ಬೆಂಗಳೂರು: ಭಾರತ ಜೋಡೋ ಸಂವಿಧಾನ ಬಚಾವೋ ಘೋಷಣೆಯಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾತ್ರೆ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಧರ್ಮಸೇನ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ವತಿಯಿಂದ ನಮಗೆ ಈ ಹೊಣೆಗಾರಿಕೆ ನೀಡಿದ್ದು, ಈ ಯಾತ್ರೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತೆಗೆದುಕೊಂಡು ಹೋಗಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷರು ನ. 28ರಂದು ಚಿತ್ರದುರ್ಗದಲ್ಲಿ ಉದ್ಘಾಟನೆ ಮಾಡಲಿದ್ದು, ಅಂದು ಬೆಳಗ್ಗೆ 10 ಕಿ.ಮೀ. ದೂರ ಯಾತ್ರೆ ಹಮ್ಮಿಕೊಳ್ಳಲಾಗಿದೆ. ನಂತರ ಮಧ್ಯಾಹ್ನ ದಾವಣಗೆರೆಯಲ್ಲಿ 10 ಕಿ.ಮೀ., ಮರುದಿನ ಹಾವೇರಿಯಲ್ಲಿ ಬೆಳಗ್ಗೆ 10 ಕಿ.ಮೀ., ಗದಗದಲ್ಲಿ 10 ಕಿ.ಮೀ. ಯಾತ್ರೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿನಿತ್ಯ ಎರಡು ಘಟಕಗಳು ಇದರ ಜವಾಬ್ದಾರಿ ಹೊಂದಿವೆ. ಮೊದಲ ದಿನ ಪರಿಶಿಷ್ಟ ಜಾತಿ ವಿಭಾಗ ಹಾಗೂ ಅಸಂಘಟಿತ ಕಾರ್ಮಿಕ ವಿಭಾಗ ಜವಾಬ್ದಾರಿ ಹೊತ್ತಿದೆ. ಎರಡನೇ ದಿನ ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ವಿಭಾಗ ಹಾಗೂ ಮೀನುಗಾರಿಕೆ ವಿಭಾಗ ಜವಾಬ್ದಾರಿ ಹೊತ್ತಿದೆ. ಮೂರನೇ ದಿನ ಬೆಳಗ್ಗೆ ಹುಬ್ಬಳ್ಳಿಯಲ್ಲಿ 10 ಕಿ.ಮೀ, ಮಧ್ಯಾಹ್ನ ಧಾರವಾಡ ಗ್ರಾಮೀಣದಲ್ಲಿ 10.ಕಿ.ಮೀ ಯಾತ್ರೆ ಮಾಡಲಿದ್ದು, ಕಾರ್ಮಿಕ ವಿಭಾಗ ಹಾಗೂ ಹಿಂದುಳಿದ ವರ್ಗದ ವಿಭಾಗ ಜವಾಬ್ದಾರಿ ನಿರ್ವಹಿಸಲಿದೆ. ನಾಲ್ಕನೇ ದಿನ ಬೆಳಗ್ಗೆ ಬೆಳಗಾವಿಯಲ್ಲಿ 10 ಕಿ.ಮೀ, ಮಧ್ಯಾಹ್ನ ಚಿಕ್ಕೊಡಿಯಲ್ಲಿ 10. ಕಿ.ಮೀ ಯಾತ್ರೆ ಸಾಗಲಿದೆ. ಐದನೇ ದಿನ ಹುಬ್ಬಳ್ಳಿಯ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಈ 9 ವಿಭಾಗಗಳೂ ಸೇರಿ ಬೃಹತ್ ಸಮಾವೇಶ ಮಾಡಲಾಗುವುದು ಎಂದರು.
ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಘಟಕದ ಮುಖ್ಯಸ್ಥ ನಾರಾಯಣಸ್ವಾಮಿ, ಕಾರ್ಮಿಕ ವಿಭಾಗದ ಮುಖ್ಯಸ್ಥ ಪುಟ್ಟಸ್ವಾಮಿಗೌಡ ಉಪಸ್ಥಿತರಿದ್ದರು.