ಬೆಂಗಳೂರು: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಲವಣಾಂಶ ರಹಿತ ಮರಳನ್ನು ಪೂರೈಕೆ ಮಾಡುತ್ತಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಉಪ್ಪಿನಂಶ ಇರುವ ಮರಳನ್ನು ಬಳಸಿದರೆ ಕಾಮಗಾರಿಗಳ ಗುಣಮಟ್ಟ ಹಾಳಾಗುತ್ತದೆ ಎಂದು ಸಮಿತಿಯು ವರದಿ ನೀಡಿದೆ. ಇದರ ಆಧಾರದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ನಿಯಮ ಉಲ್ಲಂಘಿಸಿ ಮರಳು ಪೂರೈಕೆ ಮಾಡುತ್ತಿರುವುದು ಕಂಡುಬಂದರೆ ಕಠಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಕಾಂಗ್ರೆಸ್‌ನ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದರು.
ಇತ್ತೀಚೆಗೆ ಮತ್ತೆ ಲವಣಾಂಶಯುಕ್ತ ಮರಳನ್ನು ಬಳಸಲಾಗುತ್ತಿದೆ ಎಂದು ಸದಸ್ಯರು ಗಮನ ಸೆಳೆದಾಗ, “ನದಿಯು ಸಮುದ್ರಕ್ಕೆ ಸೇರುವ ಕಡೆಗಳಲ್ಲಿ ಮರಳು ದಿಣ್ಣೆಗಳಿಂದ ಮರಳನ್ನು ಸಂಗ್ರಹಿಸಲಾಗುತ್ತದೆ. ಅದರ ಗುಣಮಟ್ಟ ಪರಿಶೀಲಿಸಿ ಲವಣಾಂಶ ಇಲ್ಲದೆ ಇರುವ ಮರಳನ್ನು ಮಾತ್ರ ಪೂರೈಕೆ ಮಾಡಲಾಗುತ್ತದೆ’ ಎಂದು ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್ ಪ್ರದೇಶದಲ್ಲಿ 2018-19 ಮತ್ತು 2019-20ರಲ್ಲಿ 22 ದಿಣ್ಣೆಗಳಿಂದ 11.53 ಲಕ್ಷ ಮೆ. ಟನ್ ಮರಳು ತೆಗೆಯಲಾಗಿತ್ತು. 2020-21ರಲ್ಲಿ 13 ದಿಣ್ಣೆಗಳಿಂದ 10.58 ಮತ್ತು 2018-19ರಲ್ಲಿ 5 ದಿಣ್ಣೆಗಳಿಂದ 0.17 ಮೆ.ಟ. ಮರಳು ತೆಗೆಯಲಾಗಿದೆ. ಉಡುಪಿ ಜಿಲ್ಲೆಯಲ್ಲಿ 2019-20ರಲ್ಲಿ 8 ದಿಬ್ಬಗಳಿಂದ 7.96, 2020-21ರಲ್ಲಿ 10 ದಿಬ್ಬಗಳಿಂದ 7.13 ಲಕ್ಷ ಮೆ. ಟನ್ ಮರಳು ತೆಗೆಯಲಾಗಿದೆ ಎಂದು ವಿವರಿಸಿದರು.
ನಾನ್ ಸಿಆರ್‌ಝಡ್ ಪ್ರದೇಶಗಳಲ್ಲಿ 2018ರಿಂದ 2021ರ ವರೆಗೆ 12.71 ಲಕ್ಷ ಮೆ. ಟನ್ ಮರಳು ಇರುವ 49 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 2018ರಿಂದ 2021ರ ವರೆಗೆ 3.47 ಲಕ್ಷ ಮೆ. ಟನ್ ಮರಳು ಇರುವ 28 ಬ್ಲಾಕ್‌ಗಳನ್ನು ಗುರುತಿಸಲಾಗಿದೆ ಎಂದರು.