದ ಅವರು, ಕೂಡಲೇ ಡಿಪಿಆರ್ ಸಿದ್ದಪಡಿಸಲು ನಿದೇರ್ಶನ ನೀಡಿದರು.ಈ ಮೂರು ಜಿಲ್ಲೆಗಳಲ್ಲಿ ಡಿಎಂಎಪ್ ನಿಧಿಯಿಂದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲೀಕರಣ, ಸಮುದಾಯ ಭವನ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅವಕಾಶ ಇದೆ.
ಡಿಎಂಎಪ್ ನಿಧಿ ಬಳಕೆ ಮಾಡಿಕೊಳ್ಳುವ ಸಂಬಂಧ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಲಾಗುವುದು.ವಿಶೇಷವಾಗಿ ಚಿತ್ರದುರ್ಗ, ಬಳ್ಳಾರಿ, ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಜಾರಿ ಮಾಡುವ ಕುರಿತಾಗಿ ಡಿಪಿಆರ್ ಸಿದ್ದಪಡಿಸಬೇಕೆಂದು ಹೇಳಿದರು. ಇದಕ್ಕೆ ಸಮ್ಮತಿಸಿದ ಮೂರು ಜಿಲ್ಲೆಗಳ ಅಧಿಕಾರಿಗಳು ಅದಷ್ಟು ಶೀಘ್ರ ಇಲಾಖೆಗೆ ವಿಸ್ತೃತ ಯೋಜನ ವರದಿಯನ್ನು ಸಿದ್ದಪಡಿಸುವುದಾಗಿ ಭರವಸೆ ಕೊಟ್ಟರು.