ಆನ್‌ಲೈನ್ ತರಗತಿಗೆ ಅಥವಾ ಇತರ ಶೈಕ್ಷಣಿಕ ಬಳಕೆಗೆ ಮೊಬೈಲ್ ಫೋನ್‌ಗಿಂತ ಟ್ಯಾಬ್ಲೆಟ್ (ಟ್ಯಾಬ್)ಗಳು ಸೂಕ್ತ. ಮಾರುಕಟ್ಟೆಯಲ್ಲಿ ಅನೇಕ ಬ್ರಾಂಡ್‌ಗಳ ಟ್ಯಾಬ್‌ಗಳು ಲಭ್ಯ. ಇವುಗಳ ನಡುವೆ ಮಿತವ್ಯಯ ಬೆಲೆಯಲ್ಲಿ ಉತ್ತಮ ಕಾರ್ಯ ನಿರ್ವಹಣೆಯ ಟ್ಯಾಬ್ ಗಳಲ್ಲೊಂದು ಸ್ಯಾಮ್‌ಸಂಗ್ ಗೆಲಾಕ್ಸಿ ಎ7.
ಇದರ ಪರದೆ 10.4 ಇಂಚಿದೆ. 2000×1200 ಪಿಕ್ಸೆಲ್ ರೆಸ್ಯೂಲೇಷನ್ ಹೊಂದಿದೆ. ಬಳಸಲು ಬಹಳ ಸ್ಲಿಮ್ ಆಗಿದೆ. ಹೆಚ್ಚು ಬಳಕೆದಾರರು 14 ಇಂಚಿನ ಲ್ಯಾಪ್‌ಟಾಪ್ ಬಳಸುತ್ತಾರೆ. ಈ ಟ್ಯಾಬ್ ಅದಕ್ಕಿಂತ 3.6 ಇಂಚು ಕಡಿಮೆ ಅಳತೆಯ ಪರದೆ ಹೊಂದಿದೆ. 7 ಎಂಎಂ ತೆಳು ಬೆಜೆಲ್ ಇದ್ದು, ಶೇ. 80ರಷ್ಟು ಬಾಡಿ ರೇಷಿಯೋ ಹೊಂದಿದೆ.
ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ಇದರ ಪರದೆಯ ಅಳತೆ ಸಾಕು. ಪರದೆಯ ರೆಸ್ಯೂಲೇಷನ್ ಸಹ ಹೆಚ್ಚಿರುವುದರಿಂದ ದೃಶ್ಯಗಳು ಚೆನ್ನಾಗಿ ಮೂಡಿಬರುತ್ತವೆ. 3ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 1 ಟಿಬಿವರೆಗೂ ಸಂಗ್ರಹ ಹೆಚ್ಚಿಸಿಕೊಳ್ಳಬಹುದು.
ಹಿಂಬದಿಗೆ 8 ಮೆ.ಪಿ. ಕ್ಯಾಮೆರಾ ಹಾಗೂ 5 ಮೆ.ಪಿ. ಮುಂಬದಿ ಕ್ಯಾಮೆರಾ ಹೊಂದಿದೆ. ಟ್ಯಾಬ್‌ನ ಪ್ರಾಥಮಿಕ ಬಳಕೆ ಮೊಬೈಲ್‌ಗಿಂತ ಭಿನ್ನವಾದ್ದರಿಂದ ಟ್ಯಾಬ್‌ಗಳಲ್ಲಿ ಕ್ಯಾಮೆರಾಕ್ಕೆ ಹೆಚ್ಚಿನ ಒತ್ತು ನೀಡುವುದಿಲ್ಲ. ಈ ಟ್ಯಾಬ್‌ನಲ್ಲಿ 7,040 ಎಂಎಎಚ್ ಸಾಮರ್ಥ್ಯದ ದೊಡ್ಡ ಬ್ಯಾಟರಿ ನೀಡಲಾಗಿದೆ. ಅದಕ್ಕೆ ಯುಎಸ್‌ಬಿ ಟೈಪ್ ಸಿ ವೇಗದ ಚಾರ್ಜರ್ (15 ವ್ಯಾಟ್) ಸೌಲಭ್ಯವಿದೆ. ಹೆಚ್ಚು ಬಳಕೆ ಮಾಡಿ ದರೂ ಬ್ಯಾಟರಿ ಒಂದು ದಿನ ಸಂಪೂರ್ಣ ಬಾಳಿಕೆ ಬರುತ್ತದೆ. ಹೀಗಾಗಿ ಹೆಚ್ಚು ಬ್ಯಾಟರಿ ಬೇಕೆನ್ನುವವರಿಗೆ ಇದು ಸೂಕ್ತವಾಗಿದೆ.
ಆಂಡ್ರಾಯ್ಡ್ 10: ಇದರಲ್ಲಿರುವುದು ಆಂಡ್ರಾಯ್ಡ್ 10 ಕಾರ್ಯಾಚರಣಾ ವ್ಯವಸ್ಥೆ. ಹಾಗಾಗಿ ನಿಮಗೆ ನಿಮ್ಮ ಆಂಡ್ರಾಯ್ಡ್ ಮೊಬೈಲ್‌ನ ನೋಡುವ ಅನುಭ ವವೇ ಇಲ್ಲೂ ದೊರಕುತ್ತದೆ. ಆದರೆ ಪರದೆ ದೊಡ್ಡದು ಅಷ್ಟೇ. ಮೊಬೈಲ್‌ನಲ್ಲಿ ಬಳಸುವ ಬಹುತೇಕ ಅಪ್ಲಿಕೇಷನ್‌ಗಳು ಇಲ್ಲೂ ದೊರಕುತ್ತವೆ. ನಿಮ್ಮ ಬ್ಯಾಂಕ್ ಆ್ಯಪ್‌ಗ್ಳನ್ನೂ ಇಲ್ಲಿ ಇನ್‌ಸ್ಟಾಲ್ ಮಾಡಿ ಬಳಸಬಹುದು.
ಸ್ನಾಪ್‌ಡ್ರಾಗನ್ ಪ್ರೊಸೆಸರ್: ಇದರಲ್ಲಿ ಸ್ನಾಪ್ ಡ್ರಾಗನ್ 662 ಪ್ರೊಸೆಸರ್ ಇದೆ. ಈ ಟ್ಯಾಬ್‌ನ ಬಹು ಮುಖ್ಯ ಪ್ಲಸ್ ಪಾಯಿಂಟ್‌ಗಳಲ್ಲಿ ಇದೂ ಒಂದು. ಮೊದಲೇ ತಿಳಿದಿರುವಂತೆ ಸ್ನಾಪ್ ಡ್ರಾಗನ್ ಪ್ರೊಸೆಸರ್ ಗಳು, ತಮ್ಮ ಗುಣಮಟ್ಟ ಮತ್ತು ವೇಗಕ್ಕೆ ಹೆಸರಾಗಿವೆ. 662 ಮಧ್ಯಮ ದರ್ಜೆಯ ಪ್ರೊಸೆಸರ್ ಟ್ಯಾಬ್‌ನ ವೇಗ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ. ಹೀಗಾಗಿ ಅಪ್ಲಿಕೇಷನ್‌ಗಳು ತೆರೆದುಕೊಳ್ಳುವ ವೇಗ, ವಿಡಿಯೋಗಳ ವೀಕ್ಷಣೆ, ಆನ್‌ಲೈನ್ ಸಂವಾದ ಇತ್ಯಾದಿಗಳು ಸರಾಗವಾಗಿ ನಡೆಯುತ್ತವೆ.
ವೈಫೈ ಕಾರ್ಯಾಚರಣೆ: ಹೆಚ್ಚಿನ ಟ್ಯಾಬ್‌ಗಳು ಆನ್‌ಲೈನ್ ಬಳಕೆಗೆ ವೈಫೈ ಆಧರಿಸಿವೆ. ಹಾಗೆಯೇ ಈ ಟ್ಯಾಬ್‌ನಲ್ಲಿ ಸಿಮ್ ಸ್ಲಾಟ್ ಇಲ್ಲ. ವೈಫೈ ಹಾಟ್‌ಸ್ಪಾಟ್ ಮೂಲಕ ಕಾರ್ಯಾಚರಿಸುತ್ತದೆ.
ನಾಲ್ಕು ಸ್ಪೀಕರ್: ಇದರಲ್ಲಿ ಎಡದಲ್ಲಿ 2 ಹಾಗೂ ಬಲಬದಿಯಲ್ಲಿ 2 ಸ್ಪೀಕರ್ ಸೇರಿ ಒಟ್ಟು ನಾಲ್ಕು ಸ್ಪೀಕರ್‌ಗಳಿವೆ. ಇದಕ್ಕೆ ಡಾಲ್ಬಿ ಅಟ್ ಮೋಸ್ ಸೌಲಭ್ಯ ನೀಡಲಾಗಿದೆ. ಹಾಗಾಗಿ ಯೂಟ್ಯೂಬ್ ಮೂಲಕ ವಿಡಿಯೋ, ಹಾಡು ಇತ್ಯಾದಿ ನೋಡಿದಾಗ ಸೌಂಡ್ ಎಫೆಕ್ಟ್ ಚೆನ್ನಾಗಿದೆ. 3.5 ಎಂ.ಎಂ. ಆಡಿಯೋ ಜಾಕ್ ಸಹ ಹಾಕಿಕೊಳ್ಳಬಹುದು.
ದರ: ಇದರ ದರ ಪ್ರಸ್ತುತ ಅಮೆಜಾನ್. ಇನ್‌ನಲ್ಲಿ 18 ಸಾವಿರ ರೂ. ಇದೆ. ಆಗಾಗ ಕೆಲವು ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳಿಗೆ 2 ಸಾವಿರ ರೂ. ರಿಯಾಯಿತಿ ಇರುತ್ತದೆ. ಅದನ್ನು ಗಮನಿಸಿಕೊಂಡರೆ 16 ಸಾವಿರ ರೂ.ಗಳಿಗೆ ಒಂದು ಉತ್ತಮ ಟ್ಯಾಬ್ ದೊರಕುತ್ತದೆ. ಒಂದು ವಿಷಯ, ಇದೇ ಟ್ಯಾಬ್ ಗೆ ಪ್ಲಿಪ್‌ಕಾರ್ಟ್‌ನಲ್ಲಿ 22 ಸಾವಿರ ರೂ. ಇದೆ! ವ್ಯತ್ಯಾಸ ಏನೆಂದರೆ ಅದರಲ್ಲಿ ಸಿಮ್ ಸ್ಲಾಟ್ ಇದೆ. ಟ್ಯಾಬ್‌ನಲ್ಲಿ ಸಿಮ್ ಹಾಕಲೇಬೇಕಾದ ಅನಿವಾರ್ಯತೆ ಇಲ್ಲ. ಹಾಗಾಗಿ ಸಿಮ್ ರಹಿತ ಮಾದರಿ ಕೊಂಡರೆ 4 ಸಾವಿರ ರೂ. ಉಳಿತಾಯವಾಗುತ್ತದೆ.
ಕೆ.ಎಸ್. ಬನಶಂಕರ ಆರಾಧ್ಯ