ಉಪ್ಪುಂದ: ವಿದ್ಯುತ್ ತಂತಿ ತಗಲಿದ ಪರಿಣಾಮ ವಿದ್ಯಾರ್ಥಿ ಮೃತಪಟ್ಟ ಘಟನೆ ಕೆರ್ಗಾಲ್ ಗ್ರಾ.ಪಂ. ವ್ಯಾಪ್ತಿಯ ನಾಯ್ಕನಕಟ್ಟೆಯಲ್ಲಿ ಎ. 24ರಂದು ತಡರಾತ್ರಿ ಸಂಭವಿಸಿದೆ.ಬಿಜೂರು ಗ್ರಾಮದ ನೆಲ್ಲಿಹಕ್ಲು ನಿವಾಸಿ ವಸಂತಿ ಶೆಟ್ಟಿ ಅವರ ಪುತ್ರ ಚೇತನ್ ಶೆಟ್ಟಿ (16) ಮೃತಪಟ್ಟವರು.
ಇದನ್ನೂ ಓದಿ: 5 ವರ್ಷದ ಸ್ಪರ್ಧಾತ್ಮಕ ಪರೀಕ್ಷೆ ತನಿಖೆಯಾಗಲಿ: ಶರಣಪ್ರಕಾಶ
ಉಪ್ಪುಂದದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಚೇತನ್ ಶೆಟ್ಟಿ ಕಾಲೇಜಿಗೆ ರಜೆ ಇರುವುದರಿಂದ ಹೊಸ್ಕೋಟೆಯಲ್ಲಿ ಶಾಮಿಯಾನ ಕೆಲಸಕ್ಕೆ ಸೇರಿಕೊಂಡಿದ್ದರು.
ಎ. 24ರಂದು ನಾಯ್ಕನಕಟ್ಟೆ ಮನೆಯೊಂದರಲ್ಲಿ ಉಪನಯನ ಕಾರ್ಯಕ್ರಮ ಇದ್ದುದರಿಂದ ಕಬ್ಬಿಣದ ಏಣಿಯ ಮೇಲೆ ನಿಂತು ಶಾಮಿಯಾನ ಅಳವಡಿಸುತ್ತಿರುವಾಗ ಶಾಮಿಯಾನದ ಸುತ್ತ ಹಾಕಿರುವ ಲೈಟಿಂಗ್ ವಯರ್‌ನಲ್ಲಿ ಇದ್ದ ಗುಂಡು ಪಿನ್ ಆಕಸ್ಮಿಕವಾಗಿ ಅವರ ಎದೆಯ ಬಳಿಗೆ ತಾಗಿ ವಿದ್ಯುತ್ ಶಾಕ್ ತಗಲಿದ ಪರಿಣಾಮ ಕೆಳಕ್ಕೆ ಬಿದ್ದಿದ್ದಾರೆ.
ತತ್‌ಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.