ಹನೂರು (ಚಾಮರಾಜನಗರ): ಸಾಲೂರು ಮಠದಿಂದ ತಮ್ಮ ಉಚ್ಛಾಟನೆ ಮತ್ತು ಉತ್ತರಾಧಿಕಾರಿ ನೇಮಕ ಸಂಬಂಧ ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪಡೆದಿದ್ದ ತಾತ್ಕಾಲಿಕ ನಿರ್ಬಂಧ ತಡೆಯಾಜ್ಞೆಯನ್ನು ಕೊಳ್ಳೇಗಾಲ ಸಿವಿಲ್ ನ್ಯಾಯಾಲಯ ರದ್ದುಗೊಳಿಸಿ ಆದೇಶಿಸಿದೆ.
ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ ಸಾಲೂರು ಬೃಹನ್ಮಠದ ಕಿರಿಯ ಶ್ರೀಗಳಾಗಿದ್ದರು.
ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ತರುವಾಯ ಸಾಲೂರು ಬೃಹನ್ಮಠದ ಭಕ್ತ ಮಂಡಲಿ, ಕರ್ನಾಟಕ ರಾಜ್ಯದ 20 ಹಳ್ಳಿಗಳು ಮತ್ತು ತಮಿಳುನಾಡಿನ 33 ಹಳ್ಳಿಗಳ ಬೇಡಗಂಪಣ ಮುಖಂಡರು ಸಭೆ ನಡೆಸಿ ಕಿರಿಯ ಶ್ರೀಗಳನ್ನು ಉಚ್ಛಾಟನೆ ಮಾಡಲು ತೀರ್ಮಾಣ ಕೈಗೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಮಹದೇವಸ್ವಾಮಿ ತನ್ನನ್ನು ಮಠದಿಂದ ಉಚ್ಛಾಟನೆ ಮಾಡುತ್ತಾರೆ ಮತ್ತು ಉತ್ತರಾಧಿಕಾರಿ ನೇಮಕ ಮಾಡಲಿದ್ದಾರೆ ಎಂಬುದನ್ನು ಅರಿತು 2019ರ ಆ.28ರಂದು ಕೊಳ್ಳೇಗಾಲ ಸಿವಿಲ್ ನ್ಯಾಯಾಲಯದಲ್ಲಿ ತಾತ್ಕಾಲಿಕ ನಿರ್ಬಂಧ ತಡೆಯಾಜ್ಞೆಯನ್ನು ಪಡೆದಿದ್ದನು.
ಬಳಿಕ ನ್ಯಾಯಾಲಯದ ತಡೆಯಾಜ್ಞೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಕೊಳ್ಳೇಗಾಲ ಸಿವಿಲ್ ನ್ಯಾಯಾಲಯವು ಈ ಪ್ರಕರಣವು ತಮ್ಮ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂಬುವ ಅಂಶವನ್ನು ಪರಿಗಣಿಸಿ ತಡೆಯಾಜ್ಞೆಯನ್ನು ತೆರವು ಮಾಡಿದೆ.