Advertisement
ನಗರಸಭಾ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸಮೀನಾ ಪರ್ವಿನ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿಯವರು ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಚುನಾವಣೆಯಲ್ಲಿ ಕಳೆದ ಬಾರಿಯಂತೆ ಅಭ್ಯರ್ಥಿಯನ್ನು ಹಾಕದ ಏಳು ಮಂದಿ ಸದಸ್ಯ ಬಲದ ಜೆ.ಡಿ.ಎಸ್, ಬಿಜೆಪಿಯ ಮೂವರು ಸದಸ್ಯರು ಮತ್ತು ಪಕ್ಷೇತರ ಸದಸ್ಯ ದೊಡ್ಡಹೆಜ್ಜೂರುರಮೇಶ್, ಸಂಸದ ಪ್ರತಾಪಸಿಂಹ, ಎಂ.ಎಲ್.ಸಿ.ಅಡಗೂರು ಎಚ್.ವಿಶ್ವನಾಥ್ ಚುನಾವಣೆಗೆ ಗೈರಾಗಿದ್ದರು.
Related Articles
ಪ್ರಿಯಾಂಕ ಥೋಮಸ್, ಗೀತಾನಿಂಗರಾಜು, ಸಮೀನಾಪರ್ವಿನ್ ಅಧ್ಯಕ್ಷಗಾದಿ ಆಕಾಂಕ್ಷಿಯಾಗಿದ್ದರು. ಒಳೇಟಿನ ಸುಳಿವರಿತ ಶಾಸಕ ಮಂಜುನಾಥ್ ಎಚ್ಚೆತ್ತು, ಇಡೀದಿನ ಚರ್ಚೆ ನಡೆಸಿ, ಸದಸ್ಯರ ಮನವೊಲಿಸುವಲ್ಲಿ ಯಶಸ್ವಿಯಾದರು. ಸಮೀನಾ ಪರ್ವಿನ್ ಅಧ್ಯಕ್ಷೆಯಾಗಲು ಎಲ್ಲರೂ ಒಪ್ಪಿದರು.
Advertisement
ಕಾಂಗ್ರೆಸ್ ವಿಜಯೋತ್ಸವಫಲಿತಾಂಶ ಘೋಷಣೆಯಾಗುತ್ತಿದ್ದಂತೆ ನಗರಸಭೆ ಹೊರಗೆ ಜಮಾಯಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪಕ್ಷದ ಭಾವುಟ ಹಿಡಿದು ಪಕ್ಷ ಹಾಗೂ ಶಾಸಕ ಎಚ್.ಪಿ.ಮಂಜುನಾಥ್ ಪರ ಜಯಘೋಷ ಮೊಳಗಿಸಿ, ಪಟಾಕಿ ಸಿಡಿಸುತ್ತಾ ಕಚೇರಿವರೆಗೆ ತಮಟೆ ಸದ್ದಿಗೆ ಕುಣಿದು-ಕುಪ್ಪಳಿಸಿದರು. ನಂತರ ಮೆರವಣಿಗೆಯಲ್ಲಿ ನೂತನ ಅಧ್ಯಕ್ಷೆ ಸಮೀನಾಪರ್ವಿನ್ ಹಾಗೂ ಸದಸ್ಯರು ಕಾಂಗ್ರೆಸ್ ಪಕ್ಷದ ಕಚೇರಿಗೆ ತೆರಳಿದ ವೇಳೆ ಸಭೆ ನಡೆಸಿ ಪಕ್ಷದವತಿಯಿಂದ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲಾಯಿತು. ಅಂತೂ-ಇಂತೂ ದಕ್ಕಿದ ಅಧ್ಯಕ್ಷ ಸ್ಥಾನ
ಕಳೆದ ಬಾರಿಯೇ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಪ್ರಿಯಾಂಕ ಥೋಮಸ್‌ರಿಗೆ ಈ ಬಾರಿ ವರಿಷ್ಟ ಸ್ಥಾನ ಗ್ಯಾರಂಟಿ ಎಂಬ ಮಾತಿತ್ತಾದರೂ ಕೆಲ ರಾಜಕೀಯ ತಂತ್ರಗಾರಿಕೆಯಿಂದಾಗಿ ಕೈತಪ್ಪಿದೆ. ಎರಡು ಬಾರಿಯೂ ಅಧ್ಯಕ್ಷ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿದ್ದ ಸಮೀನಾಪರ್ವಿನ್‌ರವರು ಈ ಬಾರಿ ಶಾಸಕ ಎಚ್.ಪಿ.ಮಂಜುನಾಥರ ಒತ್ತಾಸೆಯಿಂದ ಅಧ್ಯಕ್ಷಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿರುವ ಇವರು ನಗರಸಭಾ ಮಾಜಿ ಸದಸ್ಯ ಜಾಕೀರ್‌ಹುಸೇನ್‌ರ ಪತ್ನಿ. ಸಮಸ್ಯೆ ಪರಿಹಾರಕ್ಕೆ ಆದ್ಯತೆ
ನಗರದಲ್ಲಿ ಕುಡಿಯುವ ನೀರು, ಬೀದಿದೀಪ, ಸ್ವಚ್ಚತೆ ಸೇರಿದಂತೆ ಹಲವಾರು ಸಮಸ್ಯೆಗಳು ಕಾಡುತ್ತಿದ್ದು, ಶಾಸಕ ಮಂಜುನಾಥ್ ಹಾಗೂ ಎಲ್ಲ ೩೫ ಮಂದಿ ಸದಸ್ಯರ ಸಹಕಾರದೊಂದಿಗೆ ಪರಿಹರಿಸಲು ಶ್ರಮಿಸುವುದಾಗಿ ಹಾಗೂ ತಮ್ಮ ಆಯ್ಕೆಗಾಗಿ ನೆರವಾದ ಎಲ್ಲ ಸದಸ್ಯರನ್ನು ಅಭಿನಂದಿಸುವುದಾಗಿ ನೂತನ ಅಧ್ಯಕ್ಷೆ ಸಮಿನಾ ಪರ್ವಿನ್ ತಿಳಿಸಿದರು. ನ್ಯಾಯ ಒದಗಿಸಿ
ಹಿಂದಿನ ಇಬ್ಬರು ಅಧ್ಯಕ್ಷರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ದಿಗೆ ಶ್ರಮ ಹಾಕಿದ್ದರು. ಅದರಲ್ಲೂ ಕೊವಿಡ್ ಸಂದರ್ಭದಲ್ಲಿ ಅಹಿರ್ನಿಷಿಯಾಗಿ ದುಡಿದಿದ್ದರು. ಅದೇರೀತಿ ನೂತನ ಅಧ್ಯಕ್ಷರು ಪಕ್ಷಬೇದ ಮರೆತು ಎಲ್ಲ ಸದಸ್ಯರನ್ನು ಒಗ್ಗಟ್ಟಿನಿಂದ ಕರೆದೊಯ್ಯುವ ಮೂಲಕ ಯೋಜನೆಗಳಿಗೆ ವೇಗ ನೀಡಬೇಕು. ಪ್ರತಿಧಿನಿಗಳು, ಸಿಬ್ಬಂದಿಗಳನ್ನು ಎರಡು ಹಳಿಗಳ ಮೇಲೆ ಒಟ್ಟಿಗೆ ಕರೆದೊಯ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನ್ಯಾಯ ಒದಗಿಸಬೇಕೆಂದು ಸೂಚಿಸಿದರು.