ಸಿಯೋಲ್: ಜಗತ್ತಿನ ಅತಿ ದೊಡ್ಡ ಮೊಬೈಲ್ ತಯಾರಿಕೆ ಕಂಪೆನಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕೋ. ಚೀನದಲ್ಲಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.
ಇನ್ನು ಮುಂದೇನಿದ್ದರೂ ಭಾರತದಲ್ಲೇ ಪೂರ್ಣವಾಗಿ ಸ್ಯಾಮ್ಸಂಗ್ ತನ್ನ ಉತ್ಪಾದನೆಯನ್ನು ಮಾಡಲಿದ್ದು, ಜಗತ್ತಿಗೆ ಇಲ್ಲಿಂದಲೇ ಮೊಬೈಲ್‌ಗಳ ಪೂರೈಕೆಯಾಗಲಿದೆ. ಚೀನದ ಹೈಝುವಿನಲ್ಲಿದ್ದ ಫ್ಯಾಕ್ಟರಿಯನ್ನು ಕೊನೆಯದಾಗಿ ಮೊನ್ನೆ ಜೂನ್ ಸ್ಯಾಮ್ಸಂಗ್ ಮುಚ್ಚಿದೆ.
ಚೀನದಲ್ಲಿ ಹೆಚ್ಚುತ್ತಿರುವ ಉತ್ಪಾದನೆ ವೆಚ್ಚ, ಕಾರ್ಮಿಕರ ವೇತನ, ಆರ್ಥಿಕ ಹಿಂಜರಿತ, ಅಮೆರಿಕದೊಂದಿಗೆ ವ್ಯಾಪಾರ ಯುದ್ಧ ಇತ್ಯಾದಿಗಳಿಂದ ಹಲವು ಕಂಪೆನಿಗಳು ಚೀನವನ್ನು ತೊರೆಯುತ್ತಿವೆ. ಈಗ ಸ್ಯಾಮ್ಸಂಗ್ ಕೂಡ ಇದೇ ಹಾದಿಯನ್ನು ತಿಳಿದಿದೆ.
ಸೋನಿ ಕೂಡ ಬೀಜಿಂಗ್‌ನಲ್ಲಿರುವ ಸ್ಮಾರ್ಟ್‌ಫೋನ್ ತಯಾರಿಕೆ ಘಟಕವನ್ನು ಮುಚ್ಚುವ ಇಚ್ಛೆ ವ್ಯಕ್ತಪಡಿಸಿದೆ. ಆದರೆ ಸದ್ಯ ಆ್ಯಪಲ್ ಇನ್ನೂ ಚೀನದಲ್ಲಿ ತಯಾರಿಕೆ ಮುಂದುವರಿಸಿದೆ.
ಚೀನದಲ್ಲಿ ಸ್ಯಾಮ್ಸಂಗ್ ಫೋನ್ ಮಾರುಕಟ್ಟೆ ಶೇ.1ರಷ್ಟಕ್ಕೆ ಇಳಿದಿದೆ. ಇದು 2013ರ ಮೊದಲ ತ್ತೈಮಾಸಿಕದಲ್ಲಿ ಶೇ.15ರಷ್ಟಿತ್ತು. ಹುವೈ, ಶಿಓಮಿ ಇತ್ಯಾದಿ ಚೀನೀ ಮೊಬೈಲ್ ತಯಾರಿಕೆಗಳು ಆ ದೇಶದ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆಯುತ್ತಿದ್ದು ಇದರಿಂದ ವಿದೇಶಿ ಕಂಪೆನಿಗಳು ಕೈ ಸುಟ್ಟುಕೊಳ್ಳುವಂತಾಗಿದೆ.
ಇನ್ನು ಸ್ಯಾಮ್ಸಂಗ್ ಭಾರತದಲ್ಲಿ ಪ್ರತ್ಯೇಕ ಉತ್ಪಾದನೆ ಘಟಕಗಳನ್ನು ಹೊಂದಿದ್ದು, ಇಲ್ಲಿನ ಮಾರುಕಟ್ಟೆಗೆ ಮತ್ತು ರಫ್ತಿಗೆ ಸಾಕಾಗುವಷ್ಟು ಮೊಬೈಲ್‌ಗಳನ್ನು ಈಗಾಗಲೇ ತಯಾರು ಮಾಡುತ್ತಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಸ್ಯಾಮ್ಸಂಗ್‌ನ ಜಗತ್ತಿನಲ್ಲೇ ಅತಿ ದೊಡ್ಡ ಮೊಬೈಲ್ ತಯಾರಿಕೆ ಕೇಂದ್ರವಿದೆ.