ಬೆಂಗಳೂರು: ಸ್ಯಾಮ್ ಸಂಗ್ ಅಭಿಮಾನಿಗಳು ಕಾಯುತ್ತಿದ್ದ, ಸ್ಯಾಮ್ ಸಂಗ್ ನ ಫ್ಲಾಗ್ ಶಿಪ್ ಮಾದರಿಗಳಾದ ಗ್ಯಾಲಕ್ಸಿ ಎಸ್ 24 ಸರಣಿಯನ್ನು ಕಂಪೆನಿ ಇಂದು ಅನಾವರಣಗೊಳಿಸಿದೆ.
ಎಸ್ 24 ಸರಣಿಯಲ್ಲಿ ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸೇರ್ಪಡೆ ಪ್ರಮುಖ ಅಂಶವಾಗಿದೆ. ಇದರ ಮೂಲಕ ಲೈವ್ ಟ್ರಾನ್ಸ್ ಲೇಟ್ ಫೀಚರ್ ಪರಿಚಯಿಸಲಾಗಿದ್ದು, ಧ್ವನಿ ಮತ್ತು ಅಕ್ಷರ ಎರಡೂ ಮಾದರಿಯಲ್ಲಿ ತಕ್ಷಣವೇ ಅನುವಾದ ಮಾಡುತ್ತದೆ. ಇದು ಡಾಟಾ ಅಥವಾ ವೈಫೈ ಇಲ್ಲದೆಯೇ ಕಾರ್ಯನಿರ್ವಹಿಸುತ್ತದೆ.
ಸ್ಯಾಮ್ ಸಂಗ್ ಕೀಬೋರ್ಡ್ ಎಐ ಅಂತರ್ಗತವಾಗಿದ್ದು, ಇದು ಮೆಸೇಜ್ ಗಳನ್ನು 13 ಭಾಷೆಗಳಲ್ಲಿ ಭಾಷಾಂತರಿಸುತ್ತದೆ. ಇದರಲ್ಲಿ ಹಿಂದಿ ಸಹ ಸೇರಿದೆ. ಆಂಡ್ರಾಯ್ಡ್ ಆಟೋ ಆ್ಯಪ್ ಮೂಲಕ ಒಳ ಬರುವ ಮಸೇಜ್ ಗಳನ್ನು ಸಾರಾಂಶಗೊಳಿಸಿ, ಅದಕ್ಕೆ ನೀಡಬಹುದಾದ ಪ್ರತಿಕ್ರಿಯೆಗಳನ್ನು ಸಲಹೆ ಮಾಡುತ್ತದೆ.
ನೋಟ್ ಅಸಿಸ್ಟ್ ನಲ್ಲಿ ಎಐ ಸೃಜಿಸಿದ ವಾಕ್ಯಗಳು, ಟೆಂಪ್ಲೆಟ್ಗಳು, ಸಿದ್ಧಪಡಿಸಿದ ಫಾರ್ಮಾಟ್ಗಳು ದೊರಕುತ್ತವೆ. ಇದಲ್ಲದೇ ಟ್ರಾನ್ಸ್ ಸ್ಕ್ರಿಪ್ಟ್ ಅಸಿಸ್ಟ್ ಮೂಲಕ ಸ್ಪೀಚ್ ಟು ಟೆಕ್ಟ್ಸ್ ತಂತ್ರಜ್ಞಾನ ಬಳಸಿ ಟ್ರಾನ್ಸ್ ಲೇಟ್ ಕೂಡ ಮಾಡಬಹುದಾಗಿದೆ.
ಗ್ಯಾಲಕ್ಸಿ 24 ಸರಣಿಯ ಫೋನ್ ಗಳಲ್ಲಿ ಫೋಟೋ, ಅಕ್ಷರ ಯಾವುದೇ ಇರಲಿ ಅದರ ಮೇಲೆ ಗೆಸ್ಚರ್ ಮೂಲಕ ವೃತ್ತ ಅದನ್ನು ಗೂಗಲ್ ಸರ್ಚ್ ಮೂಲಕ ಹುಡುಕುವ ಸರ್ಕಲ್ ಟು ಸರ್ಚ್ ಎಂಬ ವಿನೂತನ ಫೀಚರ್ ಪರಿಚಯಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ. ಎಐ ಮೂಲಕ ಈ ತಂತ್ರಜ್ಞಾನ ಬಳಸುತ್ತಿರುವ ಮೊದಲ ಫೋನ್ ಇದಾಗಿದ್ದು, ಇದೊಂದು ಮೈಲಿಗಲ್ಲು ಎಂದು ಕಂಪೆನಿ ಹೇಳಿಕೊಂಡಿದೆ.
ಕ್ಯಾಮರಾಗಳಲ್ಲಿ ಪ್ರೊ ವಿಶುವಲ್ ಎಂಜಿನ್ ಬಳಸಲಾಗಿದ್ದು, ಇದು ಸಹ ಎಐ ಒಳಗೊಂಡಿದೆ. ಕ್ವಾಡ್ ಟೆಲಿ ಸಿಸ್ಟಮ್ ಹೊಂದಿರುವ ಗ್ಯಾಲಕ್ಸಿ ಎಸ್ 24 ಅಲ್ಟ್ರಾ 5ಎಕ್ಸ್ ಆಪ್ಟಿಕಲ್ ಝೂಮ್ ಲೆನ್ಸ್ ಹೊಂದಿದ್ದು, 50 ಮೆಪಿ ಸೆನ್ಸರ್ ಹೊಂದಿದೆ. ಇದು ಚಿತ್ರಗಳು ತುಂಬಾ ಸ್ಪಷ್ಟವಾಗಿ ಮೂಡಿಬರಲು ಸಹಾಯಕವಾಗಿದೆ ಎಂದು ತಿಳಿಸಿದೆ.
ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಸ್ನಾಪ್ ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದ್ದು, ಟೈಟಾನಿಯಂ ಫ್ರೇಂ ಹೊಂದಿದ ಮೊದಲ ಗ್ಯಾಲಕ್ಸಿ ಫೋನ್ ಆಗಿದೆ.
ಎಸ್ 24 ಅಲ್ಟ್ರಾ 6.8 ಇಂಚಿನ ಪರದೆ, ಎಸ್ 24 ಪ್ಲಸ್ 6.7 ಇಂಚು ಹಾಗೂ ಎಸ್ 24 6.2 ಇಂಚು ಪರದೆ ಹೊಂದಿವೆ.
7 ವರ್ಷಗಳ ಸೆಕುರಿಟಿ ಅಪ್ಡೇಟ್ ಮತ್ತು 7 ಓಎಸ್ ಅಪ್ಡೇಟ್!: ಈ ಸರಣಿಯ ಫೋನ್ ಗಳಿಗೆ ಸ್ಯಾಮ್ ಸಂಗ್ 7 ಜನರೇಷನ್ ಆಂಡ್ರಾಯ್ಡ್ ಓಎಸ್ ಅಪ್ ಡೇಟ್ ಹಾಗೂ 7 ವರ್ಷಗಳ ಸೆಕುರಿಟಿ ಅಪ್ಡೇಟ್ ನೀಡುವುದಾಗಿ ಘೋಷಿಸಿದೆ! ಉದಾಹರಣೆಗೆ ಈಗ ಆಂಡ್ರಾಯ್ಡ್ 14 ಓಎಸ್ ಚಾಲ್ತಿಯಲ್ಲಿದ್ದು, ಆಂಡ್ರಾಯ್ಡ್ 20 ವರ್ಷನ್ ವರೆಗೂ ಈ ಫೋನ್ ಗಳಿಗೆ ಅಪ್ ಡೇಟ್ ದೊರಕಲಿದೆ!
ಗ್ಯಾಲಕ್ಸಿ 24 ಸರಣಿಯ ಫೋನ್ ಗಳಿಗೆ ಇಂದಿನಿಂದಲೇ ಮುಂಗಡ ಬುಕಿಂಗ್ ಆರಂಭವಾಗಿದೆ.
ಎಸ್ 24 ಮಾದರಿಯ 8ಜಿಬಿ 256 ಜಿಬಿಗೆ 79,999 ರೂ. 512 ಜಿಬಿಗೆ 89,999 ರೂ. ದರವಿದೆ.ಎಸ್ 24 ಪ್ಲಸ್ ಮಾದರಿಯ 12 ಜಿಬಿ 256 ಜಿಬಿ ಮಾದರಿಗೆ 99,999 ರೂ. ಹಾಗೂ 512 ಜಿಬಿ ಮಾದರಿಗೆ 1,09,999 ರೂ. ದರವಿದೆ. ಎಸ್ 24 ಅಲ್ಟ್ರಾ ಮಾದರಿಯ 12 ಜಿಬಿ 256 ಜಿಬಿಗೆ 1,29,999 ರೂ., 512 ಜಿಬಿಗೆ 1,39,999 ರೂ., 1 ಟಿಬಿ ಮಾದರಿಗೆ 1,59,999 ರೂ. ದರವಿದೆ.