ಸ್ಯಾಮ್ ಸಂಗ್ ಬ್ರಾಂಡ್, ಭಾರತದಲ್ಲಿ ಚಿರಪರಿಚಿತ ಹೆಸರು. ಚೀನಾ ಕಂಪೆನಿಯ ಮೊಬೈಲ್ ಕಂಪೆನಿಗಳ ಪೈಪೋಟಿಯ ನಡುವೆಯೂ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಗ್ರಾಹಕರ ಮನಸ್ಸಿನಲ್ಲಿ ತನ್ನದೇ ಸ್ಥಾನ ಉಳಿಸಿಕೊಂಡಿದೆ. ಚೀನಾ ಮೂಲದ ಬ್ರಾಂಡ್‍ಗಳು ಅಗ್ಗದ ದರದಲ್ಲಿ ಮೊಬೈಲ್ ಫೋನ್ ಗಳನ್ನು ಹೊರತಂದು ಪೈಪೋಟಿ ನೀಡಿದ ಬಳಿಕ ಸ್ಯಾಮ್ ಸಂಗ್ ಸಹ ದರ ಪೈಪೋಟಿ ನೀಡಲು ಎಫ್ ಹಾಗೂ ಎಂ ಸರಣಿಯಲ್ಲಿ ಆರಂಭಿಕ ಹಾಗೂ ಮಧ್ಯಮ ವರ್ಗದಲ್ಲಿ ಮೊಬೈಲ್ ಫೋನ್‍ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಈ ಎಫ್ ಸರಣಿಯ ಫೋನ್ ಗೆಲಾಕ್ಸಿ ಎಫ್ 13. 10 ಸಾವಿರದೊಳಗೆ ಒಂದು ಉತ್ತಮ ಮೊಬೈಲ್ ಬೇಕೆನ್ನುವವರು ಇದನ್ನು ಪರಿಶೀಲಿಸಬಹುದು. ಇದರ ದರ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 9,499 ರೂ. 4 ಜಿಬಿ ರ್ಯಾಮ್ ಮತ್ತು 128 ಜಿಬಿ ಸಂಗ್ರಹ ಮಾದರಿಗೆ 10,499 ರೂ. ಇದೆ. ಗಾಢ ಹಸಿರು, ತಾಮ್ರ ಬಣ್ಣ ಹಾಗೂ ನೀಲಿ ಬಣ್ಣಗಳಲ್ಲಿ ಲಭ್ಯವಿದೆ.
ವಿನ್ಯಾಸ: ಈ ಮೊಬೈಲ್ 165.4 ಮಿ.ಮೀ. ಉದ್ದ, 76.9 ಮಿ.ಮೀ. ಅಗಲ ಹಾಗೂ 9.3 ಮಿ.ಮೀ. ದಪ್ಪವಿದ್ದು, 207 ಗ್ರಾಂ ತೂಕ ಹೊಂದಿದೆ. ಮೊಬೈಲ್ ಅನ್ನು ಕೈಯಲ್ಲಿ ಹಿಡಿದಾಗ ಹೆಚ್ಚು ಭಾರ ಅಥವಾ ದಪ್ಪ ಎನಿಸುವುದಿಲ್ಲ. ಪ್ಲಾಸ್ಟಿಕ್ ಬಾಡಿ ಹೊಂದಿದೆ. ಮೊಬೈಲ್ ಮೂಲೆ ದುಂಡಾಕಾರವಾಗಿದೆ. 10 ಸಾವಿರ ರೂ. ದರ ಪಟ್ಟಿಯಲ್ಲಿ ಇದರ ವಿನ್ಯಾಸ ಒಂದು ಮಟ್ಟಕ್ಕೆ ಚೆನ್ನಾಗಿದೆ.
ಪರದೆ: ಇದು 6.6 ಇಂಚಿನ, ಫುಲ್ ಎಚ್ ಡಿ ಪ್ಲಸ್ ಡಿಸ್‍ಪ್ಲೇ ಹೊಂದಿದೆ. ಇದರಲ್ಲಿ ಅಮೋಲೆಡ್ ಪರದೆ ಇಲ್ಲ. ಈ ದರಕ್ಕೆ ಅದನ್ನು ನಿರೀಕ್ಷಿಸಲೂ ಆಗದು! ಎಲ್‍ಸಿಡಿ ಪರದೆ ಹೊಂದಿದೆ. ಈ ದರಕ್ಕೆ ಎಫ್‍ಎಚ್‍ಡಿ ಪ್ಲಸ್ ಡಿಸ್‍ಪ್ಲೇ ನೀಡಿರುವುದು ಪ್ಲಸ್ ಪಾಯಿಂಟ್. ಪರದೆಯ ಬ್ರೈಟ್‍ನೆಸ್ 480 ನಿಟ್ಸ್ ಇದೆ. 60 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಹೊರಾಂಗಣದಲ್ಲಿ ಪರದೆ ಮಂಕು ಎನಿಸುವುದಿಲ್ಲ.
ಪ್ರೊಸೆಸರ್ ಮತ್ತು ಕಾರ್ಯಾಚರಣೆ: ಇದರಲ್ಲಿರುವುದು ಸ್ಯಾಮ್‍ಸಂಗ್ ನ ತವರು ತಯಾರಿಕೆಯ ಪ್ರೊಸೆಸರ್ ಎಕ್ಸಿನಾಸ್ 850. ಇದು 2020ರಲ್ಲಿ ಬಿಡುಗಡೆಯಾದ ಪ್ರೊಸೆಸರ್. ಇದನ್ನು ಮೊದಲಿಗೆ ಗೆಲಾಕ್ಸಿ ಎ21 ಎಸ್ ಮೊಬೈಲ್‍ನಲ್ಲಿ ಬಳಸಲಾಗಿತ್ತು. ಇದು ಎಂಟು ಕೋರ್ ಗಳ 2 ಗಿ.ಹ. ಸಾಮರ್ಥ್ಯದ ಪ್ರೊಸೆಸರ್. ಇದು 4ಜಿ ನೆಟ್‍ವರ್ಕ್ ಬೆಂಬಲಿಸುವ ಪ್ರೊಸೆಸರ್. ಈ ಪ್ರೊಸೆಸರನ್ನು ಸ್ನಾಪ್‍ಡ್ರಾಗನ್ ನಲ್ಲಿ 625 ನಿಂದ 720 ಪ್ರೊಸೆಸರ್ ಗಳಿಗೆ
ಹೋಲಿಸಬಹುದು. ಈ ದರಪಟ್ಟಿಯ ಮೊಬೈಲ್‍ಗೆ ಇದು ಓಕೆ. ಮೊಬೈಲ್ ನ ದೈನಂದಿನ ಕಾರ್ಯಾಚರಣೆಗೆ ಅಡ್ಡಿಯಿಲ್ಲ. ಆಂಡ್ರಾಯ್ಡ್ ವಿ 12 ಕಾರ್ಯಾಚರಣೆ ವ್ಯವಸ್ಥೆ ಇದೆ. ಇದಕ್ಕೆ ಒನ್ ಯೂಸರ್ ಇಂಟರ್ ಫೇಸ್ ಹೊಂದಿಸಲಾಗಿದೆ. ಸ್ಯಾಮ್ ಸಂಗ್ ಫೋನ್ ಗಳ ಮಾಮೂಲಿ ಇಂಟರ್ ಫೇಸ್ ಎಂದಿನಂತೆ ಇದರಲ್ಲೂ ಇದೆ.
ಕ್ಯಾಮರಾ: ಇದರಲ್ಲಿ ಹಿಂಬದಿ ಮೂರು ಕ್ಯಾಮರಾಗಳಿವೆ. 50 ಮೆ.ಪಿ. ಮುಖ್ಯ ಕ್ಯಾಮರಾ, 5 ಮೆ.ಪಿ. ಅಲ್ಟ್ರಾ ವೈಡ್ ಹಾಗೂ 2 ಮೆ.ಪಿ. ಡೆಪ್ತ್ ಲೆನ್ಸ್ ಗಳಿವೆ. ಮುಂಬದಿ ಸೆಲ್ಫಿಗೆ 8 ಮೆ.ಪಿ. ಕ್ಯಾಮರಾ ಇದೆ. ಕ್ಯಾಮರಾ ಗುಣಮಟ್ಟ ಈ ದರಕ್ಕೆ ಉತ್ತಮವಾಗಿದೆ. ಕೆಲವು 16 ಸಾವಿರ ರೂ.ಗಳ ಮೊಬೈಲ್ ಗಳ ಕ್ಯಾಮರಾಕ್ಕೆ ಇದರ ಗುಣಮಟ್ಟ ಹೋಲಿಸಬಹುದು. ಸೆಲ್ಫಿ ಕ್ಯಾಮರಾ ಸಾಧಾರಣವಾಗಿದೆ.
ಬ್ಯಾಟರಿ: ಇದೊಂದು ಭರ್ಜರಿ ಬ್ಯಾಟರಿ ಮೊಬೈಲ್ ಫೋನ್. ಇದೊಂದು ಆರಂಭಿಕ ದರ್ಜೆಯ ಮೊಬೈಲ್ ಆಗಿರುವುದರಿಂದ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ. ಸಾಧಾರಣ ಬಳಕೆದಾರರಿಗೆ 2 ದಿನ ಬ್ಯಾಟರಿ ದೊರಕುತ್ತದೆ. ಇದಕ್ಕೆ 15 ವ್ಯಾಟ್ಸ್ ಚಾರ್ಜರ್ ನೀಡಲಾಗಿದೆ. ಬ್ಯಾಟರಿ ಎಂಎಎಚ್ ಹೆಚ್ಚಿರುವುದರಿಂದ ಈ ಚಾರ್ಜರ್ ನಲ್ಲಿ ಸಂಪೂರ್ಣ ಬ್ಯಾಟರಿ ಚಾರ್ಜ್ ಆಗಲು 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ.
ಒಟ್ಟಾರೆ ಈ ಮೊಬೈಲ್ ಫೋನ್ 10 ಸಾವಿರ ರೂ ದರಪಟ್ಟಿಯಲ್ಲಿ ಖಂಡಿತವಾಗಿಯೂ ಪರಿಗಣಿಸಬಹುದಾದ ಫೋನ್. ಆಗಾಗ ದೊರಕುವ ಕಾರ್ಡ್ ಡಿಸ್ಕೌಂಟ್ ಆಫರ್ ನಲ್ಲಿ ಒಂದು ಸಾವಿರ ರಿಯಾಯಿತಿ ದೊರೆತಾಗ 128 ಜಿಬಿ ಆವೃತ್ತಿ 9 ಸಾವಿರ ರೂ.ಗಳಿಗೆ ದೊರಕುತ್ತದೆ. ಈ ದರಕ್ಕೆ ಇದೊಂದು ಉತ್ತಮ ಬಜೆಟ್ ಫೋನ್.
-ಕೆ.ಎಸ್. ಬನಶಂಕರ ಆರಾಧ್ಯ