Advertisement

ದ್ರಾವಿಡ್‌, ಜೋಶಿ ಪುತ್ರರ ಶತಕ ಸಂಭ್ರಮ

10:43 AM Jan 11, 2018 | |

ಬೆಂಗಳೂರು: ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ತನ್ನ ತಂದೆಯವರ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌ (ಕೆಎಸ್‌ಸಿಎ)ನ  ಬಿಟಿಆರ್‌ ಕಪ್‌ಗಾಗಿ ನಡೆಯುತ್ತಿರುವ ಅಂಡರ್‌ 14 ಕ್ರಿಕೆಟ್‌ ಕೂಟದಲ್ಲಿ ಮಲ್ಯ ಅದಿತಿ ಇಂಟರ್‌ನ್ಯಾಶನಲ್‌ ಸ್ಕೂಲ್‌ ಪರ ಆಡಿದ ಸಮಿತ್‌ ಆಕರ್ಷಕ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.ಮಾತ್ರವಲ್ಲದೇ ತನ್ನ ತಂದೆಯವರ ಹುಟ್ಟುಹಬ್ಬಕ್ಕೆ ಸೂಕ್ತವಾದ ಉಡುಗೊರೆ ನೀಡಿದ್ದಾರೆ. 

Advertisement

ಭರ್ಜರಿ ಆಟವಾಡಿದ ಸಮಿತ್‌ 150 ರನ್‌ ಸಿಡಿಸಿದ್ದರು. ಆದರೆ ಇದು ಪಂದ್ಯದ ಗರಿಷ್ಠ ಮೊತ್ತವಲ್ಲ. ಗರಿಷ್ಠ ಮೊತ್ತದ ಗೌರವವನ್ನು ಮಾಜಿ ಕ್ರಿಕೆಟಿಗ ಸುನೀಲ್‌ ಜೋಶಿ ಅವರ ಪುತ್ರ ಆರ್ಯನ್‌ ಪಡೆದಿದ್ದಾರೆ. ಆರ್ಯನ್‌ 154 ರನ್‌ ಹೊಡೆದಿದ್ದರು. ಅವರಿಬ್ಬರು ಅಮೋಘ ಆಟದಿಂದಾಗಿ ಮಲ್ಯ ಸ್ಕೂಲ್‌ ತಂಡವು 50 ಓವರ್‌ಗಳಲ್ಲಿ 5 ವಿಕೆಟಿಎ 500 ರನ್ನುಗಳ ಬೃಹತ್‌ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಮಲ್ಯ ತಂಡದ ನಿಖರ ದಾಳಿಯಿಂದಾಗಿ ಎದುರಾಳಿ ವಿವೇಕಾನಂದ ಸ್ಕೂಲ್‌ ತಂಡವು ಕೇವಲ 88 ರನ್ನಿಗೆ ಆಲೌಟಾದ ಕಾರಣ ಮಲ್ಯ ತಂಡ 412 ರನ್ನುಗಳ ಬೃಹತ್‌ ಗೆಲುವು ಕಾಣುವಂತಾಯಿತು. 

ಸಮಿತ್‌ ಈ ಹಿಂದೆಯೂ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಎರಡು ವರ್ಷಗಳ ಹಿಂದೆ ಅಂಡರ್‌ 14 ಕೂಟಗಳಲ್ಲಿ ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ ಅನ್ನು ಪ್ರತಿನಿಧಿಸಿದ್ದ ಸಮಿತ್‌ ಸ್ಥಿರ ನಿರ್ವಹಣೆ ನೀಡುತ್ತ ಬಂದಿದ್ದರು. ಟೈಗರ್‌ ಕಪ್‌ ಕ್ರಿಕೆಟ್‌ ಕೂಟದಲ್ಲಿ ಜೂನಿಯರ್‌ ದ್ರಾವಿಡ್‌ ಫ್ರಾಕ್‌ ಅಂತೋನಿ ಪಬ್ಲಿಕ್‌ ಸ್ಕೂಲ್‌ ವಿರುದ್ಧ 12 ಬೌಂಡರಿ ಸಹಿತ 125 ರನ್‌ ಹೊಡೆದಿದ್ದರು. 

2015ರಲ್ಲಿ ಅಂಡರ್‌ 12 ಗೋಪಾಲನ್‌ ಕ್ರಿಕೆಟ್‌ ಚಾಲೆಂಜ್‌ ಸರಣಿಯಲ್ಲಿ ಸಮಿತ್‌ ಶ್ರೇಷ್ಠ ಬ್ಯಾಟ್ಸ್‌ಮನ್‌ ಪ್ರಶಸ್ತಿಗೆ ಪಾತ್ರರಾಗಿದ್ದರು. ಆ ವೇಳೆ ಅವರು ಫೈನಲ್‌ನಲ್ಲಿ 77 ಸಹಿತ ಮತ್ತೆರಡು ಪಂದ್ಯಗಳಲ್ಲಿ 77* ಮತ್ತು 93 ರನ್‌ ಸಿಡಿಸಿ ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದರು. 
ಆಕರ್ಷಕ ಶತಕ ಸಿಡಿಸುವ ಮೂಲಕ ಸಮಿತ್‌ ತನ್ನ ತಂದೆಯವರ ಹುಟ್ಟುಹಬ್ಬಕ್ಕೆ ಸ್ಮರಣೀಯ ಉಡುಗೊರೆ ನೀಡಿದರು. ದ್ರಾವಿಡ್‌ ಮಂಗಳವಾರ 44ನೇ ವರ್ಷಕ್ಕೆ ಕಾಲಿಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next