Advertisement

ಸಿಂಪಲ್ಲಾಗಿ ಸೋಲಾರ್‌ ಸ್ಟೋರಿ

12:23 PM Jun 11, 2019 | Sriram |

ಸೋಲಾರ್‌ ಸಂಪರ್ಕ್‌ ಹೊಂದುವುದರಿಂದ ಸಾಕಷ್ಟು ಪ್ರಯೋಜನೆಗಳಿವೆ ನಿಜ. ಆದರೆ, ಸೋಲಾರ್‌ ಉತ್ಪನ್ನಗಳು ಬಲು ದುಬಾರಿ. ಅವುಗಳ ಬೆಲೆ ಕೇಳಿದರೇ ಬೆಚ್ಚಿ ಬೀಳುವುಂತಾಗುತ್ತದೆ ಎಂಬುದು ಹಲವರು ಮಾತು. ಇಂಥ ಸಂದರ್ಭದಲ್ಲಿ ಕೈಗೆಟುಕುವ ದರದಲ್ಲಿ ಸೋಲಾರ್‌ ಉತ್ಪನ್ನಗಳನ್ನು ಒದಗಿಸಲು ಸಿಂಪಾ ಕಂಪನಿ ಮುಂದಾಗಿದೆ…


Advertisement

ಸೋಲಾರ್‌ ಉತ್ಪನ್ನಗಳು ಅಂದರೆ, ಸ್ವಲ್ಪ ಜೇಬು ಸುಡುತ್ತವೆ. ಒಂದು ಸಲ ಹೂಡಿಕೆ ಮಾಡಿದರೆ ಪದೇ ಪದೇ ರಿಪೇರಿಯಾಗಲೀ, ವಿದ್ಯುತ್‌ ಬಿಲ್‌ ಕಟ್ಟುವಂಥ ಕಿರಿಕಿರಿಗಳಾಗಲಿ ಇರೋದಿಲ್ಲ ಅನ್ನೋದೇ ಇದರ ಪ್ಲಸ್‌ ಪಾಯಿಂಟ್‌. ಆದರೆ, ಒಂದೇ ಬಾರಿ ಅಷ್ಟೊಂದು ಮೊತ್ತ ಹೂಡಿಕೆ ಮಾಡುವುದು ಹೇಗೆ? ಇದು ಕೆಳವರ್ಗ, ಮಧ್ಯಮ ವರ್ಗದವರ ಪ್ರಶ್ನೆ.

ಈ ಕಾರಣಕ್ಕೋ ಏನೋ, ಸೋಲಾರ್‌ ಶ್ರೀಮಂತರ ಸೌಲಭ್ಯ ಅನ್ನುವಂತಾಗಿದ್ದು. ಹಾಗಾದರೆ, ಇದನ್ನು ಬಡವರ, ಮಧ್ಯಮ ಕೆಳ ವರ್ಗಕ್ಕೆ ತಲುಪಿಸುವುದಾದರೂ ಹೇಗೆ? ಈ ಬಗ್ಗೆ ಯಾವ ಕಂಪೆನಿಗಳೂ ತಲೆ ಕೆಡಿಸಿಕೊಂಡಂತಿಲ್ಲ. ಗ್ರಾಹಕರು, ಕಂಪೆನಿಗಳ ನಡುವೆ ಕೊಂಡಿ ಅಂದರೆ ಮಾರಾಟಗಾರರು. ಹೀಗಾಗಿ, ಗ್ರಾಹಕರ ನಿರೀಕ್ಷೆಗಳು ಏನು, ನಾನು ನಿಗದಿ ಮಾಡುವ ಮೊತ್ತ ಅವರು ಭರಿಸಬಹುದೇ? ಆಗದೇ ಇದ್ದರೆ ಅವರ ಹೇಳುವ ನಿರೀಕ್ಷಿತ ಮೊತ್ತ ಎಷ್ಟಿರಬಹುದು? ಇವ್ಯಾವೂ ಕಂಪನಿಯ ಕಿವಿಗೆ ಬೀಳುವುದಿಲ್ಲ. ಎಲ್ಲವನ್ನೂ ಬೀಳುವಂತೆ ಮಾಡಿರುವುದು ಸಿಂಪಾ ಕಂಪನಿ ಹಾಗೂ ಅದರ ಸಿ.ಇ.ಒ ಮಾಥುರ್‌.

ಹೀಗಾಗಿ, ಸಿಂಪಾ ಕಂಪನಿಯ ಸೋಲಾರ್‌ ಉತ್ಪನ್ನಗಳನ್ನು ಕೊಳ್ಳಲು ಯಾವುದೇ ಮಧ್ಯವರ್ತಿಗಳು ಬೇಕಿಲ್ಲ. ಅವರಿಗೆ ಹೋಗುತ್ತಿದ್ದ ಪರ್ಸೆಂಟೇಜ್‌ ಗ್ರಾಹಕರಿಗೆ ತಲುಪುತ್ತಿದೆ. ಹೀಗಾಗಿ, ಬೆಂಗಳೂರು ಮೂಲದ ಸಿಂಪ ಕಂಪನಿಯ ಪ್ರಾಡಕ್ಟ್ಗಳ ಬೆಲೆ ಗ್ರಾಹಕ ಸ್ನೇಹಿಯಾಗಿದೆಯಂತೆ. ಇದೆಲ್ಲ ಹೇಗೆ ಸಾಧ್ಯ ಆಯ್ತು ಅಂತ ಹುಡುಕಲು ಹೊರಟರೆ ಇದರ ಹಿಂದೆ ದೊಡ್ಡ ಸರ್ಕಸ್ಸೇ ನಡೆದಿರುವುದು ಬೆಳಕಿಗೆ ಬರುತ್ತದೆ.

ಸಿಂಪಾ ಕಂಪನಿಯ ಸಿ.ಇ.ಓ ಪಿಯ್ಯೂಶ್‌ ಮಾಥುರ್‌. ಇವರು ವಿದೇಶದಿಂದ ಭಾರತಕ್ಕೆ ಬಂದಾಗ ಶುರುವಾದದ್ದು ಒಂದೇ ತುಡಿತ. ಸಮಾಜ ಸೇವೆ ಮಾಡುವ ಅಂತ. ವೆಚ್ಚಕ್ಕೆ ಹೊನ್ನಿದೆ. ಹೀಗಾಗಿ, ದುಡಿದೇ ಬದುಕಬೇಕು ಅಂತೇನಿಲ್ಲ. ಆದರೂ ಏನಾದರೂ ಮಾಡಬೇಕಲ್ಲ ? ಹೀಗಾಗಿ ಇವರು ಸೇರಿದ್ದು 2011ರಲ್ಲಿ ಶುರುವಾದ ಸಿಂಪಾ ಕಂಪನಿ ಸಿ.ಇ.ಓ ಆಗಿ. ಆಗ ಇವರಿಗೆ ಕಂಡದ್ದು ಸೋಲಾರ್‌ ಉತ್ಪನ್ನಗಳ ಮಾರಾಟ, ಸುಡುವ ಅದರ ಬೆಲೆ ಹಾಗೂ ಗ್ರಾಹಕರಿಗೆ ಏಕೆ ದೂರವಾಗುತ್ತಿದೆ ಎನ್ನುವ ಅಂಶ. ಇದರ ಬೆನ್ನ ಹತ್ತಿದವರೇ ಕಾರಣಗಳನ್ನು ಹುಡುಕುತ್ತಾ ಹೋದಾಗ ಎದುರಾಗಿದ್ದು ಸೋಲಾರ್‌ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳು ಹಾಗೂ ಗ್ರಾಹಕರ ನಡುವಿನ ಅಂತರ. ಮಧ್ಯೆ ಇರುವ ಮಧ್ಯವರ್ತಿಗಳು ತಲುಪಿಸುವ ಮಾಹಿತಿಯ ಆಧಾರದ ಮೇಲೆ ಇದರ ಬೆಲೆ ಏರಿಕೆಯಾಗಿರುವುದು ಅನ್ನೋ ಅಂಶ. ಹೀಗಾಗಿ, ಮಾಥುರ್‌ ಮಾಡಿದ ಒಂದು ಕೆಲಸ ಏನೆಂದರೆ, ಸಣ್ಣಪುಟ್ಟ ಹಳ್ಳಿಗಳಲ್ಲೇ ನಂಬಿಗಸ್ಥ ಸ್ಥಳೀಯ ಹುಡುಗರನ್ನು ಹುಡುಕಿ, ನೇರವಾಗಿ ಕಂಪನಿಯ ಮಾರಾಟದ ಜವಾಬ್ದಾರಿಯನ್ನು ಅವರಿಗೆ ಕೊಟ್ಟಿದ್ದು. ( ಉರ್ಜಾ ಮಿತ್ರಾಸ್‌ ಅಂತಾರೆ) . ಹಾಗೆಯೇ, ಸೋಲಾರ್‌ ಉತ್ಪನ್ನಗಳನ್ನು ಹಳ್ಳಿಯ ಮನೆಗಳ ಬಾಗಿಲಿಗೂ ತಲುಪಿಸುವ ವ್ಯವಸ್ಥೆ ಮಾಡಿದ್ದು.

Advertisement

“ಈ ರೀತಿ ಮಾಡಿದ್ದಕ್ಕೆ ಗ್ರಾಹಕರ ನಿರೀಕ್ಷೆಗಳು, ಬೆಲೆ ಬಗ್ಗೆ ಅವರಿಗಿರುವ ಅಭಿಪ್ರಾಯಗಳನ್ನು ಸಂಗ್ರಹಿಸುವಲ್ಲಿ ನೆರವಾಯಿತು. ಇದರ ಆಧಾರದ ಮೇಲೆ ಉತ್ಪನ್ನಗಳನ್ನು ಬದಲಾಯಿಸುತ್ತಾ ಹೋದೆವು’ ಎನ್ನುತ್ತಾರೆ ಮಾಥುರ್‌.

ಮಾಥುರ್‌ ಮಾಡಿದ ಇನ್ನೊಂದು ದೊಡ್ಡ ಕೆಲಸ ಎಂದರೆ, ಸೋಲಾರ್‌ ಉತ್ಪನ್ನಗಳನ್ನು ಕೊಂಡವರು ಕಂತು ಕಂತುಗಳಲ್ಲಿ ಹಣ ಪಾವತಿಸುವ ಅವಕಾಶ ಮಾಡಿಕೊಟ್ಟದ್ದು. ಇದು ಹೇಗೆಂದರೆ, ಮನೆಯಲ್ಲಿ ವಿದ್ಯುತ್‌ ಸಂಪರ್ಕ ಇದ್ದರೆ ನೀವು ಹೇಗೆ ಹಣ ಪಾವತಿಸುತ್ತೀರಿ, ಹಾಗೆಯೇ, ಉತ್ಪನ್ನಗಳನ್ನು ಕೊಂಡಾಗ ಶೇ.10ರಷ್ಟು ಹಣ ಪಾವತಿಸಿ, ಉಳಿಕೆಯದ್ದು ಕಂತುಗಳಲ್ಲಿ ಹಣ ಕಟ್ಟುತ್ತಾ ಹೋಗಬಹುದು.

“ನಮ್ಮ ಕಂಪನಿಯ ಗ್ರಾಹಕರ ಸೇವಾ ತಂಡ ಸಮಸ್ಯೆ ಎದುರಾದರೆ ಪ್ರತಿ ಮನೆಗೆ ಹೋಗಿ ಪರಿಹಾರ ಸೂಚಿಸುತ್ತಾರೆ. ಇಂಥ ಸಂದರ್ಭದಲ್ಲಿ ಕಟ್ಟಬೇಕಿರುವ ಹಣವನ್ನು ಪಡೆದು ಬರುತ್ತಾರೆ ಅಥವಾ ಹಣ ಕಟ್ಟಬೇಕು ಅಂತ ಎಚ್ಚರಿಸುತ್ತಾರೆ. ಹೀಗಾಗಿ, ಹಣ ಹಿಂಪಾವತಿ ಸಮಸ್ಯೆ ಆಗಲಾರದು’ ಎನ್ನುತ್ತಾರೆ ಮಾಥುರ್‌.

ಸಿಂಪಾ ನೆಟ್‌ ವರ್ಕ್‌ ಏಕೆ ಬಲವಾಗಿದೆ ಅಂತ ನೋಡಿದರೆ, ಇದರಲ್ಲಿ ಓವರ್‌ಸೀಸ್‌ ಪ್ರವೇಟ್‌ ಇನ್ವೆಸ್ಟ್‌ಮೆಂಟ್‌ ಕಾರ್ಪೊರೇಷನ್‌, ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಮುಂತಾದವರು ಕಂಪನಿಯ ಜೊತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುವುದು ತಿಳಿದು ಬರುತ್ತದೆ. ಇದರ ಜೊತೆಗೆ, ಸ್ಥಳೀಯ ವಾಣಿಜ್ಯ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು, ನಂಬಿಗಸ್ಥ ಗ್ರಾಹಕರಿಗೆ ಸೋಲಾರ್‌ ಉತ್ಪನ್ನಗಳನ್ನು ಕೊಳ್ಳಲು ಕಡಿಮೆ ಬಡ್ಡಿಯಲ್ಲಿ ಸಾಲಕೊಡಿಸಲು ನೆರವಾಗುತ್ತಿದೆ. ಈ ಹಿಂದೆ, ಸಿಂಪಾ ಎಡಿಬಿ ಬ್ಯಾಂಕಿನಿಂದ ಸಾಲ ಮಾಡಿ, ಅದನ್ನು ಗ್ರಾಹಕರಿಗೆ ಸಾಲವಾಗಿ ನೀಡುತ್ತಿತ್ತು. ಈಗ ತಾನೇ ಸಾಲ ನೀಡುವ ಮಟ್ಟಕ್ಕೆ ಎದ್ದು ನಿಂತಿದೆ. ಹೀಗಾಗಿ, ಸಿಂಪಾ ಕಂಪೆನಿಯ ಉತ್ಪನ್ನಗಳನ್ನು ಕೊಳ್ಳುವಾಗ ಗ್ರಾಹಕರಿಗೆ ಬೆಲೆಯ ತೊಡಕೇನೂ ಆಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next