ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮರಳು ವಿತರಣೆ ಕುರಿತಂತೆ ಸ್ಯಾಂಡ್ ಬಜಾರ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು ಸದ್ಯದಲ್ಲೇ ಈ ಆ್ಯಪ್ ಮೂಲಕ ಸಾರ್ವ ಜನಿಕರಿಗೆ ಮರಳು ಪಡೆಯ ಬಹುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಗುರುವಾರ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಮರಳು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಜನರಿಗೆ ಕಡಿಮೆ ದರದಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಮನೆ ಬಾಗಿಲಿಗೆ ಮರಳು ತಲುಪಿಸುವ ಕುರಿತಂತೆ ಜಿಲ್ಲಾಡಳಿತದ ವತಿಯಿಂದ ಸ್ಯಾಂಡ್ ಬಜಾರ್ ಆ್ಯಪ್ ರೂಪಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಆರಂಭವಾಗಿರುವ ಆ್ಯಪ್ ಮಾದರಿಯಲ್ಲಿಯೇ ಉಡುಪಿ ಜಿಲ್ಲೆಗೆ ಸಂಬಂಧಿಸಿ ಆ್ಯಪ್ ಸಿದ್ಧಗೊಳ್ಳುತ್ತಿದೆ. ಈ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಆ್ಯಪ್‌ನಲ್ಲಿ ಅಳವಡಿಸಬಹುದಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆ್ಯಪ್ ಅಭಿವೃದ್ಧಿಪಡಿಸುವ ಸಂಸ್ಥೆಗೆ ನೀಡಲಾಗಿದೆ. ಆ್ಯಪ್ ಸಂಪೂರ್ಣ ವಾಗಿ ಸಿದ್ಧಗೊಂಡ ಬಳಿಕ ಸಾರ್ವಜ ನಿಕರಿಗೆ ಮರಳು ವಿತರಣೆ ಕುರಿತಂತೆ ಯಾವುದೇ ಗೊಂದಲಗಳಿಗೆ ಆಸ್ಪದ ವಾಗದಂತೆ ಅದರ ಮೂಲಕವೇ ಮರಳು ವಿತರಿಸಲಾಗುವುದು ಎಂದರು. ಶೀಘ್ರದಲ್ಲಿ ಆಪ್ ಸಿದ್ಧಪಡಿ ಸುವಂತೆ ಸಂಬಂಧಪಟ್ಟ ಸಂಸ್ಥೆಗೆ ಸೂಚಿಸಿದರು.
ಆ್ಯಪ್ ಬಳಕೆಗೆ ಸಿದ್ಧಗೊಂಡ ಅನಂತರ ಮರಳು ಗುತ್ತಿಗೆದಾರರು ಮತ್ತು ಮರಳು ಸಾಗಾಟ ಮಾಡುವ ವಾಹನಗಳ ಚಾಲಕರಿಗೆ ಆ್ಯಪ್ ಬಳಕೆ ಕುರಿತಂತೆ ಸಂಪೂರ್ಣ ಮಾಹಿತಿ ಕುರಿತ ತರಬೇತಿ ಕಾರ್ಯಾಗಾರ ಏರ್ಪಡಿಸುವುದಾಗಿ ಮತ್ತು ಸಾರ್ವಜನಿಕರಿಗೆ ಸಹ ಆ್ಯಪ್ ಬಳಕೆ ಕುರಿತು ಮಾಹಿತಿ ನೀಡುವುದಾಗಿ ಹೆಪ್ಸಿಬಾ ರಾಣಿ ತಿಳಿಸಿದರು.
ಆ್ಯಪ್‌ನಲ್ಲಿ ಅಳವಡಿಸಬಹುದಾದ ಅಂಶಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರನ್, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರಾಂಜಿ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವೈಶಿಷ್ಟ ಗಳು
ಸ್ಯಾಂಡ್ ಬಜಾರ್ ಆ್ಯಪ್ ಬಳಸುವ ಮೂಲಕ ಸಾರ್ವಜನಿಕರು, ತಮಗೆ ಸಮೀಪದ ಸ್ಥಳದಿಂದಲೇ ಮರಳು ಪಡೆಯಬಹುದಾಗಿದೆ. ಆನ್‌ಲೈನ್‌ನಲ್ಲಿ ಮರಳಿಗೆ ಸಂಬಂಧಪಟ್ಟ ದರ ವೀಕ್ಷಿಸಿ ಆನ್‌ಲೈನ್ ಪಾವತಿ ಮಾಡಿದಲ್ಲಿ ಮನೆ ಬಾಗಿಲಿಗೆ ಮರಳು ತಲುಪಲಿದ್ದು ಪ್ರತ್ಯೇಕ ವಾಹನ ಬಾಡಿಗೆ ಪಾವತಿಸುವ ಅಗತ್ಯವಿಲ್ಲ. ಅಲ್ಲದೇ ತಾವು ಮರಳು ಬುಕ್ ಮಾಡಿದ ಅನಂತರ ಮರಳು ಲೋಡ್ ಆದ ಬಗ್ಗೆ ಯಾವ ವಾಹನದಲ್ಲಿ ಬರುತ್ತಿದೆ ಎನ್ನುವ ಬಗ್ಗೆ ಪ್ರತಿಯೊಂದು ಮಾಹಿತಿಯು ನಿಮ್ಮ ಮೊಬೈಲಿಗೆ ಬರಲಿದೆ. ಅತ್ಯಂತ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಯಲಿದೆ. ಮರಳು ಗುತ್ತಿಗೆದಾರರ ಮತ್ತು ಮರಳು ಸಾಗಾಟ ಮಾಡುವ ವಾಹನಗಳ ನೋಂದಣಿ ಸಹ ಆ್ಯಪ್‌ನಲ್ಲಿ ನಡೆಯಲಿದೆ ಎಂದು ಡಿಸಿ ಹೇಳಿದರು.