ಸಂಚಾರಿ ವಿಜಯ್ ಈಗ ಮಲಯಾಳಂ ಕಡೆ ಮುಖ ಮಾಡಿದ್ದಾರೆ. ಕನ್ನಡದಲ್ಲೇ ಭರಪೂರ ಅವಕಾಶಗಳಿದ್ದಾಗ, ಅತ್ತ ಹೋಗಿದ್ದೇಕೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಸಂಚಾರಿ ವಿಜಯ್‌ಗೂ ಪ್ರಯೋಗಾತ್ಮಕ ಸಿನಿಮಾಗಳಿಗೂ ಅವಿನಾಭಾವ ಸಂಬಂಧ. ಈ ವರ್ಷ ಅವರದೇ ಒಂದು ಚಿತ್ರೋತ್ಸವ ನಡೆಸುವಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಹೀಗಿರುವಾಗ, ಅವರೀಗ ಸದ್ದಿಲ್ಲದೆಯೇ ಮಲಯಾಳಂನ “ಥಿಯೇಟರ್’ ಹೆಸರಿನ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಮೊದಲ ಹಂತ ಮುಗಿಸಿಕೊಂಡು ಬಂದಿರುವ ಸಂಚಾರಿ ವಿಜಯ್, ಇನ್ನೊಂದು ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ.
ಸರುಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮತ್ತೂಂದು ಪ್ರಯೋಗಾತ್ಮಕ ಚಿತ್ರವಿದು. ಮಧು ಹಂಬಟ್ ಚಿತ್ರಕ್ಕೆ ಛಾಯಗ್ರಹಣವಿದೆ. ತಾಂತ್ರಿಕ ವಿಚಾರದಲ್ಲಿ ಸಿನಿಮಾ ಅದ್ಧೂರಿಯಾಗಿದೆ ಎನ್ನುವ ವಿಜಯ್, “ಥಿಯೇಟರ್’ ಹೇಗೆ ವಿಭಿನ್ನ ಎಂಬುದನ್ನು ವಿವರಿಸುವುದು ಹೀಗೆ. “ಸ್ಟೇಜ್ ಮೇಲೆ ಮಾಡುವ ಯಥಾವತ್ ಪ್ರಯೋಗವನ್ನೇ, ಕ್ಯಾಮೆರಾ ಮುಂದೆ ನಿಂತು ಒಂದೇ ಜಾಗದಲ್ಲಿ ದೊಡ್ಡ ದೃಶ್ಯಗಳನ್ನು ಚಿತ್ರೀಕರಿಸಿರುವುದು ವಿಶೇಷ. ಅದೊಂದು ಮರೆಯದ ಅನುಭವ. ಆ ಚಿತ್ರದಲ್ಲಿ ನಾನು ಪೊಲೀಸ್ ತನಿಖಾಧಿಕಾರಿ ಪಾತ್ರ ಮಾಡುತ್ತಿದ್ದೇನೆ. ಗ್ಯಾಂಗ್ ರೇಪ್, ಚೀಟಿಂಗ್ ಮಾಡುವರನ್ನು ಹಿಡಿದು ಸದೆ ಬಡಿಯುವುದು, ಇದರೊಂದಿಗೆ ಸೂಕ್ಷ್ಮ ಅಂಶಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.
ಆ ಪೊಲೀಸ್ ಅಧಿಕಾರಿ, ಒಮ್ಮೆ ವೇಶ್ಯೆಯೊಬ್ಬಳನ್ನು ಭೇಟಿ ಮಾಡಿ, ನೀನೇಕೆ ಈ ವೃತ್ತಿಯಲ್ಲಿದ್ದೀಯ ಅಂದಾಗ, ಆಕೆ, ತಂದೆಯಿಂದ ಅತ್ಯಾಚಾರಕ್ಕೊಳಗಾಗಿದ್ದು, ನಂತರ ಗಂಡನಿಂದಲೂ ಅತ್ಯಾಚಾರವಾಗಿದ್ದು, ಸ್ನೇಹಿತರಿಂದ ಸಹ ಅದೇ ತಪ್ಪು ನಡೆದಿದ್ದರಿಂದ, ಅದಕ್ಕೆ ಹೊಂದಿಕೊಂಡು, ವೇಶ್ಯೆಯಾದ ಬಗ್ಗೆ ವಿವರಿಸುತ್ತಾಳೆ. ಅದರ ಹಿಂದಿನ ಘಟನೆ ಬೆನ್ನತ್ತುವ ಪಾತ್ರವದು. ಇಡೀ ಸಿನಿಮಾ ಒಂದೇ ಬೀಚ್‌ನ ಜಾಗದಲ್ಲಿ ನಡೆದುಹೋಗುತ್ತದೆ’ ಎಂದು ಹೇಳುತ್ತಾರೆ ವಿಜಯ್.
“ಮಲಯಾಳಂ ನಟ ಮನೋಜ್ ಅವರು ಯಕ್ಷಗಾನ ಕಲೆಯಲ್ಲಿ ನಿಪುಣ. ಅಂತಹ ಕಲೆಯಲ್ಲಿರುವ ದೈವಕಲೆ ಬಗ್ಗೆ ಸಂಶೋಧನೆ ಮಾಡಲು ವಿದೇಶದಿಂದ ಒಬ್ಟಾಕೆ ಬರುತ್ತಾಳೆ. ಅವಳ ಮೇಲೆ ಆತ ಅತ್ಯಾಚಾರ ಎಸಗುತ್ತಾನೆ. ಅಲ್ಲಿಂದ ಶುರುವಾಗುವ ತನಿಖೆ ಚಿತ್ರದ ಕುತೂಹಲ ಕೆರಳಿಸುತ್ತೆ. ಇದುವರೆಗೆ ಹದಿನೆಂಟು ದಿನಗಳ ಕಾಲ ಚಿತ್ರೀಕರಣವಾಗಿದ್ದು, ಇನ್ನು ಏಳು ದಿನಗಳ ಚಿತ್ರೀಕರಣವಾದರೆ ಚಿತ್ರ ಮುಗಿಯಲಿದೆ. ಮಲಯಾಳಂನಲ್ಲೇ ಸಂಭಾಷಣೆ ಹೇಳಿದ್ದೇನೆ.
ಅಲ್ಲಿನ ಸಹಾಯಕ ನಿರ್ದೇಶಕರು ಹೇಳಿಕೊಟ್ಟಿದ್ದರಿಂದ ಸುಲಭವಾಯಿತು. ನಾನೊಬ್ಬ ನಟ. ಕಲೆಗೆ ಭಾಷೆಯ ಗಡಿ ಇಲ್ಲ. ಹಾಗಾಗಿ ಮಲಯಾಳಂ ಚಿತ್ರದಲ್ಲಿ ನಟಿಸಿದ್ದೇನೆ. ಇಲ್ಲೇ ಬಿಜಿ ಇದ್ದೇನೆ. ಹಾಗೆ ನೋಡಿದರೆ, ಈ ವರ್ಷ ಆರು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಈಗಾಗಲೇ “ವರ್ತಮಾನ’ ರಿಲೀಸ್ ಆಗಿದೆ. ಕೈಯಲ್ಲಿ “ಕೃಷ್ಣ ತುಳಸಿ’, “ಆರನೇ ಮೈಲಿ’, “ಪಾದರಸ’, “ಆಡುವ ಗೊಂಬೆ’, “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಮತ್ತು “ಮೇಲೊಬ್ಬ ಮಾಯಾವಿ’ ಚಿತ್ರಗಳಿವೆ. ಎಲ್ಲವೂ ಈ ವರ್ಷ ತೆರೆಗೆ ಬಂದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಅವರು.