Advertisement
ಆ. 15ರಿಂದ ಮರಳುಗಾರಿಕೆ ಆರಂಭವಾಗಬಹುದೆಂಬ ನಿರೀಕ್ಷೆ ಇದ್ದರೂ ಈವರೆಗೂ ಮರಳುಗಾರಿಕೆ ಆರಂಭವಾಗಿಲ್ಲ. ಪರಿಣಾಮ ಸಿಮೆಂಟ್, ಕಬ್ಬಿಣ, ಪೈಂಟ್, ಹೊಟೇಲ್, ದಿನಸಿ, ಟೆಕ್ಸ್‌ಟೈಲ್ಸ್ ಮತ್ತು ಇನ್ನಿತರ ಎಲ್ಲ ವ್ಯವಹಾರಗಳು ಸಂಪೂರ್ಣವಾಗಿ ಕುಸಿದಿವೆ. ಸರಕಾರಿ ಅಭಿವೃದ್ಧಿ ಕಾಮಗಾರಿಗಳೂ ಸ್ಥಗಿತಗೊಂಡಿವೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಳೆಗಾಲ ತಿಂಗಳುಗಳಲ್ಲಿ ಮರಳುಗಾರಿಕೆ ನಡೆಯಲ್ಲ. ಇದು ಶುರುವಾಗುವುದು ಸೆಪ್ಟೆಂಬರ್‌ನಲ್ಲಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಅವಶ್ಯ ಇರುವಷ್ಟು ಮರಳನ್ನು ವ್ಯಾಪಾರಿಗಳು ದಾಸ್ತಾನು ಇರಿಸುತ್ತಿದ್ದರು. ಆದರೆ ಮರಳು ದಾಸ್ತಾನು ಮಾಡಲೂ ಆಗದೇ ನದಿಯಿಂದ ತೆಗೆಯಲೂ ಆಗದೇ ಸಮಸ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಈ ವರ್ಷ ಮರಳುಗಾರಿಕೆ ಆರಂಭದ ಲಕ್ಷಣಗಳೂ ಕಂಡುಬರುತ್ತಿಲ್ಲ. ಈ ವಿಳಂಬವೇಕೆ ಎಂದೂ ಗೊತ್ತಾಗುತ್ತಿಲ್ಲ! ಮಾರುಕಟ್ಟೆ ಮೇಲೆ ಹಿಡಿತ
ಅಚ್ಚರಿ ಎಂದರೆ ಜಿಲ್ಲೆಯಲ್ಲಿ ಮರಳುಗಾರಿಕೆ ಮಾರುಕಟ್ಟೆ ಹಿಡಿತವನ್ನೂ ಹೊಂದಿದೆ! ಮರಳು ಸರಬರಾಜು ಇಲ್ಲದ ಕಾರಣ ಕಟ್ಟಡ, ಮನೆ, ರಸ್ತೆ ಕಾಂಕ್ರೀಟ್ ಕಾಮಗಾರಿಗಳು ಸ್ಥಗಿತಗೊಂಡಿದೆ. ಗುತ್ತಿಗೆದಾರರು, ಜತೆಗೆ ಗಾರೆ ಕಾರ್ಮಿಕರು, ಬಾರ್‌ಬೆಂಡರ್, ಲಕ್ಷಾಂತರ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಜಿಲ್ಲೆಯ ವ್ಯವಹಾರ ಶೇ. 30ರಿಂದ 40ರಷ್ಟು ಕುಸಿದಿದೆ ಎನ್ನಲಾಗುತ್ತಿದೆ.
Related Articles
2010ಕ್ಕೂ ಹಿಂದೆ ಒಂದು ಲೋಡ್ ಮರಳಿಗೆ ಜಿಲ್ಲೆಯಲ್ಲಿ 1,500ರಿಂದ 2,000 ರೂ. ಇತ್ತು. ಕೇರಳದಲ್ಲಿ ಮರಳು ನಿಷೇಧವಾದ ಬಳಿಕ ಆ ರಾಜ್ಯಕ್ಕೆ ಅಕ್ರಮ ಸಾಗಾಟ ಆರಂಭವಾಗಿದ್ದು, ಬೆಲೆ ಏರಿಕೆಗೆ ಕಾರಣವಾಯಿತು. ಬೆಂಗಳೂರು ಹಾಗೂ ಹೊರಜಿಲ್ಲೆಗಳಿಗೂ ಸಾಗಾಟ ಶುರುವಾಗಿ ದಂಧೆಯಾಗಿ ಪರಿವರ್ತನೆಯಾಯಿತು. ಪರಿಣಾಮ ಸರಕಾರ ಕೆಲ ಕಾನೂನು ಜಾರಿಗೊಳಿಸಿತು. ಈಗಿನ ನಿಯಮಾವಳಿ ಪ್ರಕಾರ ಒಂದು ಲೋಡ್ ಮರಳಿಗೆ ಗಣಿ ಇಲಾಖೆಗೆ 650 ರೂ. ಪಾವತಿಸಬೇಕು. ಲಾರಿ ಬಾಡಿಗೆ, ಲೋಡಿಂಗ್ ಅನ್‌ಲೋಡಿಂಗ್ ಕೆಲಸ ಸೇರಿ ಗರಿಷ್ಠ ಎಂದರೆ ಸುಮಾರು 6,000 ರೂ.ಗೆ ಸಿಗಬೇಕು. ಆದರೆ ಈ ಬೆಲೆಗೆ ಮರಳು ಸಿಗುವುದೇ ಕಷ್ಟ. 15, 20 ಸಾವಿರ ನೀಡಲು ಒಪ್ಪಿದರೆ ಮಾತ್ರ ಮರಳು ಬಂದು ಬೀಳುತ್ತದೆ ಎಂಬಂತಾಗಿದೆ.
Advertisement
ಸಮರ್ಪಕ ಮರಳು ನೀತಿ ಅನುಷ್ಠಾನವಾಗಲಿಅಕ್ರಮ ಮರಳು ಸಾಗಾಟಕ್ಕೆ ಭಾರೀ ದಂಡ ಹಾಕುವ ಅವಕಾಶವಿದೆ. ಲಾರಿಗಳು ಅಕ್ರಮವಾಗಿ ಮರಳು ಸಾಗಾಟ ಮಾಡುವುದು ಬೆಳಕಿಗೆ ಬಂದರೆ, ಲಾರಿ ವಶಪಡಿಸಿ, ಲಾರಿಯ ನಿಗದಿತ ಬೆಲೆಯ ಅರ್ಧದಷ್ಟು ಮೊತ್ತ ದಂಡ ಹಾಕಬಹುದು. ಇಷ್ಟಾದರೂ ಅಕ್ರಮ ಸಾಗಾಟ ನಿಂತಿಲ್ಲ. ನೆರೆಯ ಉಡುಪಿ ಜಿಲ್ಲೆಯಲ್ಲಿ ಮರಳು ಸಾಗಾಟದ ಬಗ್ಗೆ ಗೊಂದಲವಿಲ್ಲ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಮರ್ಪಕವಾದ ಮರಳು ನೀತಿ ಅನುಷ್ಠಾನಗೊಳ್ಳಬೇಕು ಎಂದು ನಾಗರಿಕರ ಆಗ್ರಹವಾಗಿದೆ. ಉದಯಶಂಕರ್ ನೀರ್ಪಾಜೆ