ಉಡುಪಿ: ವಿದ್ಯಾರ್ಥಿಗಳ ಪರಿಶ್ರಮದಿಂದ ಮೂಡಿಬಂದ ಕಲಾಕೃತಿಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದರೊಂದಿಗೆ, ಜನಸಾಮಾನ್ಯರಿಗೆ ಸಂದೇಶ ಸಾರಿ, ಕಡಿಮೆ ಬೆಲೆಗೆ ಕಲಾಕೃತಿ ಮಾರಾಟ ಮಾಡುವ ಮೂಲಕ ನಿಧಿ ಸಂಗ್ರಹಿಸಿ ಕೊಡಗಿನ ಸಂತ್ರಸ್ತರಿಗೆ ಧನಸಹಾಯ ಮಾಡಲು ಹಮ್ಮಿಕೊಂಡ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಮಹಾನಗರಪಾಲಿಕೆಯ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಹೇಳಿದರು.
ಮಣಿಪಾಲ ಆರ್‌ಎಸ್‌ಬಿ ಭವನದಲ್ಲಿ ಕೊಡಗು ಪ್ರವಾಹ ಪರಿಹಾರ ನಿಧಿಗಾಗಿ ಜಿಲ್ಲಾಡಳಿತ ಸಹಯೋಗದೊಂದಿಗೆ ಮಣಿಪಾಲ ತ್ರಿವರ್ಣ ಕಲಾ ತರಗತಿಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಗೋವಿನ ಕಲಾಕೃತಿಗಳ ಪ್ರದರ್ಶನವನ್ನು ಅವರು ಶುಕ್ರವಾರ ಚಿತ್ರ ಬಿಡಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ರಚಿಸಿದ ಈ ಚಿತ್ರಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತಹ ಚಿತ್ರಕಲೆಯ ಮೂಲಕ ಪ್ರಾಕೃತಿಕ ವಿಕೋಪಕ್ಕೊಳಗಾದ ಕೊಡಗಿನ ಸಂತ್ರಸ್ತರಿಗೆ ಸಹಾಯ ಮಾಡುವ ಕಾರ್ಯವು ವಿದ್ಯಾರ್ಥಿಗಳ ಮತ್ತು ಮಾರ್ಗದರ್ಶಕರ ಸಾಮಾಜಿಕ ಬದ್ಧತೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳು ಇಂತಹ ಸಮಾಜಮುಖೀ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಸಮಾಜದ ಬೆಳವಣಿಗೆಯೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದವರು ಅಭಿಪ್ರಾಯಪಟ್ಟರು.
ಕಲಾವಿದ ಪಿ.ಎನ್. ಆಚಾರ್ಯ ಮಾತನಾಡಿ, ಪ್ರಸ್ತುತ ಹೆತ್ತವರು ಮಕ್ಕಳನ್ನು ಎಂಜಿಯರ್, ವೈದ್ಯರಾಗಬೇಕೆಂಬ ಕನಸು ಹೊತ್ತು ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ಯಾರೂ ಕೂಡ ತಮ್ಮ ಮಕ್ಕಳು ಕಲಾವಿದರಾಗಬೇಕೆಂದು ಕನಸು ಕಾಣುವುದಿಲ್ಲ. ಉನ್ನತ ಉದ್ಯೋಗ ಆಯ್ಕೆಯೊಂದಿಗೆ ಕಲೆಗೆ ಒತ್ತು ಕೊಟ್ಟಾಗ ಕಲೆ, ಕಲಾವಿದ ಬೆಳೆಯಲು ಸಾಧ್ಯ ಎಂದರು.
ಮಣಿಪಾಲ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಶ್ರುತಿ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಮಾಧವಕೃಪಾ ಶಾಲಾ ಪ್ರಾಂಶುಪಾಲೆ ಜೆಸ್ಸೀ ಆಂಡ್ರಿವ್ಸ್, ಚಿತ್ರಕಲಾ ಮಂದಿರದ ನಿರ್ದೇಶಕ ಯು.ಸಿ. ನಿರಂಜನ್ ಉಪಸ್ಥಿತರಿದ್ದರು.
ಸೆ. 21ರಿಂದ 23ರ ತನಕ ಬೆಳಗ್ಗೆ 10ರಿಂದ ಸಂಜೆ 6.30ರ ತನಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಂದ ರಚಿತವಾದ ಕಲಾಕೃತಿಯು ಅತಿ ಕಡಿಮೆ ಬೆಲೆಗೆ ಮಾರಾಟವಾಗುವ ಮೂಲಕ ನೆರೆ ಸಂತ್ರಸ್ತರ ಪರಿಹಾರ ನಿಧಿಗಾಗಿ ಸಹಾಯ ಮಾಡ ಲಾಗುವುದೆಂದು ತ್ರಿವರ್ಣ ಕಲಾ ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಪ್ರಸ್ತಾವನೆಯಲ್ಲಿ ತಿಳಿಸಿದರು. ವಿದ್ಯಾರ್ಥಿಗಳಾದ ಮಿಥಾಲಿ ಜಿ. ಸ್ವಾಗತಿಸಿ, ಹರಿತಾ ಅಲಪಟಿ ವಂದಿಸಿದರು. ಸುಷ್ಮಾ ನಿರೂಪಿಸಿದರು.