ಮುಂಬೈ : ಕೋವಿಡ್ ಎರಡನೇ ಅಲೆಗೆ ನಲುಗುತ್ತಿರುವ ಕಾರ್ಮಿಕ ವರ್ಗಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಆಪತ್ಭಾಂದವ ಆಗಿದ್ದಾರೆ. ಸ್ವತಃ ರಸ್ತೆಗೆ ಇಳಿದು ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಹಸಿದ ಹೊಟ್ಟೆಗಳಿಗೆ ಅನ್ನ ನೀಡುತ್ತಿದ್ದಾರೆ.
ಹೌದು, ಭಾರತದಲ್ಲಿ ಮತ್ತೊಂದು ಬಾರಿ ಕೋವಿಡ್ ಅಟ್ಟಹಾಸ ಮೆರೆಯುತ್ತಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈನಲ್ಲಿ ಮಹಾಮಾರಿ ಸೋಂಕು ರಣಕೇಕೆ ಹಾಕುತ್ತಿದೆ. ಸುಂಟರಗಾಳಿಯಂತೆ ಅಪ್ಪಳಿಸಿರುವ ಕೋವಿಡ್ ಸೋಂಕಿಗೆ ದೇಶದ ಜನಕ್ಕೆ ಅಕ್ಷರಶಃ ದಿಕ್ಕು ತೋಚದಂತಾಗಿದೆ. ಅದರಲ್ಲೂ ವಲಸೆ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಈಗಾಗಲೇ ಘೋಷಣೆಯಾಗಿರುವ ಕರ್ಫ್ಯೂ ಮಾದರಿಯ ಲಾಕ್ ಡೌನ್‍ಗೆ ಹೊಟ್ಟೆಗೆ ಹಿಟ್ಟಿಲ್ಲದೆ ನರಳುತ್ತಿದ್ದಾರೆ.
ಕೋವಿಡ್ ಎರಡನೇ ಅಲೆಗೆ ಸಿಲುಕಿ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ನಟ ಸಲ್ಮಾನ್ ಖಾನ್ ಸಹಾಯದ ಹಸ್ತ ಚಾಚಿದ್ದಾರೆ. ಪ್ರತಿ ನಿತ್ಯ 5000 ಜನರ ಹಸಿವು ನೀಗಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಅಡುಗೆ ಸಿದ್ಧಪಡಿಸಿ, ಅದರ ಗುಣಮಟ್ಟ ಪರೀಕ್ಷಿಸಿ, ವಿತರಿಸುತ್ತಿದ್ದಾರೆ.
ಸಲ್ಲು ಭಾಯ್ ಅವರ ಈ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆಯಿಂದ ಜನ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಜರಂಗಿ ಭಾಯ್‍ಜಾನ್ ಪರೋಪಕಾರಿ ಕೆಲಸಕ್ಕೆ ನೆಟ್ಟಿಗರ ಹೃದಯ ತುಂಬಿ ಬಂದಿದೆ.
ಇನ್ನು ಮಹರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಮಿತಿ ಮೀರಿದೆ. ಪ್ರತಿ ನಿತ್ಯ 60 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.