ಬಾಗಲಕೋಟೆ: ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಹಾರಾಷ್ಟ್ರದಿಂದ ಮರಳಿದ ವಲಸೆ ಕಾರ್ಮಿಕರು ಸಹಿತ ಹಲವು ವ್ಯಕ್ತಿಗಳಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೂ ಬಂದಿರುವ ವ್ಯಕ್ತಿಗಳ ಸಾಮೂಹಿಕ ತಪಾಸಣೆಗೆ ಜಿಲ್ಲಾಡಳಿತ ಮುಂದಾಗಿದೆ.
ಕೋವಿಡ್ ಪಾಸಿಟಿವ್ ಬಂದ್ ವ್ಯಕ್ತಿಗಳಲ್ಲಿ ಸೋಂಕಿನ ಯಾವುದೇ ಲಕ್ಷಣಗಳೂ ಕಾಣದ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಮಾಡುವುದು ತೀವ್ರ ಭೀತಿ ಉಂಟು ಮಾಡಿದೆ. ಹೀಗಾಗಿ ಮಹಾರಾಷ್ಟ್ರದಿಂದ ಆಗಮಿಸಿ, ಸದ್ಯ ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಬಹುತೇಕ ಜನರ ಗಂಟಲು ದ್ರವ ತಪಾಸಣೆಗೆ ಕಳುಹಿಸಲಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಿಂದ ಒಟ್ಟು 1533 ಸ್ಯಾಂಪಲ್ ತಪಾಸಣೆಗೆ ಕಳುಹಿಸಿದ್ದು, ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ. ಎರಡು ದಿನಗಳಿಂದ ಜಿಲ್ಲೆಯಿಂದ ಕಳುಹಿಸಲಾಗಿದ್ದ 978 ಸ್ಯಾಂಪಲ್‌ಗಳ ವರದಿ ಬರಬೇಕಾಗಿದ್ದು, ಮಂಗಳವಾರ ಮತ್ತೆ ಹೊಸದಾಗಿ 555 ಸ್ಯಾಂಪಲ್ ರವಾನಿಸಲಾಗಿದೆ.
ಬಾಕಿ 978 ಹಾಗೂ ಹೊಸ ಸ್ಯಾಂಪಲ್ 555 ಸೇರಿ ಒಟ್ಟು 1533 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಸಧ್ಯ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ 2343 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ರಾಜೇಂದ್ರ ತಿಳಿಸಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 7,197 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 5,557 ನೆಗೆಟಿವ್ ಬಂದಿದ್ದು, 77 ಜನರಿಗೆ ಪಾಸಿಟಿವ್ ಬಂದಿದೆ. ಓರ್ವ ವ್ಯಕ್ತಿ ಕೋವಿಡ್ ದಿಂದ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕು ತಗುಲಿದ್ದ 62 ಜನ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಇನ್ನು 14 ಜನರಿಗೆ ಕೋವಿಡ್-19 ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಇನ್ನು 6 ಕಂಟೈನ್‌ಮೆಂಟ್ ಝೋನ್‌ಗಳಿವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ. 14 ದಿನಗಳ ಕಾಲ ಇನ್‌ಸ್ಟಿಟ್ಯೂಶನ್ ಕ್ವಾರಂಟೈನ್‌ನಲ್ಲಿದ್ದ 399 ಜನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 9 ಚೆಕ್‌ಪೋಸ್ಟ್‌ಗಳ ಪೈಕಿ 4 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿವರೆಗೆ ಚೆಕ್‌ಪೋಸ್ಟ್‌ಗಳ ಮೂಲಕ 54066 ವಾಹನಗಳ ತಪಾಸಣೆ ಹಾಗೂ 2,08,886 ಜನರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.