Advertisement
ಹಚ್ಚ ಹಸುರು ಬಡಾವಣೆಗೆ ಬರುವವರ ಮನ ಮುದಗೊಳಿಸಿದರೆ, ಗೋಡೆಗಳಲ್ಲಿ ಇರುವ ವರ್ಣಮಯ ತುಳುನಾಡಿನ ಸಂಪ್ರದಾಯ ಬಿಂಬಿಸುವ ಚಿತ್ತಾರ ಆಕರ್ಷಿಸುತ್ತದೆ. ಮೊದಲಿಗೆ ಕಾಣಸಿಗುವುದೇ ಸೌಹಾರ್ದದ ಸಂಕೇತದ ಚಿತ್ರ. ತುಳುನಾಡಿನ ಆಟಿ ಕಳಂಜ ಆಟಿಯನ್ನು ನೆನಪಿಸಿದರೆ, ನೇಮದ ಅಣಿ ಭೂತಕೋಲವನ್ನು ಯಕ್ಷಗಾನದ ಮಹಿಷಾಸುರ ಚಿತ್ರವು ಯಕ್ಷಗಾನದ ಕೊನೆಯ ಭಾಗ ಮಹಿಷಾಸುರ ಬರುವ ಭಾಗವನ್ನು ನೆನಪಿಸುತ್ತದೆ. ಇನ್ನು ಮೊಗವೀರ ಸಾಂಪ್ರದಾಯಿಕ ಮೀನು ಬಲೆ ಹಾರಿಸುವ ಚಿತ್ರ, ಕೃಷ್ಣಾಷ್ಟಮಿಯ ಮಡಕೆ ಒಡೆಯುವ, ಹುಲಿ ವೇಷ, ಕೋಳಿ ಅಂಕ, ರಥೋತ್ಸವ, ದೇವರ ಬಲಿ ಹೀಗೆ ತುಳುನಾಡ ಹಬ್ಬ ಹರಿದಿನ ಚಿತ್ರಗಳು ಕಣ್ಮನ ಸೆಳೆಯುತ್ತವೆ.
ಗೋಕುಲ ನಗರ ನಿವಾಸಿಗಳ ಸಂಘ ಬಡಾವಣೆಯನ್ನು ಮಾದರಿಯಾಗಿ, ಸ್ವಚ್ಛವಾಗಿ ಇಡಲು ಹಲವು ವರ್ಷಗಳ ಹಿಂದೆಯೇ ಸೈಕಲ್ ಮೂಲಕ ಮನೆ ಮನೆ ತೆರಳಿ ತ್ಯಾಜ್ಯ ಸಂಗ್ರಹಿಸಿದ ಕೀರ್ತಿ ಹೊಂದಿದೆ. ಇದೀಗ ರಸ್ತೆಯ ಎರಡೂ ಬದಿ ಕಾಂಕ್ರೀಟ್ ಹಾಕುವ ಮೂಲಕ ಹುಲ್ಲು ಬೆಳೆಯದಂತೆ ಮಾಡಲಾಗಿದೆ. ಇಲ್ಲವಾದರೆ ವರ್ಷಕ್ಕೆ ಹಲವು ಸಾವಿರ ರೂಪಾಯಿ ಇದಕ್ಕಾಗಿಯೇ ಮೀಸಲು ಇಡಬೇಕಾಗಿತ್ತು. ಸ್ವಚ್ಛತೆಯ ಸರ್ವೇಗೆ ಸೂಕ್ತ
ಸ್ವಚ್ಛತೆಯ ಸರ್ವೇ ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಇದಕ್ಕೆ ಕುಳಾಯಿ ಗೋಕುಲನಗರ ಸೂಕ್ತವಾಗಿದೆ. ಇಲ್ಲಿನ ಸಂಘವು ಪ್ರತೀ ವಾರ ಸ್ವಚ್ಛತ ಕಾರ್ಯದ ಮೇಲುಸ್ತುವಾರಿ ವಹಿಸಿ ಪರಿಶೀಲನೆ ನಡೆಸುತ್ತದೆ. ಇಲ್ಲಿಂದ ಪ್ರತಿ ದಿನ ಸಂಗ್ರಹಿಸಲಾದ ಕಸವನ್ನು ಪಾಲಿಕೆ ವತಿಯಿಂದ ಬರುವ ವಾಹನಕ್ಕೆ ನೀಡಲಾಗುತ್ತದೆ. ಇಲ್ಲಿನ ನಿವಾಸಿಗಳೂ ಸ್ವತ್ಛತೆಯ ಕುರಿತಾಗಿ ಜಾಗೃತರಾಗಿ ಬಡಾವಣೆಯನ್ನು ಶುಚಿತ್ವದಿಂದ ಇಟ್ಟುಕೊಳ್ಳುವಲ್ಲಿ ಒಗ್ಗಟ್ಟಾಗಿ ಶ್ರಮಿಸುತ್ತಾರೆ ಎನ್ನುತ್ತಾರೆ ಸಂಘದ ಉಪಾಧ್ಯಕ್ಷ ವಿಜಯ್ ಸುವರ್ಣ.
Related Articles
ಸಂಘದ ಚಟುವಟಿಕೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ವಿದ್ಯಾರ್ಥಿವೇತನ, ಸಂಘದ ನಿವಾಸಿಗಳ ಅನುಕೂಲಕ್ಕಾಗಿ ಆರೋಗ್ಯ ಶಿಬಿರ, ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬಡಾವಣೆಯಲ್ಲಿ ಸದಾ ಉತ್ಸಾಹ, ಸಂತಸದ ಚಿಲುಮೆ ಇರುವಂತೆ ಮಾಡಿದರೆ, ಹಿರಿಯರಿಗೆ ವಿಶ್ರಾಂತಿ ಕಟ್ಟೆ, ದೇಶದ ಹಬ್ಬವನ್ನು ಆಚರಿಸಲು ಧ್ವಜಸ್ತಂಭವಿದೆ. ಬಡಾವಣೆಯ ನಾಗರಿಕರ ಕ್ರೀಡೆಗಾಗಿ ಕ್ರೀಡಾಉಪಕರಣಗಳಿವೆ. 17ನೇ ವಾರ್ಷಿಕೋತ್ಸವ ಸಂಭ್ರಮವನ್ನು ಸಂಘ ಜ. 6 ರಂದು ಆಚರಿಸುತ್ತಿದ್ದು, ನೂತನವಾಗಿ ಕೈಗೊಂಡ ವರ್ಣಚಿತ್ರಗಳ ಉದ್ಘಾಟನೆ, ವಿವಿಧ ಮೂಲ ಸೌಲಭ್ಯಗಳ ಅನಾವರಣ ನಡೆಯಲಿದೆ.
Advertisement
ಮಾದರಿಯಾಗಿ ರೂಪಿಸಿದ್ದೇವೆಜ. 6ರಂದು ಗೋಕುಲನಗರ ನಿವಾಸಿಗಳ ಸಂಘದ ವಾರ್ಷಿಕೋತ್ಸವವಿದೆ. ಇದಕ್ಕೂ ಮುನ್ನ ಬಡಾವಣೆಯನ್ನು ವರ್ಣಮಯಗೊಳಿಸಿದ್ದೇವೆ. ತುಳು ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದೇವೆ. ನಮ್ಮ ಸಂಘದ ಖರ್ಚಿನಲ್ಲಿಯೇ ನಮ್ಮ ಬಡಾವಣೆಯನ್ನು ಇತರರಿಗೆ ಮಾದರಿಯಾಗಿ ರೂಪಿಸಿದ್ದೇವೆ. ಪಾಲಿಕೆ ವತಿಯಿಂದ ಸ್ವಚ್ಛತೆಯ ಕುರಿತಾಗಿ ಬಡಾವಣೆಗೆ ಇಂತಿಷ್ಟು ಹಣ ಬಿಡುಗಡೆ ಮಾಡಿ ಸ್ಪರ್ಧೆ ಏರ್ಪಡಿಸಿದಲ್ಲಿ ಪ್ರತೀ ಬಡಾವಣೆ ಸ್ವಚ್ಛವಾಗಿ, ಸುಂದರವಾಗಿ ಇರುವಂತೆ ನೋಡಿಕೊಳ್ಳಲು ಸ್ಪರ್ಧೆ ಏರ್ಪಡುತ್ತದೆ. ಪಾಲಿಕೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದರೆ ನಮ್ಮ ಸಂಘ ಬೆಂಬಲ ನೀಡುತ್ತದೆ.
– ಪದ್ಮರಾಜ್, ಅಧ್ಯಕ್ಷ,
ಗೋಕುಲನಗರ ನಿವಾಸಿಗಳ ಸಂಘ, ಕುಳಾಯಿ