Advertisement

ಎರಡೇ ಮಳೆಗೆ ಸಂಪಾಜೆ ರಾ. ಹೆದ್ದಾರಿ ಕುಸಿತ!

10:30 AM Jul 08, 2019 | Team Udayavani |

ಸುಳ್ಯ: ಕಳೆದ ಬಾರಿ ಪ್ರಾಕೃತಿಕ ಅವಘಡದಿಂದ ಸಂಪರ್ಕ ಕಳೆದುಕೊಂಡಿದ್ದ ಸಂಪಾಜೆ- ಮಡಿಕೇರಿ ಹೆದ್ದಾರಿ ಈ ವರ್ಷ ಮಳೆಗಾಲದ ಆರಂಭದಲ್ಲೇ ಕುಸಿದಿದೆ. ಮಡಿಕೇರಿ-ಮಂಗಳೂರು ರಸ್ತೆಯ ಕಾಟಕೇರಿ ಬಳಿ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆಯಾಗಿ ಘನ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ.

Advertisement

ಕುಶಾಲ ನಗರ-ಸಕಲೇಶಪುರ ಮೂಲಕ ಪರ್ಯಾಯ ಮಾರ್ಗ ದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಿರುಕು ಕಾಣಿಸಿಕೊಂಡ ಭಾಗದಲ್ಲಿ ಬ್ಯಾರಿಕೇಡ್‌ ಇಡಲಾಗಿದ್ದು, ರಾ. ಹೆ. ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಗುಣಮಟ್ಟದ ಬಗ್ಗೆ ಮೂಡಿದ ಅನುಮಾನ
ಕಳೆದ ಆಗಸ್ಟ್‌ನಲ್ಲಿ ರಸ್ತೆ ಕುಸಿದ ಕಡೆ ಮರಳಿನ ಚೀಲ, ಜಿಯೊ ಸಿಂಥೆಟಿಕ್‌ ತಡೆಗೋಡೆ ನಿರ್ಮಿಸಿ ತಾತ್ಕಾಲಿಕ ವ್ಯವಸ್ಥೆಯಡಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಜಿಯೋಫ್ಯಾಬ್ರಿಕ್‌ ಪದರ ಹಾಸಿ ಅದರ ಮೇಲೆ ಒಂದೂವರೆ ಅಡಿಯಷ್ಟು ದಪ್ಪಗೆ ಗ್ರಾನ್ಯುಲರ್‌ ಸಬ್‌ಬೇಸ್‌ (ಜಿಎಸ್‌ಬಿ) ಪದರ, ಮಣ್ಣು ಹಾಕಿ ಎಂಬ್ಯಾಂಕ್‌ವೆುಂಟ್‌ ನಿರ್ಮಿಸಿ ಇಕ್ಕೆಲಗಳು ಕುಸಿಯದಂತೆ ರಿಟೇನಿಂಗ್‌ ವಾಲ್‌, ಗೇಬಿಯನ್‌ ವಾಲ್‌ ಮೂಲಕ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸಲಾಗಿತ್ತು. ಸಾಯಿಲ್‌ ನೈಲಿಂಗ್‌ ಮತ್ತು ಶಾಟ್‌ಕ್ರೆಟಿಂಗ್‌ ಎನ್ನುವ ಆಧುನಿಕ ತಂತ್ರಜ್ಞಾನ ಬಳಸಿ ದುರಸ್ತಿ ನಡೆದಿತ್ತು.

ಈ ತಂತ್ರಜ್ಞಾನದಡಿ ಮರಳಿನ ಚೀಲಗಳ ಮೇಲೆ ಕಬ್ಬಿಣದ ಸರಳು ಹರಡಿ ಇದರ ಮೇಲೆ ಯಂತ್ರಗಳ ಮೂಲಕ ಕಾಂಕ್ರೀಟ್‌ ಹಾಕಲಾಗುತ್ತದೆ. ಇದರಿಂದ ಮಳೆ ನೀರು ಭೂಮಿ ಒಳಗೆ ಇಳಿಯುವುದಿಲ್ಲ ಎನ್ನುವುದು ಇಲಾಖೆಯ ವಾದ. ಆದರೆ ಕಾಮಗಾರಿ ನಡೆದ ಸ್ಥಳದಲ್ಲಿ ಎರಡೇ ದಿನಗಳ ಮಳೆಗೆ ರಸ್ತೆ ಬಿರುಕು ಬಿಟ್ಟಿದ್ದು, ಕಾಮಗಾರಿ ಸಾಮರ್ಥ್ಯವನ್ನು ಪ್ರಶ್ನೆ ಮಾಡಿದೆ.

ಕೊಯನಾಡಿನಲ್ಲಿ ಕುಸಿತದ ಭೀತಿ
ರಾಜ್ಯ ಹೆದ್ದಾರಿಯಾಗಿದ್ದ ಮಾಣಿ-ಮೈಸೂರು ರಸ್ತೆ 2013ರಲ್ಲಿ ವಿಸ್ತರಣೆಗೊಂಡು ಮರು ಡಾಮರು ಕಂಡಿತ್ತು. 2013ರ ಆಗಸ್ಟ್‌ನಲ್ಲಿ ಕೊಯನಾಡು ಬಳಿ 200 ಮೀ. ಉದ್ದಕ್ಕೆ, 5 ಅಡಿ ಆಳಕ್ಕೆ ಕುಸಿದಿತ್ತು. ಆಗ ಕೆಲವು ತಿಂಗಳು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಅಲ್ಲಿ 1 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಕಾಂಕ್ರೀಟ್‌ ತಡೆಗೋಡೆ ಸಹಿತ ಹೊಸ ರಸ್ತೆ ನಿರ್ಮಿಸಲಾಗಿತ್ತು. ಕಳೆದ ವರ್ಷ ಇದೇ ಜಾಗದಲ್ಲಿ ಮತ್ತೆ ಬಿರುಕು ಉಂಟಾಗಿ 8 ಇಂಚಿನಷ್ಟು ರಸ್ತೆ ಕುಸಿದಿದೆ. ಸುರಕ್ಷತೆಯ ದೃಷ್ಟಿಯಿಂದ ಘನ ವಾಹನ ಸಂಚಾರಕ್ಕೆ ಪಕ್ಕದ ಹಳೆ ರಸ್ತೆ ಬಳಸಲಾಗಿತ್ತು. ಈ ಬಾರಿಯೂ ಆತಂಕ ತಪ್ಪಿಲ್ಲ.

Advertisement

ಹಲವೆಡೆ ಗುಡ್ಡ ಅಪಾಯ
ಜೋಡುಪಾಲ ಅನಂತರದ ಮೊಣ್ಣಂಗೇರಿ, 2ನೇ ಮೊಣ್ಣಂಗೇರಿ, ಮದೆನಾಡು ಮೊದಲಾದೆಡೆ ಆಳೆತ್ತರದ ಗುಡ್ಡಗಳು ಜಾರಿ ನಿಂತಿವೆ. ಇವು ಪೂರ್ಣ ಕುಸಿಯಲು ಸಣ್ಣ ಮಳೆ ಸಾಕು. ರಾ. ಹೆ. ಇಲಾಖೆ ರಸ್ತೆ ದುರಸ್ತಿಗೆ ತೋರಿರುವ ಕಾಳಜಿಯನ್ನು ಗುಡ್ಡ ತೆರವು ಅಥವಾ ಸಮತಟ್ಟು ಮಾಡಲು ತೋರಿಲ್ಲ. ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಸಮಸ್ಯೆ ಆಗದು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲಧಿಕಾರಿಗಳು, ತಜ್ಞರ ನೇತೃತ್ವದಲ್ಲಿ ರಸ್ತೆ ಬಿರುಕು ಬಿಟ್ಟ ಸ್ಥಳ ಪರಿಶೀಲಿಸಿದ್ದೇವೆ. ಅಲ್ಲಿ ರಸ್ತೆ ಕುಸಿಯುವ ಅಪಾಯ ಇಲ್ಲ. ಹಾಗಾಗಿ ವಾಹನಗಳು ಓಡಾಟಕ್ಕೆ ಅಡ್ಡಿ ಇಲ್ಲ. ಘನ ವಾಹನ ಓಡಾಟ ಒಂದು ತಿಂಗಳ ಹಿಂದೆಯೇ ನಿಷೇಧಿಸಲಾಗಿದೆ. ಉಳಿದ ವಾಹನ ಓಡಾಟ ಎಂದಿನಂತಿದೆ. ಸಂಪಾಜೆ-ಮಡಿಕೇರಿ ನಡುವೆ ರಸ್ತೆ ಪರಿಶೀಲಿಸಿದ್ದು, ಯಾವುದೇ ಸಮಸ್ಯೆ ಇಲ್ಲ.
ಚಂದ್ರಪ್ಪ , ಸಹಾಯಕ ಎಂಜಿನಿಯರ್‌

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next