ಇಸ್ಲಾಮಾಬಾದ್: ಇಲ್ಲ ನಾವು ಭಾರತ ಗಡಿ ಪ್ರವೇಶಿಸಲ್ಲ. ಬೇಕಾದರೆ ನೀವು ಬೇರೆ ಎಂಜಿನ್ ತಂದು ಜನರು ಕೂತಿರುವ ಬೋಗಿ ತೆಗೆದುಕೊಂಡು ಹೋಗಿ! ಹೀಗೆಂದು ಭಾರತ-ಪಾಕಿಸ್ಥಾನ ಮಧ್ಯೆ ಸಂಚರಿಸುವ ಸಂಝೋತಾ ಎಕ್ಸ್‌ಪ್ರೆಸ್ ರೈಲಿನ ಪಾಕ್ ಸಿಬಂದಿ ಅಟ್ಟಾರಿ ಗಡಿಯಲ್ಲಿ ನಿಂತು ಹೇಳಿದ್ದು, ರೈಲು ಯಾನ ಅರ್ಧಕ್ಕೆ ನಿಂತಿದೆ.
ಸಿಬಂದಿ ಹೀಗೆ ಹೇಳಲು ಕಾರಣ ಅತ್ತ ಇಸ್ಲಾಮಾಬಾದ್‌ನಲ್ಲಿ ರೈಲು ರದ್ದುಪಡಿಸುವುದಾಗಿ ಪಾಕ್ ರೈಲ್ವೇ ಸಚಿವ ಘೋಷಣೆ ಮಾಡಿದ್ದು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಮಾಡಿದ ಭಾರತದ ಕ್ರಮದಿಂದ ದಿಕ್ಕೆಟ್ಟಂತೆ ಆಡುತ್ತಿರುವ ಪಾಕಿಸ್ಥಾನ ಹಲವು ರಾಜತಾಂತ್ರಿಕ ಸೇಡಿನ ಕ್ರಮಗಳನ್ನು ಕೈಗೊಂಡಿದೆ. ಅದರ ಮುಂದುವರಿದ ಭಾಗವಾಗಿ ಸಂಝೋತಾ ಎಕ್ಸ್‌ಪ್ರೆಸ್ ರೈಲನ್ನೂ ಅದು ರದ್ದು ಮಾಡಿದೆ.
ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಾಕ್‌ನ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್, ಸಂಝೋತಾ ರೈಲು ರದ್ದುಗೊಳಿಸುವ ನಿರ್ಧಾರ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ನಾನು ರೈಲ್ವೇ ಸಚಿವನಾಗಿ ಇರುವಲ್ಲಿವರೆಗೆ ರೈಲು ಓಡುವುದಿಲ್ಲ. ಮುಂದಿನ ಮೂರ್‍ನಾಲ್ಕು ತಿಂಗಳು ತುಂಬ ಮಹತ್ವದ್ದು. ಯುದ್ಧ ಕೂಡ ನಡೆಯುಬಹುದು. ಆದರೆ ನಮಗೆ ಯುದ್ಧ ಬೇಡ. ಆದರೆ ನಮ್ಮ ಮೇಲೆ ಯುದ್ಧ ಘೋಷಣೆ ಮಾಡಿದ್ದೇ ಆದಲ್ಲಿ ಅದೇ ಕೊನೆಯದಾಗಿರುತ್ತದೆ ಎಂದು ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಹೀಗೆ ಸಚಿವರು ಹೇಳುತ್ತಿರುವ ವೇಳೆ ರೈಲಿಗಾಗಿ ಹಲವಾರು ಜನ ಲಾಹೋರ್ ಸ್ಟೇಷನ್‌ನಲ್ಲಿ ಕಾದು ನಿಂತಿದ್ದರು. ಬಳಿಕ ರೈಲು ಬಂದಿದ್ದು, ಅಟ್ಟಾರಿ ಗಡಿವರೆಗೆ ಮಾತ್ರ ಹೋಗಿದೆ.1976ರಲ್ಲಿ ಸಂಝೋತಾ ಎಕ್ಸ್‌ಪ್ರೆಸ್ ರೈಲು ಆರಂಭಿಸುವ ಬಗ್ಗೆ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿದ್ದು ರೈಲು ಪ್ರಯಾಣ ಶುರುವಾಗಿತ್ತು. ಎರಡೂ ದೇಶಗಳ ಮಧ್ಯೆ ಸಂಬಂಧ ಹದಗೆಟ್ಟಾಗ ಈ ರೈಲು ಯಾನ ಸ್ಥಗಿತಗೊಳಿಸಿದ ಉದಾಹರಣೆಗಳಿವೆ. ಇದೀಗ ಮತ್ತೆ ರೈಲು ಯಾನ ಸ್ಥಗಿತಗೊಳಿಸಲು ಪಾಕ್ ತೀರ್ಮಾನಿಸಿದ್ದರಿಂದ ಸಿಖ್ ಯಾತ್ರಾರ್ಥಿಗಳಿಗೆ, ಗಡಿಯಲ್ಲಿರುವ ಮುಸ್ಲಿಂ ಸಮುದಾಯದವರಿಗೆ ಸಂಬಂಧಿಗಳ ಭೇಟಿಗೆ ಸಮಸ್ಯೆಯಾಗಲಿದೆ.
ರೈಲು ಸೇವೆ ರದ್ದುಗೊಳಿಸಿಲ್ಲ;ಭಾರತೀಯ ರೈಲ್ವೆ ಇಲಾಖೆ
ಸಂಝೋತಾ ಎಕ್ಸ್‌ಪ್ರೆಸ್ ಅಟ್ಟಾರಿ ಗಡಿಯಲ್ಲಿ ಅರ್ಧಕ್ಕೆ ನಿಂತಿದೆ ಎಂಬ ವರದಿಯನ್ನು ಭಾರತೀಯ ರೈಲ್ವೆ ಇಲಾಖೆ ಗುರುವಾರ ಅಲ್ಲಗಳೆದಿದ್ದು, ಸಂಝೋತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಪಾಕಿಸ್ತಾನ ರದ್ದುಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಂಝೋತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಪಾಕಿಸ್ತಾನ ರದ್ದುಗೊಳಿಸಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಪಾಕಿಸ್ತಾನ ಸಂಝೋತಾ ರೈಲು ಸೇವೆಯನ್ನು ರದ್ದುಗೊಳಿಸಿಲ್ಲ, ಆದರೆ ಭದ್ರತೆಯ ದೃಷ್ಟಿಯಲ್ಲಿ ಕಳುಹಿಸಬೇಕಾಗಿದ್ದ ಸಿಬ್ಬಂದಿಯನ್ನು ಕಳುಹಿಸಲು ಪಾಕಿಸ್ತಾನ ನಿರಾಕರಿಸಿತ್ತು ಎಂದು ತಿಳಿಸಿದೆ.