ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ಇತ್ಯರ್ಥವಾಗಿದ್ದು, ನಾವು ಮಾನ್ಯತೆ ನೀಡಲು ಸಾಧ್ಯವಾಗುವುದಿಲ್ಲ. ಈ ಕೆಲಸವನ್ನು ಸಂಸತ್ ಮಾಡಬೇಕಿದೆ ಎಂದು ಹೇಳಿದೆ. ಈ ಮೂಲಕ ಲೈಂಗಿಕ ಅಲ್ಪಸಂಖ್ಯಾಕರು ಸಲ್ಲಿಕೆ ಮಾಡಿದ್ದ 21 ಅರ್ಜಿಗಳನ್ನು ಐವರು ಸದಸ್ಯರುಳ್ಳ ಸಾಂವಿಧಾನಿಕ ಪೀಠ ತಿರಸ್ಕರಿಸಿದೆ. ಒಂದು ರೀತಿಯಲ್ಲಿ ನೋಡುವುದಾದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಎಲ್‌ಜಿಪಿಟಿಕ್ಯು ಸಮುದಾಯಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.
ಕ್ವಿಯರ್‌ಗಳು ಅಥವಾ ಎಲ್‌ಜಿಬಿಟಿಕ್ಯು ಸಮುದಾಯ ಸಲ್ಲಿಕೆ ಮಾಡಿದ್ದ 21 ಅರ್ಜಿಗಳ ಸಂಬಂಧ ಇದೇ ವರ್ಷದ ಮೇಯಲ್ಲಿ ಸತತ 10 ದಿನಗಳ ಕಾಲ ಈ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತ್ತು. ಈ ತೀರ್ಪು ಮಂಗಳವಾರ ಹೊರಬಿದ್ದಿದ್ದು, ಎಲ್‌ಜಿಬಿಟಿಕ್ಯು ಸಮುದಾಯಕ್ಕೆ ಹಿನ್ನಡೆ ಎಂದು ಕಂಡು ಬಂದರೂ, ಇನ್ನು ಮುಂದೆ ಈ ಸಮುದಾಯವನ್ನು ಎಲ್ಲರಂತೆಯೇ ಕಾಣಬೇಕು. ಯಾವುದೇ ತಾತ್ಸಾರದ ಮನೋಭಾವ ತೋರಬಾರದು ಎಂದು ಹೇಳಿರುವುದು ಸಮಾಧಾನದ ಅಂಶವೇ ಆಗಿದೆ.
ವಿಶೇಷವೆಂದರೆ, ಭಾರತವೂ ಸೇರಿದಂತೆ ಜಗತ್ತಿನ ಹಲವು ಮುಂದುವರಿದ ದೇಶಗಳು ಇಂದಿಗೂ ಸಲಿಂಗ ವಿವಾಹದ ಬಗ್ಗೆ ನಿಖರವಾದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಕೆಲವೊಂದು ದೇಶಗಳು ಕಾನೂನು ಸಮ್ಮತವಾಗಿಯೇ ಸಲಿಂಗ ವಿವಾಹವನ್ನು ಒಪ್ಪಿಕೊಂಡಿವೆ. ಆದರೆ ಭಾರತದಲ್ಲಿ ಇನ್ನೂ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಾಗಿಲ್ಲ. 2018ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ| ದೀಪಕ್ ಮಿಶ್ರಾ ನೇತೃತ್ವದ ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಐತಿಹಾಸಿಕ ತೀರ್ಪೊಂದನ್ನು ನೀಡಿ, ಅಸ್ವಾಭಾವಿಕ ಲೈಂಗಿಕ ಕ್ರಿಯೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿದ್ದ ಅಂಶವನ್ನು ತೆಗೆದು ಹಾಕಿತ್ತು.
ಭಾರತೀಯ ದಂಡ ಸಂಹಿತೆಯ 377ನೇ ವಿಧಿಯಲ್ಲಿದ್ದ ಕೆಲವು ಅಂಶಗಳು, ಅಂದರೆ ಒಪ್ಪಿಗೆಯಿಂದ ನಡೆಯಬಹುದಾಗಿದ್ದ ಅಸ್ವಾಭಾವಿಕ ಲೈಂಗಿಕತೆಯನ್ನು ಅಪರಾಧದ ಪರಿಧಿಯಿಂದ ತೆಗೆದಿತ್ತು. ಈ ಅಂಶವು ಸಮಾನತೆಯ ಹಕ್ಕನ್ನು ಉಲ್ಲಂ ಸುತ್ತದೆ ಎಂದೂ ಪೀಠ ಹೇಳಿತ್ತು. ಆ ಸಂದರ್ಭದಲ್ಲಿ ಲೈಂಗಿಕ ಅಲ್ಪಸಂಖ್ಯಾಕ ಸಮುದಾಯಕ್ಕೆ ಕೊಂಚ ನೆಮ್ಮದಿ ಸಿಕ್ಕಿತ್ತು. ಇದಾದ ಬಳಿಕ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕು, ಸಲಿಂಗ ದಂಪತಿಗೆ ದತ್ತು ಪಡೆಯಲು ಅವಕಾಶ ಮಾಡಿಕೊಡಬೇಕು ಎಂಬ ಕುರಿತಾದ ಸರಣಿ ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಈ ವಿಷಯವೂ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾಗಿ ವಿಚಾರಣೆ ನಡೆದಿತ್ತು.
ಈಗ ಸಾಂವಿಧಾನಿಕ ಪೀಠ ಕೆಲವೊಂದು ಅಂಶಗಳನ್ನು ಮುಖ್ಯವಾಗಿ ಪ್ರಸ್ತಾವಿಸಿದ್ದು, ಈ ಸಮುದಾಯದ ಮೇಲಿನ ತಾರತಮ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಜತೆಗೆ ಈ ಸಮುದಾಯಕ್ಕೆ ಸಾಮಾಜಿಕ ಭದ್ರತೆ ನೀಡಬೇಕು ಎಂದೂ ಹೇಳಿದೆ. ಆದರೆ ಕೋರ್ಟ್ ಕೇವಲ ಕಾನೂನುಗಳನ್ನು ಪರಿಶೀಲಿಸಬಹುದೇ ಹೊರತು, ಕಾನೂನುಗಳನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಈ ಅಂಶದ ಬಗ್ಗೆ ದೇಶದ ಸಂಸತ್ ಗಮನಹರಿಸಬೇಕು. ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬಗ್ಗೆ ಕಾನೂನು ರೂಪಿಸಲಿ ಎಂದು ಅದು ಅಭಿಪ್ರಾಯಪಟ್ಟಿದೆ. ದತ್ತು ವಿಚಾರದಲ್ಲಿಯೂ ಕೋರ್ಟ್ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಒಟ್ಟಾರೆಯಾಗಿ, ಈ ಬಗ್ಗೆ ಸಂಸತ್ ಕೂಲಂಕಷ ವಾಗಿ ಪರಿಶೀಲಿಸಿ ಶೀಘ್ರವೇ ನಿರ್ಧಾರಕ್ಕೆ ಬರಬೇಕಾಗಿದೆ.