Advertisement

ಮರಳು ಅಭಾವ ತೀವ್ರ: ಜಾರಿಯಾಗದ ನೂತನ ಮರಳು ನೀತಿ

06:00 AM Sep 28, 2018 | |

ಬಸ್ರೂರು: ಈಗಾಗಲೇ ಸಾಂಪ್ರದಾಯಿಕ ಮರಳು ಕಾರ್ಮಿಕರಿಗೆ ಕೆಲಸವಿಲ್ಲದೆ ಕೈಚೆಲ್ಲಿ ಕುಳಿತಿದ್ದಾರೆ. ಇದೀಗ ಕುಂದಾಪುರ ತಾಲೂಕಿನ ಬಹುತೇಕ ಗ್ರಾ.ಪಂ.ಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಮರಳು ಅಭಾವ ಕಂಡು ಬಂದು ಗ್ರಾಮಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ, ಸದಸ್ಯರು ಶೀಘ್ರ ಕಾಮಗಾರಿಗಳಿಗೆ ಮರಳು ಬೇಕಾಗಿದೆ ಇನ್ನು 15 ದಿನಗಳಲ್ಲಿ ಮರಳು ಸಿಗದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎನ್ನುವ ನಿರ್ಣಯ ತೆಗೆದುಕೊಂಡಿದ್ದಾರೆ.

Advertisement

ಸಿ.ಆರ್‌.ಝಡ್‌., ನಾನ್‌ ಸಿ.ಆರ್‌.ಝಡ್‌. ಮರಳುಗಾರಿಕೆ ಪ್ರದೇಶವೆಂದು ಕೆಲವೆಡೆ ಗುರುತಿಸಲಾಗಿದ್ದರೂ ಯಾರಿಗೂ ನದಿ ತಟದಲ್ಲಿ ಮರಳು ತೆಗೆಯಲು ಅನುಮತಿ ನೀಡಿಲ್ಲದಿರುವುದು ವಿಪರ್ಯಾಸ. ಉಸ್ತುವಾರಿ ಸಚಿವರೂ ಈ ಬಗ್ಗೆ ಶೀಘ್ರ ನಿರ್ಣಯ ತೆಗೆದುಕೊಳ್ಳಲಾಗುವುದೆಂದು ಹೇಳಿದ್ದಾರೆ ಎನ್ನುವ ಹೇಳಿಕೆಯಷ್ಟೆ ಉಳಿದಿದೆ!

ಡಿಸಿ ಮೇಲೆ ದಾಳಿ
ಎರಡು ವರ್ಷಗಳ ಹಿಂದೆ ಕಂಡ್ಲೂರಿನಲ್ಲಿ ನದಿ ತಟದ ಅಕ್ರಮ ಮರಳು ಅಡ್ಡೆಯ ಮೇಲೆ ಉಡುಪಿ ಜಿಲ್ಲಾಧಿಕಾರಿ ದಾಳಿ ನಡೆಸಿದ್ದು ರಾಜ್ಯ ಮಟ್ಟದ ಸುದ್ದಿಯಾಗಿತ್ತು. ಅಂದು ಜಿಲ್ಲಾಧಿಕಾರಿಗಳ ಮೇಲೆ ಹಲ್ಲೆ ನಡೆಸಲೆತ್ನಿಸಿದ ಹಲವು ಮಂದಿಯನ್ನು ಬಂಧಿಸಲಾಗಿತ್ತು. ಕೆಲವು ಉತ್ತರ ಭಾರತದ ಮರಳು ಕಾರ್ಮಿಕರನ್ನು ಗಡೀಪಾರು ಮಾಡಲಾಗಿತ್ತು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ.

ಘೋಷಣೆಯಷ್ಟೆ
ಜಿಲ್ಲಾಧಿಕಾರಿಗಳ ದಾಳಿಯ ತತ್‌ಕ್ಷಣ ಬಸ್ರೂರು, ಕಂಡ್ಲೂರು, ಜಪ್ತಿ, ಬಳ್ಕೂರು, ಗುಲ್ವಾಡಿ, ಆನಗಳ್ಳಿ ಮುಂತಾದೆಡೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ನಿಂತು ಹೋಗಿತ್ತು. ಅನಂತರದ ದಿನಗಳಲ್ಲಿ ಹಿಂದಿನ ಸರಕಾರ ಈ ಬಗ್ಗೆ ಸದನ ಸಮಿತಿಯನ್ನು ರಚಿಸಿತ್ತು. ಉಡುಪಿ, ದ.ಕ., ಉ.ಕನ್ನಡಕ್ಕಾಗಿಯೇ ಪ್ರತ್ಯೇಕ ಮರಳು ನೀತಿಯನ್ನು ಶೀಘ್ರ ರಚಿಸಲಾಗುವುದು ಎಂದು ಸಚಿವರೂ ಹೇಳಿದ್ದರು. ಆದರೆ ಎರಡು ವರ್ಷ ಕಳೆದರೂ ನೂತನ ಮರಳು ನೀತಿ ಜಾರಿಯಾಗಲೇ ಇಲ್ಲ!

ಕಟ್ಟಡ ಕಾರ್ಮಿಕರು ಕುಂದಾಪುರ ಉಪ ವಿಭಾಗಾಧಿಕಾರಿಗಳ ಕಚೆೇರಿಯೆದುರು ಪ್ರತಿಭಟನೆ ನಡೆಸಿದರು. ಮರಳು ವಾಹನಗಳ ಚಾಲಕ-ಮಾಲಕರು ತಾಲೂಕು ಕೇಂದ್ರದಲ್ಲಿ ಮರಳು ನೀತಿ ರೂಪಿಸಲು ಪ್ರತಿಭಟನೆ ನಡೆಸಿದರು.

Advertisement

ಕಾಮಗಾರಿಗಳೆಲ್ಲ ಸ್ಥಗಿತ
ಬಹುತೇಕ ಗ್ರಾ.ಪಂ.ಗಳ ಆಶ್ರಯ ಮನೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಸಹಿತ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ನಾನ್‌ ಸಿ.ಆರ್‌.ಝಡ್‌. (ಸಿಹಿ ನೀರಿನ ಪ್ರದೇಶದ ಮರಳು) ಮರಳಿಗೆ ಬಹುಬೇಡಿಕೆಯಿದ್ದು ಅದೀಗ ಸಿಗುತ್ತಿಲ್ಲ. ಈ ಬಗ್ಗೆ ಯಾವ ನಿರ್ಣಯ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ.
– ಸದಾನಂದ ಬಳ್ಕೂರು, 
ನಾನ್‌ ಸಿ.ಆರ್‌.ಝಡ್‌. ಮರಳು ದೋಣಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ

– ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next