ರಾಷ್ಟ್ರಪತಿ ಚುನಾವಣೆ ಜತೆಜತೆಗೇ ಸೋಮವಾರದಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಕೇಂದ್ರ ಸರಕಾರ ಒಟ್ಟು 24 ಮಸೂದೆಗಳನ್ನು ಮುಂದಿಟ್ಟುಕೊಂಡಿದ್ದು, ಇವುಗಳ ಒಪ್ಪಿಗೆಗಾಗಿ ಪ್ರಯತ್ನ ನಡೆಸಲಿದೆ. ಅತ್ತ ವಿಪಕ್ಷಗಳು ಹಣದುಬ್ಬರ, ಆರ್ಥಿಕತೆ, ಅಗ್ನಿಪಥ ಯೋಜನೆ ಸೇರಿ ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪಿಸಲು ಸಿದ್ಧತೆ ನಡೆಸಿವೆ.
ರಾಷ್ಟ್ರಪತಿ ಚುನಾವಣೆ ಆಯ್ಕೆ ವಿಚಾರವಾಗಿಯೇ ಈ ಅಧಿವೇಶನ ಅತ್ಯಂತ ಮಹತ್ವ ಪಡೆದಿದೆ. ಇದರ ಹಿಂದೆಯೇ ಸ್ಪೀಕರ್ ಓ ಬಿರ್ಲಾ ಅವರ ನೇತೃತ್ವದಲ್ಲಿ ರವಿವಾರ ಸರ್ವಪಕ್ಷಗಳ ಸಭೆ ನಡೆದಿದ್ದು, ಸುಸೂತ್ರವಾಗಿ ಸದನ ನಡೆಸುವ ಸಂಬಂಧ ವಿಪಕ್ಷಗಳ ಬೆಂಬಲ ಕೋರಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರೂ ಈ ಸಭೆಯಲ್ಲಿ ಭಾಗಿಯಾಗಿ ವಿಪಕ್ಷಗಳ ಬೆಂಬಲ ಕೇಳಿದ್ದಾರೆ. ಹಾಗೆಯೇ ಸೋಮವಾರ ಶುರುವಾಗುವ ಈ ಅಧಿವೇಶನ ಆ. 12ರಂದು ಮುಕ್ತಾಯ ಕಾಣಲಿದೆ. ಆ. 6ರಂದು ಉಪರಾಷ್ಟ್ರಪತಿ ಚುನಾವಣೆಯೂ ನಡೆಯಲಿದ್ದು, ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಏಕೆಂದರೆ ಈ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರೇ ಮತದಾರರಾಗಿದ್ದಾರೆ.
ಈ ಬಾರಿ 18 ದಿನಗಳ ಕಲಾಪ ನಡೆಯಲಿದೆ. ಸಂಸತ್‌ನಲ್ಲಿ ಒಟ್ಟು 35 ಮಸೂದೆಗಳು ಅಂಗೀಕಾರಕ್ಕಾಗಿ ಬಾಕಿ ಉಳಿದಿವೆ. 24 ಹೊಸ ಮಸೂದೆಗಳನ್ನು ಈ ಬಾರಿಯ ಅಧಿವೇಶನದಲ್ಲಿ ತರಲು ಕೇಂದ್ರ ಸರಕಾರ ಮುಂದಾಗಿದೆ. ಇದರಲ್ಲಿ ಕೆಲವು ಮಸೂದೆಗಳು ಲೋಕ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದು, ರಾಜ್ಯಸಭೆಯಲ್ಲಿ ಇನ್ನಷ್ಟು ಅಂಗೀಕಾರ ಪಡೆಯಬೇಕಾಗಿದೆ. ಈಗ ರಾಜ್ಯಸಭೆಯಲ್ಲಿ ಎನ್‌ಡಿಎ ಸದಸ್ಯರ ಬಲವೂ ಹೆಚ್ಚಾಗಿದ್ದು, ಒಪ್ಪಿಗೆಗಾಗಿ ಸರ್ವ ಪ್ರಯತ್ನ ನಡೆಸಿದೆ.
ಆ್ಯಂಟಿ ಮೆರಿಟೈಮ್ ಪೈರೆಸಿ ಮಸೂದೆ, ಇಂಡಿಯನ್ ಅಂಟಾರ್ಟಿಕ್ ಮಸೂದೆ, ದಿ ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್ ಆ್ಯಂಡ್ ದೇರ್ ಡಿಲೆವರಿ ಸಿಸ್ಟಮ್(ಅಕ್ರಮ ಚಟುವಟಿಕೆಗಳ ನಿಯಂತ್ರಣ) ಮಸೂದೆ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಯೋಗಕ್ಷೇಮ ಮಸೂದೆ,) ಸಂವಿಧಾನ (ಪರಿಶಿಷ್ಟ ಜಾತಿ ಮತ್ತು ಪಂಗಡಗಳ) ತಿದ್ದುಪಡಿ ಮಸೂದೆ, ರಾಷ್ಟ್ರೀಯ ಮಾದಕ ನಿಯಂತ್ರಣ ಮಸೂದೆ, ದಿ ವೈಲ್ಡ್ ಲೈಫ್(ರಕ್ಷಣ) ಮಸೂದೆ, ಅಂತರ ರಾಜ್ಯ ನದಿ ನೀರು ಸಮಸ್ಯೆಗಳ ಮಸೂದೆ, ದಿವಾಳಿ ಸಂಹಿತೆ ಮಸೂದೆ, ಮಲ್ಟಿ ಸ್ಟೇಟ್ ಕೋ – ಆಪರೇಟಿವ್ ಮಸೂದೆ, ದಿ ಕಾಂಪಟೇಶನ್ ಮಸೂದೆ, ದಿ ಕಾಫಿ ಮಸೂದೆ, ದಿ ಕಂಟೋನ್ಮೆಂಟ್ ಮಸೂದೆ, ದಿ ಟ್ರಾಫಿಕ್ಕಿಂಗ್ ಮಸೂದೆ ಸೇರಿ ಹಲವು ಬಿಲ್‌ಗಳಿಗೆ ಕೇಂದ್ರ ಒಪ್ಪಿಗೆ ಪಡೆಯುವ ಇರಾದೆ ಹೊಂದಿದೆ.
ಆದರೂ, ಅಧಿವೇಶನ ಆರಂಭಕ್ಕೂ ಮುನ್ನವೇ ಅಸಂಸದೀಯ ಪದಗಳ ಬಳಕೆ ನಿಷೇಧ ಮತ್ತು ಸಂಸತ್ ಒಳಗೆ ಪ್ರತಿಭಟನೆಗೆ ನಿರ್ಬಂಧ ವಿಚಾರಗಳು ಸಾಕಷ್ಟು ಸದ್ದು ಮಾಡಿವೆ. ಈ ನಿರ್ಧಾರಗಳ ವಿರುದ್ಧ ವಿಪಕ್ಷಗಳು ಸರಕಾರದ ವಿರುದ್ಧ ಮುಗಿಬಿದ್ದಿವೆ. ಹೀಗಾಗಿ ಸೋಮ ವಾರದಿಂದ ಶುರುವಾಗುವ ಅಧಿವೇಶನ ಒಂದಷ್ಟು ಸದ್ದು ಮಾಡುವ ಸಾಧ್ಯತೆಯಂತೂ ಇದ್ದೇ ಇದೆ. ಅಲ್ಲದೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ಸಮನ್ಸ್ ಕುರಿತಂತೆಯೂ ಪಕ್ಷ ಪ್ರಸ್ತಾಪಿಸುವ ಸಾಧ್ಯತೆ ಇದೆ. ಬೆಲೆ ಏರಿಕೆ, ರೂಪಾಯಿ ಮೌಲ್ಯ ಇಳಿಕೆ, ಆರ್ಥಿಕತೆ ಸೇರಿದಂತೆ ವಿವಿಧ ವಿಚಾರಗಳ ಸಂಬಂಧ ಸಂಸತ್‌ನಲ್ಲಿ ರಚನಾತ್ಮಕವಾಗಿ ಚರ್ಚೆ ನಡೆಯಲಿ.