ಅಂಕೋಲಾ: ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಚಿಕ್ಕ ಹುಡುಗನಾಗಿದ್ದೆ. ಆವಾಗ ನಮಗೆ ವಿವಿಧ ಸ್ಥಳಗಳಲ್ಲಿ ಗುಪ್ತ ಚೀಟಿ ಕೊಟ್ಟು ಬರಲು ಹೇಳುತ್ತಿದ್ದರು. ಸೈಕಲ್ ಕೂಡ ಅಪರೂಪ ಎಂಬಂತಹ ಸಂದರ್ಭದಲ್ಲಿ ಇದಕ್ಕಾಗಿಯೇ ನನಗೆ ಸೈಕಲ್ ನೀಡುತ್ತಿದ್ದರು. ಹಿಗಾಗಿ ನಾನು ಚೀಟಿ ಕೊಟ್ಟು ಬರುವ ಕೆಲಸ ಮಾಡುತ್ತಿದ್ದೆ. ಆದರೆ ನನಗೆ ಅದರೊಳಗೆ ಏನು ಬರೆದಿದ್ದಾರೆ, ಯಾವ ಹೋರಾಟ, ಏನೂ ತಿಳಿದಿರಲಿಲ್ಲ ಎಂದು ಕವಿ ಶಿವಬಾಬಾ ನಾಯ್ಕ ಹೇಳಿದರು.
ಅಂಕೋಲಾದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ 88ನೇ ವರ್ಷದ ನಿಮಿತ್ತ ಶನಿವಾರ ಕಡಲು ಪ್ರಕಾಶನದವರು ಹಮ್ಮಿಕೊಂಡ ತಾಲೂಕಿನ ಪೂಜಗೇರಿ ಹಳ್ಳಕ್ಕೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಬ್ರಿಟೀಷರ ವಿರುದ್ಧ ನಾನು ಹೀಗೆ ಕೆಲಸ ಮಾಡಿದ್ದೇನೆ ಎನ್ನುವುದೇ ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಈ ಎಲ್ಲಾ ಚಳವಳಿಗಳನ್ನು ನಾನು ನೋಡಿದ್ದೇನೆ. ನನ್ನ ಕೈಯಿಂದ ಬಾಗಿನ ಅರ್ಪಿಸುವ ಸೌಭಾಗ್ಯ ಬಂದಿರುವುದು ಮರೆಯಲಾಗದ ಸಂಗತಿ ಎಂದರು.
ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಮಾತನಾಡಿ, ಇತಿಹಾಸ ತಿಳಿಯದೇ ಹೋದರೆ ನಮ್ಮ ಹಿರಿಯರನ್ನು ನಾವು ಕಡೆಗಣಿಸಿದಂತೆ. ಹೀಗಾಗಿ ಇಂತಹ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯ ದೊರಕಿಸಿಕೊಡಲು ಕಾರಣೀಕರ್ತರಾದ ಸೇನಾನಿಗಳ ನೆನಪು ಮರುಕಳಿಸಿದಂತಾಗುತ್ತದೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಕಾಂತ ಮಾಸ್ತರ ಮಾತನಾಡಿ, ಉಪ್ಪಿಗೆ ತೆರಿಗೆ ವಿಧಿಸಿದ್ದನ್ನು ವಿರೋಧಿಸಿ ಬ್ರಿಟೀಷ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಪೂಜಗೇರಿ ಹಳ್ಳದ ನೀರನ್ನು ತೆಗೆದುಕೊಂಡು ಹೋಗಿ ತಹಶೀಲ್ದಾರ ಕಚೇರಿ ಎದುರು ಉಪ್ಪನ್ನು ತಯಾರಿಸಲಾಯಿತು. ಅದನ್ನು ಹರಾಜು ಮಾಡಿದಾಗ ಒಂದು ಚೀಲ ಉಪ್ಪಿಗೆ ಅಂದಿನ ಕಾಲದಲ್ಲಿಯೇ ರೇವು ನಾಯ್ಕ ಎನ್ನುವವರು 30 ರೂ. ನೀಡಿ ಖರೀದಿಸಿರುವುದು ದೇಶಪ್ರೇಮದ ಕೆಚ್ಚೆದೆ ತೋರಿಸುತ್ತದೆ ಎಂದರು.
ಚಿನ್ನದಗರಿ ಯುವಕ ಸಂಘದ ಗೌರವಾಧ್ಯಕ್ಷ ಹಾಗೂ ವರದಿಗಾರ ವಿಲಾಸ ನಾಯಕ ಪುಟ್ಟು ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕಾದ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ. ಕಳೆದ ಕೆಲ ವರ್ಷಗಳಿಂದ ನಾವೆಲ್ಲರೂ ಸೇರಿ ಹಳ್ಳಕ್ಕೆ ಬಾಗಿನ ಅರ್ಪಿಸುವ ಸಂಸ್ಕೃತಿಯನ್ನು ಹುಟ್ಟುಹಾಕಲಾಗಿದೆ ಎಂದರು.
ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ, ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಸಂಚಾಲಕ ಉಮೇಶ ಎನ್. ನಾಯ್ಕ, ವರದಿಗಾರ ವಿದ್ಯಾಧರ ಮೊರಬಾ, ಹಿರಿಯ ಕವಿ ನಾಗೇಂದ್ರ ನಾಯಕ ತೊರ್ಕೆ, ತಾಲೂಕು ಯುವ ಒಕ್ಕೂಟದ ಗೌರವಾಧ್ಯಕ್ಷ ಸಂದೀಪ ಬಂಟ ಮಾತನಾಡಿದರು.
ಕಡಲು ಪ್ರಕಾಶನದ ಸಂಚಾಲಕ ನಾಗರಾಜ ಮಂಜಗುಣಿ ಮಾತನಾಡಿ, ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಮುಟ್ಟಿಸುವುದಕ್ಕಾಗಿ 2016ರಲ್ಲಿ 85ನೇ ವರ್ಷದ ನಿಮಿತ್ತ ಪ್ರಥಮ ಬಾರಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿಠuಲ ಶೆಟ್ಟಿ, 2017ರಲ್ಲಿ ನಾಡೋಜ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಸುಕ್ರಿ ಗೌಡ, 2018ರಲ್ಲಿ ಕರ್ನಾಟಕ ರಾಜ್ಯೋತ್ಸವ
ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಗೌಡ ಅವರಿಂದ ಬಾಗಿನ ಅರ್ಪಿಸಲಾಗಿತ್ತು. 88ನೇ ವರ್ಷದ ನೆನಪಿಗಾಗಿ ಶಿವಬಾಬಾ ನಾಯ್ಕರಿಂದ ಬಾಗಿನ ಅರ್ಪಿಸಲಾಗಿದೆ. ಇದು ಮುಂದೆಯೂ ನಿರಂತರವಾಗಿ ನಡೆಯಲಿದೆ ಎಂದರು.
ರಮೇಶ ನಾಯ್ಕ, ಗೌರೀಶ ನಾಯ್ಕ, ವಿನೋದ ಗಾಂವಕರ, ಅಕ್ಷಯ ಗಾಂವಕರ, ಮಹಾದೇವ ಗೌಡ, ಮಣಿಕಂಠ ನಾಯ್ಕ ಮಂಜಗುಣಿ ಇತರರು ಉಪಸ್ಥಿತರಿದ್ದರು. ಚಿನ್ನದಗರಿ ಯುವಕ ಸಂಘದ ಅಧ್ಯಕ್ಷ ಕಾರ್ತಿಕ ನಾಯ್ಕ ವಂದಿಸಿದರು.