Advertisement

ಸಾಲು ಮರದ ತಿಮ್ಮಕ್ಕ ಅವರಿಗೆ ದೆಹಲಿ ಕರ್ನಾಟಕ ಸಂಘದಿಂದ ಅಭಿನಂದನೆ

02:04 PM Mar 19, 2019 | Team Udayavani |

ಮುಂಬಯಿ: ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪಡೆದ ಪರಿಸರವಾದಿ ಕರ್ನಾಟಕದ ಹೆಮ್ಮೆಯ ಶ್ರೀಮತಿ ಸಾಲು ಮರದ ತಿಮ್ಮಕ್ಕ ಅವರಿಗೆ ದೆಹಲಿ ಕರ್ನಾಟಕ ಸಂಘ ಅಭಿನಂದಿಸಿದೆ. ಮಾ. 17ರಂದು ನಡೆದ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಡಾ| ವೆಂಕಟಾಚಲ ಹೆಗಡೆ ಅವರು ಶಾಲು ಹೊದೆಸಿ, ಪುಷ್ಪಗುತ್ಛ ಮತ್ತು ಸ್ಮರಣಿಕೆಯನ್ನಿತ್ತು ಅಭಿನಂದಿಸಿದರು.

Advertisement

ಡಾ| ವೆಂಕಟಾಚಲ ಹೆಗಡೆ ಅವರು ಮಾತನಾಡಿ, ತಿಮ್ಮಕ್ಕನವರ ಸಾಧನೆ ಸ್ಫೂರ್ತಿದಾಯಕವಾಗಿದೆ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಅವರ ಕೆಲಸ ಆದರ್ಶಮಯ. ಅವರಿಂದ ಕಲಿಯುವಂಥದ್ದು ಬಹಳಷ್ಟಿದೆ. ಅವರು ಅನುಸರಿಸಿದ ಮಾರ್ಗವನ್ನು ಇಂದಿನ ಯುವ ಪೀಳಿಗೆ ಅನುಸರಿದಾಗ ಪರಿಸರ ಉಳಿಯಲು ಸಾಧ್ಯವಿದೆ. ಪರಿಸರ ಸಂರಕ್ಷಣೆಗೆ ನಮಗೆ ಅವರು ಪ್ರೇರಣೆಯಾಗಿದ್ದಾರೆ ಎಂದು ನುಡಿದು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತ ನಾಡಿದ ಸಾಲು ಮರದ ತಿಮ್ಮಕ್ಕ ಅವರು, ದೆಹಲಿ ಕರ್ನಾಟಕ ಸಂಘದಲ್ಲಿ ಹಿಂದೆಯೂ ಪ್ರಶಸ್ತಿ ಪಡೆದ ಖುಷಿಯ ಅನುಭವವಿದೆ. ನಿಮ್ಮ ಪ್ರೀತಿಗೆ ನನ್ನ ಕೃತಜ್ಞತೆಗಳು ಎಂದು ಹೇಳಿದರು.

ಸ್ನೇಹಾ ದೆಹಲಿ ಕನ್ನಡ ಲೇಡೀಸ್‌ ಅಸೋಸಿಯೇಶನ್‌ ವತಿಯಿಂದ ತಿಮ್ಮಕ್ಕನವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ದೆಹಲಿಯ ಕೃಕ್‌ ಸರ್ವೋದಯ ಫೌಂಡೇಷನ್‌ನ ಪಿ. ಸಿ. ಶ್ರೀನಿವಾಸ ಮತ್ತು ಸ್ನೇಹಾ ದೆಹಲಿ ಕನ್ನಡ ಲೇಡೀಸ್‌ ಅಸೋಸಿಯೇಶನ್‌ ಪರವಾಗಿ ಮಮತಾ ಗಿರಿಯಪ್ಪ ಅವರು ತಿಮ್ಮಕ್ಕನವರನ್ನು ಅಭಿನಂದಿಸಿ ಮಾತನಾಡಿದರು.

ಆರಂಭದಲ್ಲಿ ಸಾಲು ಮರದ ತಿಮ್ಮಕ್ಕ ಅವರು ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ಸಸಿಯನ್ನು ನೆಟ್ಟು ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಡಾ| ಅವನೀಂದ್ರನಾಥ್‌ ರಾವ್‌ ಅವರು ವಂದಿಸಿದರು. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next