ಸ್ಯಾಮ್ ಸಂಗ್ ಕಂಪೆನಿ ತನ್ನ ಮಧ್ಯಮ ಶ್ರೇಣಿಯ ಮೊಬೈಲ್ ವಿಭಾಗದಲ್ಲಿ ಚೀನಾ ಮೂಲದ ಕಂಪೆನಿಗಳಿಗೆ ಪೈಪೋಟಿ ನೀಡಲು ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈ ಸಾಲಿಗೆ ಇನ್ನೊಂದು ಹೊಸ ಮೊಬೈಲ್ ಇದೀಗ ತಾನೇ ಹೊರಬಂದಿದೆ. ಅದುವೇ ಸ್ಯಾಮ್ ಸಂಗ್ ಗೆಲಾಕ್ಸಿ ಎ14 5ಜಿ. ಈಗ ಭಾರತದಲ್ಲಿ 5ಜಿ ಲಭ್ಯವಿದ್ದು, ಜಿಯೋ ಕಂಪೆನಿ ದೇಶದ ಎಲ್ಲೆಡೆ 5ಜಿ ನೆಟ್ ವರ್ಕ್ ಸೌಲಭ್ಯ ವಿಸ್ತರಿಸುತ್ತಿದೆ. ಕರ್ನಾಟಕದಲ್ಲೇ ಬೆರಳೆಣಿಕೆಯಷ್ಟು ಜಿಲ್ಲೆಗಳನ್ನು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ 5ಜಿ ಸೌಲಭ್ಯವನ್ನು ಜಿಯೋ ಕಲ್ಪಿಸಿದೆ. ಇಂಥ ಸನ್ನಿವೇಶದಲ್ಲಿ 5ಜಿ ಸೌಲಭ್ಯ ಇರುವ ಮೊಬೈಲ್ ಫೋನ್ ಗಳನ್ನೇ ಗ್ರಾಹಕರು ಕೊಳ್ಳುವುದು ಜಾಣತನ.
ಗೆಲಾಕ್ಸಿ ಎ 14 5ಜಿ, ಮೂರು ಆವೃತ್ತಿಗಳನ್ನು ಹೊಂದಿದೆ. 4 GB RAM + 64 ಜಿಬಿ ಆಂತರಿಕ ಸಂಗ್ರಹ (ದರ: 16,499 ರೂ.), 6GB RAM + 128 ಜಿಬಿ ಆಂತರಿಕ ಸಂಗ್ರಹ (ದರ: 18,999 ರೂ.) ಹಾಗೂ 8 GB RAM ಮತ್ತು 128 ಜಿಬಿ ಆಂತರಿಕ ಸಂಗ್ರಹ (20,999 ರೂ.)
ಪರದೆ: ಈ ಮೊಬೈಲ್ 6.6 ಇಂಚಿನ ಫುಲ್ ಎಚ್ ಡಿ ಪ್ಲಸ್ (1080*2408 ಪಿಕ್ಸಲ್ಸ್ ) ಎಲ್ ಸಿ ಡಿ ಪರದೆ ಹೊಂದಿದೆ. ರಿಫ್ರೆಶ್ ದರ 90 ಹರ್ಟ್ಜ್ ಇದೆ. ಸ್ಯಾಮ್ ಸಂಗ್ ನ ಬಹುತೇಕ ಮೊಬೈಲ್ ಫೋನ್ ಗಳಲ್ಲಿ ಅಮೋಲೆಡ್ ಪರದೆ ಇರುತ್ತದೆ. ಇದರಲ್ಲಿ ಅಮೋಲೆಡ್ ಇಲ್ಲದಿರುವುದು ಒಂದು ಕೊರತೆ. ಎಲ್ ಸಿ ಡಿ ಪರದೆ ಆದರೂ, ಪರದೆಯ ಗುಣಮಟ್ಟ ಚೆನ್ನಾಗಿದೆ. ಪರದೆಯ ಮೇಲ್ತುದಿಯಲ್ಲಿ ಕ್ಯಾಮರಾಕ್ಕೆ ನೀಡುವ ಕಿಂಡಿ ದುಂಡಗಿನದಲ್ಲ (ಪಂಚ್ ಹೋಲ್ ಅಲ್ಲ) ಇದರಲ್ಲಿ ಹಳೆಯ ಶೈಲಿಯ ನೀರಿನ ಹನಿಯ (ವಾಟರ್ ಡ್ರಾಪ್) ಕಿಂಡಿ ನೀಡಲಾಗಿದೆ. ಬೆಜೆಲ್ ಫೋಟೋ ಫ್ರೇಮ್ ನಂತೆ ಸ್ವಲ್ಪ ಅಗಲವಿದೆ. ಇದರಿಂದಾಗಿ ಮೊಬೈಲ್ ಪರದೆಯ ವಿನ್ಯಾಸ ಸ್ವಲ್ಪ ಅಗಲವಿದ್ದು, ಇನ್ನಷ್ಟು ಕಿರಿದಾಗಿರಬೇಕಿತ್ತು ಅನಿಸುತ್ತದೆ.ಇಂಥ ಸಣ್ಣ ವಿಷಯಗಳು ಕೂಡ ಮೊಬೈಲ್ ವಿನ್ಯಾಸದಲ್ಲಿ ಮುಖ್ಯವಾಗುತ್ತವೆ.
ವಿನ್ಯಾಸ: ಮೊಬೈಲ್ 204 ಗ್ರಾಂ ತೂಕ ಇದ್ದು, 9.10 ಮಿಲಿಮೀಟರ್ ದಪ್ಪವಿದೆ. ಬಲಗಡೆ ಆನ್ ಆಫ್ ಗುಂಡಿಯಲ್ಲೇ ಬೆರಳಚ್ಚು ಸಂವೇದಕ ನೀಡಲಾಗಿದೆ. ಹಿಂಬದಿ ಮೂರು ಕ್ಯಾಮರಾ ಲೆನ್ಸ್ ಮತ್ತು ಫ್ಲಾಶ್ ಲೈಟ್ ಇದೆ. ಮೊಬೈಲ್ ನ ಕವಚ ಹಾಗೂ ಚೌಕಟ್ಟು (ಫ್ರೇಂ) ಪ್ಲಾಸ್ಟಿಕ್ ನದಾಗಿದೆ. ಆದರೂ ಪ್ಲಾಸ್ಟಿಕ್ ಎನಿಸದಂತೆ ಅಚ್ಚುಕಟ್ಟಾಗಿ ವಿನ್ಯಾಸ ಮಾಡಲಾಗಿದೆ. ಮೊಬೈಲ್ ಕೈಯಲ್ಲಿ ಹಿಡಿಯಲು ಹೆಚ್ಚು ದಪ್ಪವೂ ಇಲ್ಲ ಅಥವಾ ತೆಳುವೂ ಅಲ್ಲದಂತೆ ಇದೆ. 3.5 ಎಂ.ಎಂ. ಆಡಿಯೋ ಜಾಕ್ ಕಿಂಡಿ ಸಹ ಇದೆ.
ಪ್ರೊಸೆಸರ್ ಮತ್ತು ಕಾರ್ಯಾಚರಣಾ ವ್ಯವಸ್ಥೆ: ಇದರಲ್ಲಿ ಸ್ಯಾಮ್ ಸಂಗ್ ನ ಸ್ವಂತ ತಯಾರಿಕೆಯಾದ ಎಕ್ಸಿನಾಸ್ 1330 5ಜಿ ಪ್ರೊಸೆಸರ್ ಇದೆ. ಇದು ಎಂಟು ಕೋರ್ಗಳ, 5ಜಿ ಸಂಪರ್ಕ ಸೌಲಭ್ಯವುಳ್ಳ ಮಧ್ಯಮ ದರ್ಜೆಯ ಪ್ರೊಸೆಸರ್. ಮಧ್ಯಮ ವರ್ಗದ ಮೊಬೈಲ್ ಗಳಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ ಪ್ರೊಸೆಸರ್. ಮಲ್ಟಿ ಟಾಸ್ಕಿಂಗ್ ಗೂ ಸೂಕ್ತವಾಗಿದೆ. 20 ಸಾವಿರದೊಳಗಿನ ಮೊಬೈಲ್ ಗಳಲ್ಲಿರಬೇಕಾದ ವೇಗದ ಕಾರ್ಯಾಚರಣೆಯನ್ನು ಇದು ಹೊಂದಿದೆ. ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಹೊಂದಿದೆ. ಇದಕ್ಕೆ ಒನ್ ಯೂ ಐ ಬೆಂಬಲವಿದೆ. ಒಂದು ನೀಟಾದ ಯೂಸರ್ ಇಂಟರ್ ಫೇಸ್ ಎಂದು ಹೇಳಬಹುದು. ಎರಡು ವರ್ಷಗಳ ಓಎಸ್ ಅಪ್ ಗ್ರೇಡ್ ಮತ್ತು 4 ವರ್ಷಗಳ ಸೆಕ್ಯುರಿಟಿ ಅಪ್ ಡೇಟ್ ನೀಡುವುದಾಗಿ ಸ್ಯಾಮ್ ಸಂಗ್ ತಿಳಿಸಿದೆ. ಇದೊಂದು ಒಳ್ಳೆಯ ಅಂಶ.
ಕ್ಯಾಮರಾ: ಹಿಂಬದಿ ಮೂರು ಕ್ಯಾಮರಾ ಲೆನ್ಸ್ ಗಳನ್ನು ಈ ಮೊಬೈಲ್ ಹೊಂದಿದೆ. 50 ಮೆ.ಪಿ. ಪ್ರಧಾನ ಲೆನ್ಸ್ ಇದೆ. , 2 ಮೆ.ಪಿ. ಮ್ಯಾಕ್ರೋ ಲೆನ್ಸ್, 2 ಮೆ.ಪಿ. ಡೆಪ್ತ್ ಲೆನ್ಸ್ ಇದೆ. ಕ್ಯಾಮರಾ ಗುಣಮಟ್ಟ ಈ ದರಕ್ಕೆ ಹೋಲಿಸಿದಾಗ ಉತ್ತಮವಾಗಿದೆ. ಹೊರಾಂಗಣ ಮತ್ತು ಒಳಾಂಗಣ ಫೋಟೋಗಳು ಚೆನ್ನಾಗಿ ಮೂಡಿಬಂದವು. ಮುಂಬದಿ ಕ್ಯಾಮರಾ 13 ಮೆ.ಪಿ. ಇದ್ದು, ನಿರೀಕ್ಷಿಸಿರದ ಮಟ್ಟದಲ್ಲಿ ಉತ್ತಮವಾದ ಫೋಟೋಗಳನ್ನು ನೀಡುತ್ತದೆ. ಸ್ಯಾಮ್ ಸಂಗ್ ಫೋನ್ ಗಳಲ್ಲಿ ಮಧ್ಯಮ ಶ್ರೇಣಿಯಲ್ಲಿದ್ದರೂ ಕ್ಯಾಮರಾ ಚೆನ್ನಾಗಿರುತ್ತದೆ ಎಂದು ಬಳಕೆದಾರರು ಹೇಳುವುದು ಹೀಗಾಗಿಯೇ.
ಬ್ಯಾಟರಿ: ಇದರಲ್ಲಿ 5000 ಎಂಎಎಚ್ ಬ್ಯಾಟರಿ ಇದೆ. 15 ವ್ಯಾಟ್ಸ್ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಬಾಕ್ಸ್ ನಲ್ಲಿ ಚಾರ್ಜರ್ ನೀಡಿಲ್ಲ. ಇದು ಸಿ ಟೈಪ್ ಚಾರ್ಜರ್ ಕಿಂಡಿ ಹೊಂದಿದೆ. ಒಂದೂವರೆ ದಿನ ಬ್ಯಾಟರಿ ಬಾಳಿಕೆ ಬರುತ್ತದೆ. ಕರೆ, ವಾಟ್ಸಪ್ ನೋಡುವಿಕೆಯಂಥ ಸಾಧಾರಣ ಬಳಕೆ, ಆಪ್ ಗಳು ಬಳಸದಿದ್ದಾಗ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸದಂತೆ ಸೆಟಿಂಗ್ ಮಾಡಿಕೊಂಡರೆ (ಬ್ಯಾಟರಿ ಸೇವಿಂಗ್ ಆಯ್ಕೆಗಳು) ಎರಡು ದಿನ ಬ್ಯಾಟರಿ ಬಾಳಿಕೆ ಬರುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, 15 ಸಾವಿರ ರೂ. ದರಪಟ್ಟಿಯಲ್ಲಿ 5ಜಿ ಮೊಬೈಲ್ ಬೇಕೆನ್ನುವ ಹಾಗೂ ಸ್ಯಾಮ್ ಸಂಗ್ ನಂತಹ ಉತ್ತಮ ಬ್ರಾಂಡ್ ಬಯಸುವವರಿಗೆ ಇದು ಸೂಕ್ತ ಮೊಬೈಲ್. ಪ್ರಸ್ತುತ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ನಲ್ಲಿ ಈ ಮೊಬೈಲ್ ಗೆ ಕ್ರೆಡಿಟ್ ಕಾರ್ಡ್ ಗಳ ಮೂಲಕ 1500 ರೂ. ರಿಯಾಯಿತಿ ಬೆಲೆ ಮೂಲಕ ಕೊಂಡಾಗ ಇದು ನೀಡುವ ಹಣಕ್ಕೆ ತಕ್ಕ ಮೌಲ್ಯ ನೀಡುವ ಮೊಬೈಲ್ ಎನ್ನಲಡ್ಡಿಯಿಲ್ಲ.
-ಕೆ.ಎಸ್. ಬನಶಂಕರ ಆರಾಧ್ಯ