ಕುಂದಾಪುರ:ಶಿಕ್ಷಣ ಕೇವಲ ಪಾಠ, ಪ್ರವಚನಗಳಿಗೆ ಮಾತ್ರ ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟರೆ ಇಂತಹ ಹೊಸ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತ ಅಧಿಕಾರಿ ಡಾ.ಎಚ್.ಶಾಂತರಾಮ್ ಹೇಳಿದರು.
ಅವರು ಶನಿವಾರ ಸಂಜೆ ಭಂಡಾರ್ ಕಾರ್ಸ್ ಕಾಲೇಜಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಸಂಚಲನ ಕಿರು ಚಿತ್ರದ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಯುವಕರಿಗೆ ಸಾಕಷ್ಟು ಅವಕಾಶ ಕೊಟ್ಟು ಪ್ರೋತ್ಸಾಹ ನೀಡಿದರೆ ಉತ್ತಮ ಸಾಧನೆ ಮಾಡಬಲ್ಲರು. ಅದಕ್ಕೆ ನಾವು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಉದ್ಘಾಟನೆಗೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ಸಮಾರಂಭದ ಬಳಿಕ ಸಂಚಲನ ಕಿರು ಚಿತ್ರದ ಟೀಸರ್ ಅನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿದರು. ಇಂದು ರಾತ್ರಿ 10ಗಂಟೆಗೆ ಯೂಟ್ಯೂಬ್ ನಲ್ಲಿ ಸಂಚಲನ ಕಿರು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಸಂಚಲನ ತಂಡ ತಿಳಿಸಿದೆ.
ಕುಂದಾಪುರದ ಹಿರಿಯ ನ್ಯಾಯವಾದಿ ಎಎಸ್ಎನ್ ಹೆಬ್ಬಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಂಡಾರ್ ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ, ನಿಯೋಜಿತ ಗವರ್ನರ್ ರೋಟರಿ ಅಭಿನಂದನ್ ಎ ಶೆಟ್ಟಿ, ಸ್ಪಂದನ ಟಿವಿ ಆಡಳಿತ ನಿರ್ದೇಶಕ ವಿಲಾಸ್ ನಾಯಕ್, ಸಂಚಲನ ಕಿರುಚಿತ್ರದ ನಿರ್ಮಾಪಕ ರಾಘವೇಂದ್ರ ಶೇರಿಗಾರ್, ನಾಯಕ ನಟ ರಥೀಕ್ ಮುರುಡೇಶ್ವರ್, ನಾಯಕಿ ಶ್ರೀನಿಧಿ ಶೆಟ್ಟಿ, ಕಥಾ ಸಂಕಲನಕಾರ ಪ್ರಶಾಂತ್ ಗೋಪಾಡಿ, ಸಿವಿಲ್ ಇಂಜಿನಿಯರ್ ಸುಧೀರ್ ಕುಮಾರ್ ಮಾರ್ಕೋಡು, ಬಂಟರ ಯಾನೆ ನಾಡವರ ಸಂಘದ ಸಹ ಸಂಚಾಲಕ ಸುಧಾಕರ ಶೆಟ್ಟಿ ಆವರ್ಸೆ, ಸಂಚಲನ ಚಿತ್ರದ ನಿರ್ದೇಶಕ ಅರ್ಜುನ್ ದಾಸ್, ಮಹಿಳಾ ಒಕ್ಕೂಟದ ತಾಲೂಕು ಅಧ್ಯಕ್ಷೆ ರಾಧಾ ದಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಕೀಲರಾದ ರವಿಕಿರಣ್ ಮುರುಡೇಶ್ವರ್ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.