ಹೊಸದಿಲ್ಲಿ: ಭಾರತದ ಸೈನಿಕರಿಗೆ ದೇಶದೊಳಗೇ ಬಹುದೊಡ್ಡ ಶತ್ರು ಒಬ್ಬ ಹುಟ್ಟಿಕೊಂಡಿದ್ದಾನೆ. ಆತನ ಹೆಸರು ಸಮೋಸಾ! ಹೌದು. ದೇಶದ ಅರೆಸೇನಾ ಪಡೆ ಹಾಗೂ ಕೇಂದ್ರ ಸಶಸ್ತ್ರಪಡೆ ಯೋಧರು ಕಾರ್ಯಾಚರಣೆ ವೇಳೆ ಮೃತಪಡುವುದಕ್ಕಿಂತಲೂ ಹೆಚ್ಚಾಗಿ, ಹೆಚ್ಚು ಕೊಲೆಸ್ಟ್ರಾಲ್ ಇರುವ ಆಹಾರ ಸೇವನೆಯಿಂದಾಗೇ ಬಹು ಸಂಖ್ಯೆಯ ಯೋಧರು ಪ್ರಾಣ ತ್ಯಾಗ ಮಾಡುತ್ತಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ!
ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿದಂತೆ ದೇಶದ ಏಳು ಅರೆಸೇನಾ ಪಡೆಗಳು 3 ವರ್ಷಗಳಲ್ಲಿ ವಿವಿಧ ಕಾರ್ಯಾಚರಣೆಗಳ ವೇಳೆ 1067 ಯೋಧರನ್ನು ಕಳೆದುಕೊಂಡಿವೆ. ಆದರೆ ಇದೇ ವೇಳೆ ಅನಾರೋಗ್ಯದ ಕಾರಣದಿಂದಾಗಿ ಒಟ್ಟು 3,611 ಯೋಧರು ಅಸುನೀಗಿದ್ದಾರೆ!
ಅರೆಸೇನಾ ಪಡೆಗಳ ವೈದ್ಯಕೀಯ ನಿರ್ದೇಶಕರಿಂದ ಪಡೆದ ಮಾಹಿತಿಯಿಂದ ಈ ಆಘಾತಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ ಎಂದು ಬಿಎಸ್‌ಎಫ್ನ ಮಾಜಿ ಮುಖ್ಯಸ್ಥ ಡಿ.ಕೆ.ಪಾಠಕ್ ತಿಳಿಸಿದ್ದಾರೆ. “ಅರೆಸೇನಾ ಪಡೆಗಳ ಬಹುಪಾಲು ಯೋಧರು ಹೃದಯದ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಪ್ರತಿ 2 ತಿಂಗಳಿಗೆ ಸರಾಸರಿ 3 ಯೋಧರು ಹೃದಯಾಘಾತ ದಿಂದ ಮೃತಪಡುತ್ತಿದ್ದು, ಆತ್ಮಹತ್ಯೆ ನಂತರದ ಸ್ಥಾನದಲ್ಲಿದೆ’ ಎಂದಿದ್ದಾರೆ.
“ಹೆಚ್ಚು ಕೊಲೆಸ್ಟ್ರಾಲ್, ಸಮೃದ್ಧ ಆಹಾರ ಸೇವಿಸುವ ಯೋಧರ ಸೋಮಾರಿತನದ ಜೀವನ ಶೈಲಿಯಿಂದಾಗಿ ಅಧಿಕ ರಕ್ತದೊತ್ತಡ, ಹೃದಯಾಘಾತ, ಮಧುಮೇಹದಂತಹ ಅನಾರೋಗ್ಯ ತೊಂದರೆಗಳು ಕಾಣಿಸಿ ಕೊಳ್ಳುತ್ತಿವೆ’ ಎಂದು ಅಧ್ಯಯನ ತಿಳಿಸಿದೆ.