ಇಲ್ಲಿ ಕಣ್ಣು ಹಾಯಿಸಿದಷ್ಟು ದೂರ ಮರಳೇ ಮರಳು. ಅದಕ್ಕೂ ಆಚೆಗೂ ಇನ್ನಷ್ಟು ಮರಳು… ಹಗಲಿನಲ್ಲಿ ಕಾಲಿಡಲಾಗದ ಬಿಸಿಯ ಬೇಗೆಗೆ ಕಾಯ್ದಷ್ಟೇ ವೇಗವಾಗಿ ಈ ಬಂಗಾರದ ಮರೂಭೂಮಿ ಸಂಜೆಯ ಸುಳಿಗಾಳಿಗೆ ಸಣ್ಣನೆಯ ಹೊಯ್ಗೆಯನ್ನು ತೂರುತ್ತಾ ತಂಪಾಗುತ್ತದೆ. ನೇಸರ ಈ ದಿಬ್ಬಗಳಿಂದ ಮೇಲಿಂದ ಕೆಳಗಿಳಿಯಲು ಇಷ್ಟ ಪಡದೆ ಸಂಜೆಯ ಹೊತ್ತು ಕಂತಿದ್ದರಂತೂ ರಾತ್ರಿ ಎಂಟಾಗುವ ಹೊತ್ತಿಗೆ ತನ್ನ ಬಣ್ಣ ತಗ್ಗಿಸಿ ಮರೆಯಾಗುತ್ತಾನೆ. ಬದುಕಿನ ಹಗಲು ಇಲ್ಲಿ ದೊಡ್ಡದು. ರಾತ್ರಿಗಳಿಗೆ ಬೇರೆಯದ್ದೇ ಬಣ್ಣದ ಬದುಕು ಇಲ್ಲಿ ಬಾಯ್ಬಿಚ್ಚಿಕೊಳ್ಳುತ್ತದೆ.
ಮರೂಭೂಮಿಯಲ್ಲೂ ಜೀವನ ಹಸನಾಗುತ್ತದೆ. ಪ್ರವಾಸಿಯ ಕೇಂದ್ರವಾಗಿ ಇದೀಗ ಸ್ಯಾಮ್ ಸ್ಯಾಂಡ್‌ಡೂನ್ಸ್ ಪ್ರಸಿದ್ಧ. ಭಾರತದ ಸಮುದ್ರ ಮತ್ತು ಮರುಭೂಮಿಯ ತೀರಗಳ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿರುವ ಪ್ರದೇಶಗಳಲ್ಲಿ ಸ್ಯಾಮ್ ಸ್ಯಾಂಡ್‌ಡೂನ್ಸ್‌ಗೆ ವಿಶೇಷ ಸ್ಥಾನವಿದೆ. ಕಾರಣ ಇಲ್ಲಿನ ಮರಳು ಬಂಗಾರದ ಬೆಲೆ ಸಮನಾಗಿ ಬಾಳುತ್ತದೆ ಮತ್ತು ಅಷ್ಟೆ ಸ್ವಚ್ಛ ಕೂಡಾ. ಇವೆಲ್ಲಕ್ಕೂ ಮಿಗಿಲು ಈ ಮರುಭೂಮಿಯ ಮರಳು ದಿಬ್ಬಗಳು ಇಂದು ಇದ್ದಂತೆ
ನಾಳೆ ಇರುವುದಿಲ್ಲ, ನಾಳೆಗಿದ್ದ ಮರಳಿನ ರಾಶಿ ಇನ್ನೆಲ್ಲೋ ಬೀಡುಬಿಟ್ಟಿರುತ್ತದೆ.
ಸ್ಥಳೀಯ ಗುರುತು, ದಿಕ್ಕು, ಯಾವುದೂ ಉಳಿಯದಂತೆ ಬಟಾಬಯಲಿನಲ್ಲಿ ಬದಲಾಗುವ ದಿಬ್ಬದ ವೈಚಿತ್ರ್ಯಕ್ಕೆ ಬದಲಾಗಿರುತ್ತವೆ ಪ್ರತಿ ಬೆಳಗಿನ ಹೊತ್ತಿಗೆ. ಸ್ಯಾಮ್ ಬರೀ ಮರಳು ಮರುಭೂಮಿಯಲ್ಲ ಅದೊಂದು ಚಲಿಸುವ ಮರಳು ದಿಬ್ಬಗಳ ನಾಡು. ಮನುಷ್ಯನ ಯಾವ ಹಿಡಿತಕ್ಕೂ ಸಿಗದ ಪ್ರಕೃತಿ ವೈಚಿತ್ರದ ನುಣುಪಿನ ಹೊನ್ನ ಹುಡಿಯ ಸ್ವರ್ಣ ಭೂಮಿ ಇದು. ಥಾರ್ ಎಂಬ ವಿಶ್ವ ಪ್ರಸಿದ್ಧ ಮರುಭೂಮಿಯ ಪಾದದ ಆರಂಭವೇ ಇಲ್ಲಿಂದ ಶುರುವಾಗುತ್ತದೆ.
ರಾಜಸ್ಥಾನದ ಸ್ವರ್ಣ ಭೂಮಿ ಎಂದೇ ಖ್ಯಾತಿ ಪಡೆದಿರುವ ಜೈಸಲ್ಮೇರ್ ನಗರದಿಂದ 42 ಕಿ. ಮೀ. ದೂರ ಇರುವ ಈ ಮರುಭೂಮಿಯನ್ನು ತಲುಪಲು ಸುಸಜ್ಜಿತ ರಸ್ತೆ ಪ್ರವಾಸವನ್ನು ಸುಗಮಗೊಳಿಸುತ್ತದೆ. ಆದರೆ ಸಂಪೂರ್ಣ ದಿನವೊಂದನ್ನು ಬೇಡುವ ಈ ಪ್ರದೇಶಕ್ಕೆ ಸಮಯವಿರಿಸಿಕೊಂಡು ಹೋದಲ್ಲಿ ಅನುಕೂಲ. ಅದರಲ್ಲೂ ತುಂಬ ಚೆಂದದ ಪ್ರವಾಸ ನಿಮ್ಮದಾಗಬೇಕಾದರೆ ಇಲ್ಲಿ ಹುಣ್ಣಿಮೆಯ ರಾತ್ರಿ ಅಥವಾ ಅದರ ಆಸುಪಾಸಿನ ದಿನಗಳನ್ನು ಆಯ್ದುಕೊಂಡಲ್ಲಿ
ಅದ್ಭುತ ರಂಗಿನಾಟಕ್ಕೆ ಸಾಕ್ಷಿಯಾಗುವುದರ ಜತೆಗೆ ಸ್ಯಾಮ್ ಸ್ಯಾಂಡ್‌ಡೂನ್ಸ್ ಪ್ರವಾಸ ಅವಿಸ್ಮರಣೀಯವಾಗುತ್ತದೆ.
ಸಂಜೆಯ ಸೂರ್ಯಸ್ತ ಪ್ರಖರವಾಗಿರುವ ಹೊತ್ತಿನಲ್ಲಿ ನೆರಳು ಬೆಳಕಿನಾಟ ಒಂದು ರೀತಿಯ ಅನುಭವ ನೀಡಿದರೆ, ಸಂಜೆಯಾಗಿ ಕತ್ತಲಾಗುವ ಬದಲಾಗಿ ಹುಣ್ಣಿಮೆಯ ಹಳದಿ ವರ್ಣಕ್ಕೆ, ರಾತ್ರಿ ತುಂಬು ಬೆಳದಿಂಗಳು ಅಚ್ಚರಂಗನ್ನು ನೀಡುವಾಗ ಆಗಸ ಮತ್ತು ಅದಕ್ಕೆ ಪ್ರತಿಫಲಿಸುವ ಮರಳಿನ ವರ್ಣಗಳ ಸಂಗಮ ವರ್ಣಿಸಲಸಾಧ್ಯ. ಹೆಚ್ಚಿನ ರೆಸಾರ್ಟ್‌ಗಳು ಈ ಮರಳಿನ ಅಂಗಳದಲ್ಲಿ ಸ್ಥಳಗಳನ್ನು ಕಾಯ್ದಿರಿಸಿರುತ್ತವೆ ರಾತ್ರಿಯ ವಸತಿಗೆ. ಬಟಾಬಯಲಿನ
ಮರುಭೂಮಿಯಲ್ಲಿ ಆಗಸಕ್ಕೆ ಮೈಯೊಡ್ಡಿ ಮಲಗುವ ಮೋದವೇ ಬೇರೆ.
ಜೈಸಲ್ಮೇರ್ ನಗರದಿಂದ ಆರಂಭವಾಗುವ ಮರೂಭೂಮಿಯ ಭೂ ವೈಪರೀತ್ಯದ ವಿನ್ಯಾಸ ಸ್ಯಾಮ್ ಡೂನ್ಸ್ ಬರುತ್ತಿದ್ದಂತೆ ಬದಲಾಗುತ್ತ ಹೋಗುತ್ತದೆ. ಮರುಭೂಮಿಯಲ್ಲಿ ಸಾಹಸಮಯ ಜೀಪ್ ಸಫಾರಿ ಇತ್ತೀಚಿನ ದಿನದ ವಿಶೇಷ ಆಕರ್ಷಣೆ ಎನ್ನಿಸಿದರೆ, ರಭಸದಿಂದ ವೇಗದ ಮಿತಿಮೀರಿ ಏರಿಳಿಯುವ ಎಸ್.ಯು.ವಿ. ವಾಹನಗಳು ಮರಳಿನಲ್ಲಿ ಹೊರಳಿ ಹೊರಳಿ ಮೈನವಿರೇಳುತ್ತವೆ. ಸುಲಲಿತವಾಗಿ ಈ ವಾಹನಗಳನ್ನು ಚಲಾಯಿಸುವ ಸ್ಥಳೀಯರಿಗೆ ಇದು ಪ್ರವಾಸೋದ್ಯಮ ಒದಗಿಸುತ್ತಿರುವ ಜೀವನೋಪಾಯವೂ ಹೌದು. ಇದೇ ಮರಳುಗಾಡಿನಲ್ಲಿ ಇಲ್ಲಿನ ಹಡಗು ಎಂದೇ ಖ್ಯಾತಿ ಪಡೆದಿರುವ ಒಂಟೆ ಸವಾರಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಆಟವೂ ಹೌದು.
ಪ್ರವಾಸಿಗರನ್ನು ಡೋಲು ಬಾರಿಸಿ ಸ್ಥಳೀಯ ವಾದ್ಯಗಳನ್ನು ನುಡಿಸಿ ಬರಮಾಡಿಕೊಳ್ಳುವ ಮರಳುಗಾಡಿನ ಆದರಾತಿಥ್ಯ ನಮ್ಮನ್ನು ಪೂರ್ತಿ ದಿವಸ ಕಾಡಿಸದೆ ಇರದು. ಸಂಜೆಯ ರಂಗಿನಲ್ಲಿ ಎಲ್ಲೆಡೆಗೂ ಸ್ಥಳೀಯ ಜನಪದ ನೃತ್ಯ, ತೊಗಲು ಗೊಂಬೆಯಾಟ, ಸಂಗೀತ ಮತ್ತು ಸಾಮೂಹಿಕ ಶಿಬಿರಾಗ್ನಿಯ ಜತೆಯಲ್ಲಿ ನೃತ್ಯದ ಆಮೋದ ಇಲ್ಲಿನ ಪ್ರಮುಖ ಸಂಜೆಯ ಆಕರ್ಷಣೆ. ಬಹುಶಃ ಪ್ರತಿ ರೆರ್ಸಾಟುಗಳು ಮತ್ತು ಹೊಟೇಲುಗಳು ಈ ಪದ್ಧತಿಯನ್ನು ಪಾರಂಪರಿಕವಾಗಿ ಬಳಸುವ ಯೋಜನೆಯನ್ನು ರೂಪಿಸಿಕೊಂಡೆ ಬಂದಿವೆ.
ಕಾರಣ ಇಲ್ಲಿಗೆ ಆಗಮಿಸುವ ಪ್ರತಿ ಪ್ರವಾಸಿಯ ಅನುಭವ ಇದಾಗಿದ್ದರೆ ವಿದೇಶಿಯರ ವಿಶೇಷ ಬೇಡಿಕೆಗನುಗುಣವಾಗಿ ಮರಳು ಗಾಡಿನ ದಿಬ್ಬಗಳ ಮೇಲೆ ರಾತ್ರಿ ವಸತಿಯನ್ನೂ ಕಲ್ಪಿಸಲಾಗುತ್ತದೆ. ವಿಶೇಷವಾಗಿ ಹುಣ್ಣಿಮೆಯ ಆಸುಪಾಸಿನಲ್ಲಿ ಸುತ್ತಮುತ್ತಲಿನ ಹತ್ತಾರು ಕಿ.ಮೀ. ವರೆಗಿನ ದಿಬ್ಬಗಳು ಇಂತಹ ತಾತ್ಫಾರ್ತಿಕ ವಸತಿಗಳಿಂದ ತುಂಬಿ ಹೋಗಿರುತ್ತದೆ. ಅಲ್ಲಲ್ಲಿ ಉರಿಯುವ ಶಿಬಿರಾಗ್ನಿ ಮತ್ತು ಸಂಗೀತ ಅಲ್ಲೇ ನಡೆಯುವ ರಾಜಸ್ಥಾನಿ ನೃತ್ಯ ಒಂಟೆಯ ಒರಲುವಿಕೆಗಳು ಹೊಸದೊಂದು ಲೋಕವನ್ನೆ ಸೃಷ್ಟಿಸುತ್ತವೆ. ಹಗಲಿನಲ್ಲಿ ಕಾಯ್ದು ಕೆಂಡವಾಗುವ ಈ ಮರುಭೂಮಿ ಇದೇನಾ ಎನ್ನುವಷ್ಟು ತಂಪಾಗಿ ಆತುಕೊಂಡಿರುತ್ತಿದೆ ಮರುದಿನದ ಬೆಳಗಿನವರೆಗೂ.
ರಾತ್ರಿಯ ವಿಶೇಷ ಭಕ್ಷ್ಯಭೋಜನಗಳು ರಾಜಸ್ಥಾನಿ ಎಂದು ಬೇರೆ ಹೇಳಬೇಕಿಲ್ಲವಲ್ಲ. ಅದರಲ್ಲೂ ದಾಲ್ ಭಾಟಿ ಜೊತೆಗೆ ಭಾರತದಲ್ಲೆ ಅತಿ ಅಪರೂಪದ, ಅತಿ ದುಬಾರಿ ಕಾಯಿಪಲ್ಲೆ ಎನಿಸಿರುವ ಕೇರ್ ಸಾಂಗ್ರಿ ಸಿದ್ಧವಾಗಿರುತ್ತದೆ. ಇದು ಕನಿಷ್ಟ 1500 ರಿಂದ 2500 ರೂ. ಬೆಲೆ ಹೊಂದಿರುವ ನಮ್ಮ ಕಡೆಯ ಬೀನ್ಸ್ ನಂತಹ ತರಕಾರಿ. ಅದರೊಂದಿಗೆ ಆಲೂ ಭಾನೊನ್ ಮತ್ತು ಆವರಣದಲ್ಲಿ ಬೀಡುಬಿಟ್ಟು ರಂಜಿಸಲು ಮಾಡುವ ಕಲ್ಬೇಲಿಯಾ ನೃತ್ಯ ಮರಳುಗಾಡೂ ಕೂಡಾ ಇಷ್ಟು ಆಪ್ತವಾಗಬಲ್ಲದು ಎನ್ನುವುದನ್ನು ಸ್ಯಾಮ್ ಸ್ಯಾಂಡ್‌ಡೂನ್ಸ್ ಮಾತ್ರ ಖಾತರಿ ಮಾಡುತ್ತದೆ.
*ಸಂತೋಷ ಕುಮಾರ್ ಮೆಹಂದಳೆ
(2017ರ ಅಕ್ಟೋಬರ್ -ಸಾಪ್ತಾಹಿಕ ಸಂಪದಲ್ಲಿ ಪ್ರಕಟಿತ ಬರಹ)