Advertisement

ನಾಟಕದಿಂದ ಸುಧಾರಿಸಬಹುದು ಸಂಸಾರ

02:43 PM Apr 05, 2017 | Team Udayavani |

ಹುಬ್ಬಳ್ಳಿ: ಸಂಸಾರವನ್ನು ನಾಟಕದಿಂದ ಸುಧಾರಿಸಬಹುದು. ಆದರೆ ಅದೇ ನಾಟಕ ಕೆಟ್ಟರೆ ಮತ್ತೂಂದು ನಾಟಕ ಪ್ರದರ್ಶನ ಮಾಡುವ ಮೂಲಕವೇ ಅದನ್ನು ಸರಿಪಡಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.

Advertisement

ಇಲ್ಲಿನ ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ಮಂಗಳವಾರ ಧಾರವಾಡ ಡಾ| ನಂದಾ ಪಾಟೀಲ ಸಂಗೀತ ಅಕಾಡೆಮಿಯಿಂದ ಹಮ್ಮಿಕೊಂಡ ಡಾ| ಮಲ್ಲಿಕಾರ್ಜುನ ಪಾಟೀಲ ಮತ್ತು ಎಲ್‌.ಜಿ. ದೇವಾಂಗಮಠ ನಗೆ ನಾಟಕೋತ್ಸವ ಹಾಗೂ ರಂಗಭೂಮಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರದ ಪುಣೆ, ಸೊಲ್ಲಾಪುರ ಸೇರಿದಂತೆ ಹಲವು ನಗರಗಳಲ್ಲಿ ಹೆಚ್ಚು ನಾಟಕಗಳು ಪ್ರದರ್ಶನ ಗೊಳ್ಳುತ್ತವೆ. ಆದರೆ ಹುಬ್ಬಳ್ಳಿಯಲ್ಲಿ ಬೆರೆಳೆಣಿಕೆಯಷ್ಟು ನಾಟಕ ಪ್ರದರ್ಶನಗೊಳ್ಳುತ್ತಿದ್ದರೂ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ ಎಂದರು. 

ವಾಕರಸಾ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ರಂಗಭೂಮಿಯನ್ನು ಉಳಿಸಿ-ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ರಂಗಭೂಮಿ ಬೆಳೆದರೆ ಮಾತ್ರ ಕಲಾವಿದರು ಬದುಕಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಕವಿ ಸೋಮನಾಥ ಕಠಾರೆ ಹಾಗೂ ರಂಗಭೂಮಿ ಕಲಾವಿದ ಶಶಿಧರ ಪಾಟೀಲ ಅವರಿಗೆ ಐದು ಸಾವಿರ ರೂ. ನಗದು ನೀಡಿ ರಂಗಭೂಮಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕವಿ ಸೋಮನಾಥ ಕಠಾರೆ, ರಂಗಭೂಮಿ ಕಲಾವಿದರಲ್ಲಿ ಶೇ.90ರಷ್ಟು ಜನರು ತುಂಬಾ ಬಡವರಿದ್ದು, ಅಂತಹವರೆಲ್ಲರನ್ನು ಗುರುತಿಸುವ ಕೆಲಸವಾಗಬೇಕು ಎಂದರು.

Advertisement

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ಜಗುಚಂದ್ರ ಮಾತನಾಡಿ, ನಗರದಲ್ಲಿರುವ ಕನ್ನಡ ಭವನದಂತೆ ನಗರದ ನಾಲ್ಕು ದಿಕ್ಕುಗಳಲ್ಲೂ ಇಂತಹ ಭವನಗಳು ನಿರ್ಮಾಣವಾಗುವ ಮೂಲಕ ಎಲ್ಲೆಡೆ ನಾಟಕ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ನಂದಾ ಪಾಟೀಲ, ಶಶಿಧರ ಪಾಟೀಲ, ಸುರೇಶ ಹೊರಕೇರಿ ಸೇರಿದಂತೆ ಮೊದಲಾದವರು ಇದ್ದರು. ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರು. ಡಾ| ಮಹೇಶ ಹೊರಕೇರಿ ನಿರೂಪಿಸಿದರು. ಬಿ.ಎಸ್‌.ಮಾಳವಾಡ ವಂದಿಸಿದರು. ಕೊನೆಯಲ್ಲಿ ಎಲ್‌.ಜಿ.ದೇವಾಂಗಮಠ ರಚನೆ ಮಾಡಿದ ಶಶಿಧರ ಪಾಟೀಲ ನಿರ್ದೇಶನದ ನನಗೆಲ್ಲ ಗೊತ್ತೈತಿ ನಾಟಕ ಪ್ರದರ್ಶನ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next