Advertisement
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಯನಗರದ ಬಡ ಕುಟುಂಬದ ಪುಟ್ಟ ಮನೆಯ ನಿವಾಸಿ ಎಸ್.ಇ. ಸಂಶೀರ್ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ಗೆಲ್ಲಬೇಕು ಎಂದು ಪಣತೊಟ್ಟಿರುವ ಚಿನ್ನದ ಹುಡುಗ.
ಎಸ್.ಎಂ. ಇಬ್ರಾಹಿಂ-ಆಯಿಷಾ ದಂಪತಿಯ ಎರಡನೇ ಪುತ್ರ ಸಂಶೀರ್ ಅವರ ಕುಟುಂಬಕ್ಕೆ ಜಯನಗರದಲ್ಲಿ 10 ಸೆಂಟ್ಸ್ ಜಾಗ, ಮನೆ ಬಿಟ್ಟರೆ ಬೇರೇನೂ ಇಲ್ಲ. ಬೆಂಗಳೂರಿನಲ್ಲಿ ಉದ್ಯೋಗಿ ಆಗಿರುವ ಅಣ್ಣ ಸಂಶುದ್ದೀನ್, ಕೆಲ ಕಾಲ ಅರಬ್ ದೇಶದಲ್ಲಿದ್ದ ತಂದೆಯ ಸಂಪಾದನೆ ಕುಟುಂಬಕ್ಕಿದ್ದ ದಾರಿ. ಸಂಶೀರ್‌ಗೆ ರೈಲ್ವೇಯಲ್ಲಿ ಉದ್ಯೋಗ ಸಿಕ್ಕಿದ ಬಳಿಕ ತಂದೆ ಇಬ್ರಾಹಿಂ ಊರಿಗೆ ಮರಳಿದ್ದಾರೆ.
Related Articles
ದುಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟ ಸಂಶೀರ್ ಉದ್ದಜಿಗಿತ, ತ್ರಿವಿಧ ಜಿಗಿತ, ಜಾವೆಲಿನ್‌ನಲ್ಲಿ ಆಸಕ್ತಿ ಹೊಂದಿದ್ದರು. ಆರಂಭದಲ್ಲಿ ಮಾವ ಯೂಸುಫ್ ಅವರ ಪ್ರೋತ್ಸಾಹ ಸಂಶೀರ್‌ಗೆ ಸ್ಫೂರ್ತಿ ನೀಡಿತ್ತು. ಪಿಯುಸಿಗೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಕೋಟಾದಡಿ ಸೇರ್ಪಡೆಗೊಂಡರು. ಪದವಿ ಮುಗಿಸಿ ಪ್ರಸ್ತುತ ಮುಂಬೈ ರೈಲ್ವೇಯಲ್ಲಿ ಉದ್ಯೋಗಿಯಾಗಿದ್ದಾರೆ. ರೈಲ್ವೆಯ ತಿರುವನಂತಪುರದ ಇಂಡಿಯನ್ ಅಥ್ಲೆಟಿಕ್ಸ್ ತರಬೇತಿ ಸಂಸ್ಥೆಯಲ್ಲಿ ಕಳೆದ 4 ವರ್ಷಗಳಿಂದ ಲಾಂಗ್‌ಜಂಪ್‌ನಲ್ಲಿ ಅಭ್ಯಾಸ ನಿರತರಾಗಿದ್ದು, ಹಲವು ಕೂಟಗಳಲ್ಲಿ ಕರ್ನಾಟಕ ಹಾಗೂ ಭಾರತವನ್ನು ಪ್ರತಿನಿಧಿಸಿದ್ದಾರೆ.
Advertisement
ಪದಕಗಳ ಸರಮಾಲೆರಾಷ್ಟ್ರೀಯ ಸ್ಕೂಲ್ ಗೇಮ್ ಫೆಡರೇಶನ್ ಕ್ರೀಡಾಕೂಟ, ಮಂಗಳೂರು ವಿ.ವಿ. ಮಟ್ಟದ ಕ್ರೀಡಾಕೂಟ, ಆಲ್ ಇಂಡಿಯಾ ಅಂತರ್ ವಿ.ವಿ. ಕ್ರೀಡಾಕೂಟ, ನ್ಯಾಷನಲ್ ಓಪನ್ ಗೇಮ್ಸ್, 55ನೇ ಸೀನಿಯರ್ ಇಂಟರ್‌ಸ್ಟೇಚ್ ಕ್ರೀಡಾಕೂಟ, ದಿಲ್ಲಿ ಸೀನಿಯರ್ ಫೆಡರೇಶನ್ ಕಪ್, ತುರ್ಕ್‌ಮೆನಿಸ್ಥಾನ್ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್, ಚೆನ್ನೈ ಸೀನಿಯರ್ ಒಪನ್ ಚಾಂಪಿಯನ್‌ಶಿಪ್, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್, ಏಷ್ಯನ್ ಹೊರಾಂಗಣ ಗೇಮ್ಸ್… ಹೀಗೆ ಹತ್ತು ಹಲವು ಕ್ರೀಡಾಕೂಟದಲ್ಲಿ ಭಾಗಹಿಸಿರುವ ಸಂಶೀರ್ ಹಲವು ದಾಖಲೆಯೊಂದಿಗೆ ಪದಕ ಗೆದ್ದಿದ್ದಾರೆ. 24 ವರ್ಷದ ದಾಖಲೆ ಅಳಿಸಿದರು
ಬೆಂಗಳೂರಿನಲ್ಲಿ ಜು. 27-28ರಂದು ನಡೆದ ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಆಳ್ವಾಸ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಸಂಶೀರ್ ಲಾಂಗ್‌ಜಂಪ್ ಫೈನಲ್‌ನ ಮೊದಲ ಹಂತದಲ್ಲಿ 7.91 ಮೀ. ದೂರ ಜಿಗಿದು ಹೊಸ ಕೂಟ ದಾಖಲೆ ನಿರ್ಮಿಸಿದ್ದಾರೆ. 1995ರಲ್ಲಿ ಸಿ. ಕುಂಜುಮೋನ್ ಹೆಸರಿನಲ್ಲಿದ್ದ 7.86 ಮೀ. ದಾಖಲೆಯನ್ನು ಮೀರಿ ಈ ಸಾಧನೆ ತೋರಿರುವುದು ವಿಶೇಷ. ನನ್ನ ಕ್ರೀಡಾ ಸಾಧನೆಗೆ ಮಾವ, ತಂದೆ, ತಾಯಿ, ಅಣ್ಣ ಹಾಗೂ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಕಾರಣ. ಬಡತನದ ಬದುಕಾಗಿದ್ದರೂ, ಇವರೆಲ್ಲರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು’
– ಸಂಶೀರ್, ಅಥ್ಲೀಟ್ – ಕಿರಣ್ ಪ್ರಸಾದ್ ಕುಂಡಡ್ಕ