Advertisement

ಆಡಿಯೋ ಪ್ರಿಯರ ಮನತಣಿಸುವ ಗೆಲಾಕ್ಸಿ ಬಡ್ಸ್ 2 ಪ್ರೊ; ಏನಿದರ ವಿಶೇಷತೆ? ಬೆಲೆ ಎಷ್ಟು?

12:49 PM Nov 01, 2022 | Team Udayavani |

ಮೊಬೈಲ್‍ ಫೋನ್‍ ನ ಸಹವರ್ತಿಯಾಗಿ ಸ್ಮಾರ್ಟ್ ವಾಚ್, ಸಂಪೂರ್ಣ ವೈರ್ ರಹಿತ (ಟಿಡಬ್ಲೂಎಸ್) ಇಯರ್ ಬಡ್‍ ಗಳ ಬಳಕೆ ಈಗ ಸರ್ವೇ ಸಾಮಾನ್ಯವಾಗಿದೆ.  ಅನೇಕ ಬ್ರಾಂಡ್‍ಗಳು ಒಂದಿಲ್ಲೊಂದು ಹೊಸ ಮಾಡೆಲ್‍ಗಳನ್ನು ಹೊರ ತರುತ್ತಲೇ ಇವೆ. ಇವುಗಳಲ್ಲಿ ಕಡಿಮೆ ಬಜೆಟ್‍ ನಿಂದ ಅಧಿಕ ಬಜೆಟ್‍ವರೆಗೆ ಅನೇಕ ಮಾಡೆಲ್‍ಗಳಿವೆ. ಸ್ಯಾಮ್‍ ಸಂಗ್‍ ಕಂಪೆನಿ ಅನೇಕ ಟಿಬಡ್ಲೂಎಸ್‍ಗಳನ್ನು ಹೊರತಂದಿದೆ. ಸಾಮಾನ್ಯವಾಗಿ ಸ್ಯಾಮ್‍ ಸಂಗ್‍ ನ ಇಯರ್ ಬಡ್‍ಗಳಲ್ಲಿ ಪ್ರೀಮಿಯಂ ಇಯರ್ ಬಡ್‍ಗಳೇ ಹೆಚ್ಚು. ಇತ್ತೀಚಿಗೆ ಸ್ಯಾಮ್‍ ಸಂಗ್‍ ಹೊರತಂದಿರುವ ಇನ್ನೊಂದು ಪ್ರೀಮಿಯಂ ಇಯರ್ ಬಡ್‍ , ಗೆಲಾಕ್ಸಿ ಬಡ್ಸ್ 2 ಪ್ರೊ.

Advertisement

ವಿನ್ಯಾಸ: Galaxy Buds 2 Pro ಕಳೆದ ವರ್ಷ ಬಿಡುಗಡೆಯಾಗಿದ್ದ ಬಡ್ಸ್ ಪ್ರೊನ ವಿನ್ಯಾಸ ಹೊಂದಿದೆ, ಆದರೆ ಕೆಲವು ಗಮನಾರ್ಹ ಬದಲಾವಣೆಗಳಿವೆ. ಮೊದಲನೆಯದಾಗಿ, ಈ ಹೊಸ ಮಾದರಿಯು 2021 ರ ಆವೃತ್ತಿಗಿಂತ ಶೇ. 15ರಷ್ಟು ಚಿಕ್ಕದಾಗಿದೆ, ಕಿವಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ ಮತ್ತು ದೀರ್ಘಾವಧಿಯವರೆಗೆ ಆರಾಮದಾಯಕವಾಗಿ ಬಳಸಬಹುದು.

ಕೆಲವು ಇಯರ್ ಬಡ್‍ಗಳನ್ನು ಹಾಕಿಕೊಂಡಾಗ ಐದು ನಿಮಿಷವಾಗುತ್ತಿದ್ದಂತೆ ಕಿರಿಕಿರಿಯಾಗಿ ತೆಗೆಯಬೇಕೆನಿಸುತ್ತದೆ. ಗೆಲಾಕ್ಸಿ ಬಡ್ ಗಳನ್ನು ಇನ್ನಿತರ ಬ್ರಾಂಡ್‍ ಗಳಿಗಿಂತ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ ಬೇರೆ ಬ್ರಾಂಡ್‍ ಗಳು ಸ್ಟಿಕ್‍ ಇರುವ ಬಡ್‍ ಗಳಿದ್ದರೆ, ಸ್ಯಾಮ್‍ ಸಂಗ್‍ ದುಂಡಾಕಾರದ ಸ್ಟಿಕ್‍ ರಹಿತ ವಿನ್ಯಾಸವಿರುವ ಬಡ್ ಗಳನ್ನು ನೀಡುತ್ತಿದೆ. ಈ ವಿನ್ಯಾಸ ಕಿವಿಗೆ ಆರಾಮದಾಯಕವಾಗಿರುತ್ತದೆ. ಕೆಲವು ಬಡ್‍ಗಳನ್ನು ಕಿವಿ ಒಳಗೆ ಹಾಕಿಕೊಂಡಾಗ ಹಾಡು ಕೇಳದಿದ್ದಾಗಲೂ ಹೊರಗಿನ ಧ್ವನಿಯೇ ಕೇಳುವುದಿಲ್ಲ. ಆದರೆ ಇದರಲ್ಲಿ ಸಂಗೀತ ಆಲಿಸದಿದ್ದಾಗ ಹೊರಗಿನ ಧ್ವನಿ ಚೆನ್ನಾಗಿ ಕೇಳುತ್ತದೆ. ಇದು ಮಾತನಾಡುವ ಉದ್ದೇಶಕ್ಕೆ ಬಡ್ಸ್ ಬಳಸುವವರಿಗೆ ಹೆಚ್ಚು ಅನುಕೂಲಕರ.

ಚಾರ್ಜಿಂಗ್‍ ಕೇಸ್‍ ಹಗುರವಾಗಿ, ಜೇಬಿನಲ್ಲಿಟ್ಟುಕೊಳ್ಳಲು ಅನುಕೂಲಕರವಾಗಿದೆ. ಈ ಬಡ್‍ ಗಳು ತಲಾ 6 ಗ್ರಾಂ ತೂಕ ಇವೆ. ಹಾಗಾಗಿ ಕಿವಿಯಲ್ಲಿದ್ದಾಗ ಎಷ್ಟೋ ಸಲ ಅವುಗಳಿರುವುದು ಗೊತ್ತಾಗದಷ್ಟು ಹಗುರವಾಗಿವೆ.

Advertisement

Galaxy Buds 2 Pro ಮೃದು-ಟಚ್ ಮ್ಯಾಟ್ ಲೇಪನವನ್ನು ಹೊಂದಿದೆ. ಚಾರ್ಜಿಂಗ್ ಕೇಸ್ ಸಹ ಮ್ಯಾಟ್ ಫಿನಿಶ್‍ ಹೊಂದಿದೆ. ಬಡ್ಸ್ ಪ್ರೊನಂತೆ, ಈ ಮಾದರಿಯು ಸಹ IPX7 ರೇಟ್ ಆಗಿದೆ. ನೀರು ಮತ್ತು ಧೂಳು ನಿರೋಧಕವಾಗಿದೆ.

ವೈಶಿಷ್ಟ್ಯಗಳು: ಟಚ್ ಕಂಟ್ರೋಲ್‌ಗಳನ್ನು ಎರಡೂ ಇಯರ್‌ಬಡ್‌ಗಳಲ್ಲಿ ನೀಡಲಾಗಿದೆ. ಪ್ಲೇ/ವಿರಾಮಕ್ಕಾಗಿ ಒಂದೇ ಟ್ಯಾಪ್, ಮುಂದೆ ಸ್ಕಿಪ್ ಮಾಡಲು ಡಬಲ್ ಟ್ಯಾಪ್, ಹಿಂದಕ್ಕೆ ಹೋಗಲು ಟ್ರಿಪಲ್ ಟ್ಯಾಪ್ ಮಾಡಬೇಕು.

ಹಿಂದಿನ Samsung ಇಯರ್‌ಬಡ್‌ಗಳಂತೆ, Galaxy Buds 2 Pro ಗಾಗಿ ಎಲ್ಲಾ ವೈಶಿಷ್ಟ್ಯಗಳು ಮತ್ತು ಸೆಟ್ಟಿಂಗ್‌ಗಳನ್ನು Android ಸಾಧನಗಳಲ್ಲಿ Galaxy Wearable ಅಪ್ಲಿಕೇಶನ್ ಮೂಲಕ ನಿಯಂತ್ರಿಸಬಹುದು.

ಈ ಆಪ್‍ ಬಡ್‍ ಗಳನ್ನು ನಿಯಂತ್ರಿಸಲು ಸೆಟಿಂಗ್‍ಗಳನ್ನು ಮಾಡಲು ಸಹಾಯ ಮಾಡುತ್ತದೆ.  ಇದರಲ್ಲಿ 360 ಆಡಿಯೋ, ಟಚ್‍ ಕಂಟ್ರೋಲ್‍, ಇಯರ್ ಬಡ್‍ಗಳ ಸೆಟಿಂಗ್‍, ಫೈಂಡ್‍ ಮೈ ಇಯರ್ ಬಡ್‍ ಆಯ್ಕೆಗಳಿವೆ.

ಸೆಟಿಂಗ್‍ಗೆ ಹೋದಾಗ ಬಹಳಷ್ಟು ಆಯ್ಕೆಯಗಳಿವೆ. ಈಕ್ವಲೈಸರ್, ಇಯರ್ ಬಡ್‍ ಫಿಟ್‍ ಟೆಸ್ಟ್, (ಅಂದರೆ ಅದು ನಿಮ್ಮ ಕಿವಿಗೆ ಸರಿಯಾಗಿ ಹೊಂದಿಕೊಂಡಿದೆಯೇ? ಅದರಲ್ಲಿ ಬರುವ ಸಂಗೀತ ಸಮರ್ಪಕವಾಗಿ ನಿಮಗೆ ಕೇಳುತ್ತಿದೆಯೇ? ಎಂದು ನಿರ್ಧರಿಸುವ ಪರೀಕ್ಷೆ)

ಇದರಲ್ಲಿರುವ ಇನ್ನೊಂದು ಆಯ್ಕೆ ವಿಶಿಷ್ಟ ಎನಿಸಿತು.  ಇದರಲ್ಲಿ ನೆಕ್ ಸ್ಟ್ರೆಚ್‍ ರಿಮೈಂಡರ್ ಎಂಬ  ಆಯ್ಕೆ ಇದೆ. ಇದನ್ನು ಮೊದಲ ಬಾರಿಗೆ ಆನ್‍ ಮಾಡಿಕೊಂಡಾಗ, ನಿಮ್ಮ ಕತ್ತನ್ನು ನೇರವಾಗಿಸಿ, ಕತ್ತನ್ನು ಬಗ್ಗಿಸಿ, ಕತ್ತನ್ನು ಮೇಲಕ್ಕೆತ್ತಿ ಎಂದು ಧ್ವನಿ ಮೂಲಕ ತಿಳಿಸುತ್ತದೆ. ಇದನ್ನು ಮಾಡಿದ ಬಳಿಕ  ಈ ವೈಶಿಷ್ಟ್ಯ ಆನ್‍ ಆಗುತ್ತದೆ. ಇದರಿಂದ ಏನುಪಯೋಗ ಎಂದರೆ, ನೀವು ನಿಮ್ಮ ಫೋನು ಅಥವಾ ಮಾನಿಟರ್ ಅನ್ನು ಒಂದೇ ಕೋನದಲ್ಲಿ 10 ನಿಮಿಷಗಳ ಕಾಲ ನೋಡುತ್ತಿದ್ದರೆ, ಇದು ಧ್ವನಿ ಮೂಲಕ ನಿಮ್ಮ ಕಿವಿಯಲ್ಲಿ ಎಚ್ಚರಿಕೆ ನೀಡುತ್ತದೆ. ಕತ್ತು ಬಗ್ಗಿಸಿಕೊಂಡೇ ಮೊಬೈಲ್‍ ನೋಡುತ್ತಾ ಮೈಮರೆಯುವ ಅನೇಕರಿಗೆ ಇದು ಸಹಾಯಕ.

ಆಡಿಯೋ ಗುಣಮಟ್ಟ: ಸ್ಯಾಮ್‌ಸಂಗ್ ಸೀಮ್‌ಲೆಸ್ ಕೊಡೆಕ್ 2,304 kbps ವರೆಗೆ ರೆಸಲ್ಯೂಶನ್ ಕಡಿಮೆಯಾಗದ ಆಡಿಯೊವನ್ನು ಹೊಂದಿದೆ. ಪ್ರಸ್ತುತ ಶುದ್ಧ ಆಡಿಯೊ ಗುಣಮಟ್ಟದ ವಿಷಯದಲ್ಲಿ ಅತ್ಯುತ್ತಮ ಆಯ್ಕೆ ಇದಾಗಿದೆ. ಇದರಲ್ಲಿ 360 ಆಡಿಯೋ ಹಾಗೂ 24 ಬಿಟ್‍ ಹೈಫೈ ಆಡಿಯೋ ಸೌಲಭ್ಯ ಇದೆ.

ಬಡ್ಸ್ 2 ಪ್ರೊನಲ್ಲಿ, ವರ್ಚುವಲ್ 5.1- ಮತ್ತು 7.1-ಚಾನೆಲ್ ವ್ಯವಸ್ಥೆಗಳೊಂದಿಗೆ ಸರೌಂಡ್‍ ಸೌಂಡ್‍ ಸೌಲಭ್ಯ ನೀಡಿದೆ. ಮೊಬೈಲ್‍ ಫೋನ್‍ನಲ್ಲಿ ಅಥವಾ ಸ್ಮಾಟ್ಟ್ ಟಿವಿಗಳಿಗೆ ಸಂಪರ್ಕಿಸಿ, ನೆಟ್‍ ಫ್ಲಿಕ್ಸ್, ಅಮೆಜಾನ್‍ ಇತ್ಯಾದಿ ಓಟಿಟಿಗಳಲ್ಲಿ 5.1 ಡಾಲ್ಬಿ, ಸರೌಂಡ್‍ ಸೌಲಭ್ಯ ಇರುವ ಸಿನಿಮಾಗಳನ್ನು ನೋಡಿದಾಗ  ಈ ಇಯರ್‍ಬಡ್‍ ಬಳಸಿದರೆ ಅವುಗಳ ಅನುಭವ ದೊರಕುತ್ತದೆ.

ಹಾಡುಗಳನ್ನು ಕೇಳುವಾಗ ನಿಮ್ಮ ಮೊಬೈಲ್‍ ಫೋನ್‍ ಉತ್ತಮ ಆಡಿಯೋ ಇಂಜಿನ್‍ ಹೊಂದಿದ್ದರೆ, ಇದರಲ್ಲಿ ಅತ್ಯುತ್ತಮ ಆಡಿಯೋ ಗುಣಮಟ್ಟದ ಅನುಭವ ದೊರಕುತ್ತದೆ. 10 ಮಿ.ಮೀ. ಆಡಿಯೋ ಡ್ರೈವರ್ ಗಳಿದ್ದು, ಡಾಲ್ಬಿ ಅಟ್‍ಮೋಸ್‍ ಸೌಲಭ್ಯ ಇದೆ. ಹೀಗಾಗಿ ಸಂಗೀತ, ಹಾಡುಗಳು ಸುಸ್ಪಷ್ಟವಾಗಿ, ಯಾವುದೇ ನೋಟ್ಸ್ ಮಿಸ್‍ ಆಗದಂತೆ ಕೇಳಿಬರುತ್ತವೆ. ಸಂಗೀತವನ್ನಾಲಿಸಲು ಒಂದು ಉತ್ತಮ ಇಯರ್ ಬಡ್‍ ಇದಾಗಿದೆ.

ಸಂಗೀತ ಆಲಿಕೆ ಮಾತ್ರವಲ್ಲದೇ, ಕರೆ ಮಾಡಲು ಸಹ ಇದು ಉತ್ತಮ ಬಡ್‍ ಆಗಿದೆ. ಪದೇ ಪದೇ ಕರೆಗಳನ್ನು ಸ್ವೀಕರಿಸುವವರು, ಹೆಚ್ಚು ಹೊತ್ತು ಮಾತನಾಡುವವರಿಗೆ ಸೂಕ್ತವಾಗಿದೆ.  ಫೋನ್‍ ಗೆ ಕರೆ ಬಂದಾಗ, ಬಡ್‍ ಅನ್ನು ಟ್ಯಾಪ್‍ ಮಾಡಿ ಕರೆ ಸ್ವೀಕರಿಸಿ ಮಾತನಾಡಬಹುದಾಗಿದೆ. ಆ ಕಡೆಯಿಂದ ಮಾತನಾಡುವವರಿಗೆ ಕರೆಯ ಗುಣಮಟ್ಟ ಚೆನ್ನಾಗಿ ಕೇಳಿಬರುತ್ತದೆ.

ಬ್ಯಾಟರಿ: ಇದರ ಕೇಸ್‍ನಲ್ಲಿ 515 ಎಂಎಎಚ್‍ ಬ್ಯಾಟರಿ ಹೊಂದಿದೆ.  ಬಡ್‍ಗಳಲ್ಲಿ ತಲಾ 58 ಎಂಎಎಚ್‍ ಬ್ಯಾಟರಿ ಒಳಗೊಂಡಿದೆ. ಕೇಸ್‍ ಅನ್ನು ಒಮ್ಮೆ ಚಾರ್ಜ್‍ ಮಾಡಿದಾಗ ಸುಮಾರು 25 ಗಂಟೆಗಳಷ್ಟು ಸಮಯ ಬ್ಯಾಟರಿ ದೊರಕುತ್ತದೆ. ಬಡ್‍ಗಳಲ್ಲಿ ಸಂಗೀತ ಮತ್ತು ಕಾಲ್‍ ಸೇರಿ ಸುಮಾರು 4 ರಿಂದ 5 ಗಂಟೆಗಳಷ್ಟು ಕಾಲ ಬಳಸಬಹುದು.

ಗೆಲಾಕ್ಸಿ ಬಡ್ಸ್ 2 ಪ್ರೊ ಅನ್ನು ಕೆಲವು ಅತ್ಯುತ್ತಮ ಬಡ್ಸ್ ಗಳಿಗೆ ಹೋಲಿಸಬಹುದು.

ಆಪಲ್‍ ಏರ್ ಪಾಡ್ಸ್ ಪ್ರೊ, Google ನ Pixel Buds Pro (34,000 ರೂ.) ಮತ್ತು Sennheiser ನ ಮೊಮೆಂಟಮ್ ಟ್ರೂ ವೈರ್‌ಲೆಸ್ 3 (22,000 ರೂ.) ಯಂತಹ ಬಡ್ ಗಳಿಗೆ ಇದು ಸ್ಪರ್ಧೆ ನೀಡುತ್ತದೆ.  ಈ ಎರಡೂ ಬಡ್‍ಗಳಿಗೆ ಹೋಲಿಸಿದಾಗ ಗೆಲಾಕ್ಸಿ ಬಡ್ಸ್ 2 ಪ್ರೊ ದರ ಕಡಿಮೆ ಇದೆ. ಇದರ ದರ 17,999 ರೂ.  ನೇರಳೆ, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಬಜೆಟ್‍ ಬಗ್ಗೆ ತಲೆ ಕೆಡಿಸಿಕೊಳ್ಳದವರಿಗೆ,  ಒಂದು ಅತ್ಯುತ್ತಮ ಪ್ರೀಮಿಯಂ ಇಯರ್ ಬಡ್‍ ಬೇಕು ಎನ್ನುವವರಿಗೆ ಈ ಬಡ್ಸ್ ಸೂಕ್ತವಾಗಿದೆ.

ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next