Advertisement

ದುಪ್ಪಟ್ಟು ಬೆಲೆಯಲ್ಲಿ ಮರಳು ಮಾರಾಟ

11:03 PM Nov 27, 2019 | Team Udayavani |

ಉಡುಪಿ: ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಪ್ರಾರಂಭವಾಗಿದ್ದು, ಸರಕಾರ ನಿಗದಿ ಮಾಡಿರುವ ದರಕ್ಕಿಂತ ದುಪ್ಪಟ್ಟು ದರಕ್ಕೆ ಮರಳು ಮಾರಾಟ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‌ ಸದಸ್ಯ ಬಾಬು ಶೆಟ್ಟಿ ಹೇಳಿದರು.

Advertisement

ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ 18ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಕುಂದಾಪುರ ತಾಲೂಕಿನಲ್ಲಿ ದಕ್ಕೆಯಲ್ಲಿ ತೆಗೆದ ಮರಳನ್ನು ಸ್ಟಾಕ್‌ ಯಾರ್ಡ್‌ಗೆ ತಾರದೆ ನೇರವಾಗಿ ವಾಹನಗಳಿಗೆ ಲೋಡ್‌ ಮಾಡಲಾಗುತ್ತಿದೆ. ಪ್ರಭಾವಿಗಳಿಗೆ ಮಾತ್ರ ದೊರೆಯುತ್ತಿದ್ದು, ಬಡವರಿಗೆ ಸಿಗದಂತಾಗಿದೆ. ಸಾಂಪ್ರದಾಯಿಕ ಮರಳುಗಾರಿಕೆಗೆ ಜಿಲ್ಲೆಯಲ್ಲಿ 170 ಮಂದಿಗೆ ಅನುಮತಿ ನೀಡಲಾಗಿದೆ. 50 ಮಂದಿಯೂ ಸಮರ್ಪಕವಾಗಿ ಮರಳುಗಾರಿಕೆ ನಡೆಸುತ್ತಿಲ್ಲ. ಗುತ್ತಿಗೆ ಪಡೆದವರು ನಿಯಮ ಪಾಲಿಸುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂದಿನ ವ್ಯವಸ್ಥೆ ಮುಂದುವರಿಯಲಿ
ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಮರಳು ಕೊರತೆಯಿಂದ ಬಸವ ವಸತಿ ಯೋಜನೆಯ ಫ‌ಲಾನುಭವಿಗಳಿಗೆ ಮನೆ ಕಟ್ಟಲು ತೊಂದರೆಯಾಗಿದೆ. ಈ ಹಿಂದೆ ಇದ್ದಂತೆ ಪಿಡಬ್ಲೂéಡಿ ಯಾರ್ಡ್‌ನಲ್ಲಿ ಮರಳು ಸಿಗುವಂತೆ ಮಾಡಬೇಕು ಎಂದರು.

ಮತ್ತಷ್ಟು ದಿಬ್ಬ ಗುರುತಿಸಿ
ಸದಸ್ಯ ಶಶಿಕಾಂತ ಪಡುಬಿದ್ರಿ ಮಾತನಾಡಿ, ಪಡುಬಿದ್ರಿಯ ಅನೇಕ ಕಡೆ ಮರಳು ಇದೆ. ಅವುಗಳನ್ನು ಗುರುತಿಸಿ ಮರಳು ದಿಬ್ಬಗಳನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಅಕ್ರಮ ತಡೆಯಬೇಕೆಂದರು.

ಡಿಸಿ ಗಮನಕ್ಕೆ ತರಲಾಗುವುದು
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಂಜಿ ನಾಯ್ಕ ಮಾತನಾಡಿ, ಮರಳು ಗುತ್ತಿಗೆ ಪಡೆದವರು ನಿಯಮಗಳನ್ನು ಪಾಲಿಸದಿದ್ದಲ್ಲಿ ಮರಳು ಉಸ್ತುವಾರಿ ಸಮಿತಿಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಸಿಇಒ ಪ್ರೀತಿ ಗೆಹಲೋಟ್ ತಿಳಿಸಿದರು.

Advertisement

ಅಂಗನವಾಡಿಗಳಿಗೆ ಆರ್‌ಟಿಸಿ
ಜಿಲ್ಲೆಯಲ್ಲಿನ ಅಂಗನವಾಡಿಗಳ ಹೆಸರಲ್ಲಿ ಆರ್‌ಟಿಸಿ ಪಡೆಯುವ ಬಗ್ಗೆ ಸದಸ್ಯ ಜನಾರ್ದನ ತೋನ್ಸೆ ಆಗ್ರಹಿಸಿದರು. ಹಾವಂಜೆ ಅಂಗನವಾಡಿಯ ಆರ್‌ಟಿಸಿ ಆಗಿಲ್ಲವೆಂದು ತಿಳಿಸಿದರು. ಈ ಬಗ್ಗೆ ಸಿಇಒ ಪ್ರತಿಕ್ರಿಯಿಸಿ ಜಿಲ್ಲೆಯ ಎಲ್ಲ ಅಂಗನವಾಡಿಗಳ ಆರ್‌ಟಿಸಿ ಮಾಡಿಸಿ, ದಾಖಲೆಗಳನ್ನು ಮುಂದಿನ ಸಭೆಯೊಳಗೆ ಹಾಜರುಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌ಗೆ ಆದೇಶಿಸಿದರು.

ಪರಿಹಾರ ಸಿಕ್ಕಿಲ್ಲ
ಸದಸ್ಯ ಸುಧಾಕರ ಶೆಟ್ಟಿ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಬಜೆ ಅಣೆಕಟ್ಟಿನ ಸುತ್ತಮುತ್ತ ತೋಟಗಾರಿಕೆ ಬೆಳೆ, ಭತ್ತ, ಬಾಳೆ, ಅಡಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಿಲ್ಲವೆಂದರು. ಪರಿಶೀಲನೆ ನಡೆಸುವಂತೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸೂಚಿಸಲಾಗುವುದು ಎಂದು ಸಿಇಒ ತಿಳಿಸಿದರು. ಜಿ.ಪಂ. ಸಭೆಯಲ್ಲಿ ಚರ್ಚೆಯಾಗುವ ವಿಷಯಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಕಟ್ಟನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಹಿರಿಯಡಕ: ಮರಳು ವಿತರಣೆಗೆ ಉತ್ತಮ ಸ್ಪಂದನೆ
ಉಡುಪಿ: ಹಿರಿಯಡಕದ ಮರಳು ಸಂಗ್ರಹಾರದಲ್ಲಿ ಉಡುಪಿ ಇ-ಸ್ಯಾಂಡ್‌ ವೆಬ್‌ಸೈಟ್‌ ಮತ್ತು ಆ್ಯಪ್‌ ಮೂಲಕ ಮರಳನ್ನು ಗ್ರಾಹಕರಿಗೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎರಡೇ ದಿನಗಳಲ್ಲಿ ಭರಪೂರ ಸ್ಪಂದನೆ ವ್ಯಕ್ತವಾಗಿದೆ. ದಿನವೊಂದಕ್ಕೆ 100ಕ್ಕೂ ಅಧಿಕ ಲೋಡ್‌ ಮರಳು ಆ್ಯಪ್‌ ಮೂಲಕ ಬುಕ್‌ ಆಗುತ್ತಿವೆ.

ಸೋಮವಾರ 220ರಿಂದ 230 ಲೋಡು ಮರಳು ಮಾತ್ರ ದಾಸ್ತಾನು ಇತ್ತು. ಸೋಮವಾರ ಒಂದೇ ದಿನದಲ್ಲಿ ಆ್ಯಪ್‌ ಮೂಲಕ 112 ಲೋಡ್‌ ಮರಳು ಬುಕ್‌ ಮಾಡಲಾಗಿತ್ತು. ಬೇಡಿಕೆಯಷ್ಟು ಮರಳು ಪೂರೈಕೆ ಇಲ್ಲದಿರುವುದರಿಂದ ಬುಧವಾರ ಮಧ್ಯಾಹ್ನದ ಅನಂತರ ಮರಳು ಬುಕಿಂಗ್‌ ಆಗುತ್ತಿರಲಿಲ್ಲ. ಗುರುವಾರ ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 213 ಲೋಡ್‌ ಮರಳು ಮುಂಗಡ ಬುಕ್‌ ಆಗಿದ್ದು ಮೂರು ದಿನಗಳಲ್ಲಿ 47 ಲೋಡು ಮರಳನ್ನು ಗ್ರಾಹಕರಿಗೆ ನೀಡಲಾಗಿದೆ. ಗ್ರಾಹಕರು 9741859746 ಸಂಖ್ಯೆಗೆ ಮುಂಗಡ ಕರೆ ಮಾಡಿ ಮರಳು ಲಭ್ಯತೆ ಇರುವ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next