Advertisement
ತೀರದ ನೀರಿನ ಸಮಸ್ಯೆ 15,123 ಜನಸಂಖ್ಯೆ ಹೊಂದಿರುವ ಸಾಲಿಗ್ರಾಮ ಪ.ಪಂ.ನಲ್ಲಿ 8 ಸರಕಾರಿ ಬಾವಿ ಹಾಗೂ 1 ಖಾಸಗಿ ಬಾವಿ ನೀರಿನ ಮೂಲಗಳಿವೆ. ಗುಂಡ್ಮಿ, ಯಕ್ಷಿಮಠ, ಅಲಿತೋಟ, ಪಾರಂಪಳ್ಳಿ, ಚುಂಚ್‌ಮನೆ, ಹೊಳ್ಳರ ತೋಟ, ಮಧ್ಯಸ್ಥರ ತೋಟ, ಶಾಲಾ ತೋಟ, ಕೆಮ್ಮಣ್ಣುಕೆರೆ, ಕಾರ್ಕಡ ಸೌರಿಬೈಲು, ಭಟ್ರಕಟ್ಟೆ ಮುಂತಾದ ಭಾಗಗಳಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಎದುರಾಗುತ್ತದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ವರ್ಷಂಪ್ರತಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಶಾಶ್ವತ ಯೋಜನೆಗೆ ಮನವಿ ಮಾಡಲಾಗಿತ್ತು.
ಸುತ್ತಲಿನ ಗ್ರಾ.ಪಂ.ಗಳಿಗೂ ಅನುಕೂಲ
ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಬೇಸಗೆಯಲ್ಲಿ ಇಲ್ಲಿಗೆ 8.9 ಎಂ.ಸಿ.ಎಫ್.ಟಿ ನೀರು ಅಗತ್ಯವಿರುತ್ತದೆ. ಆದರೆ ಉದ್ದೇಶಿತ ಯೋಜನೆಯ ಮೂಲಕ 12.39 ಎಂ.ಸಿ.ಎಫ್.ಟಿ. ನೀರು ಸಂಗ್ರಹಿಸಬಹುದಾಗಿದೆ. ಇದೀಗ ವಾರಾಹಿ ಕಾಲುವೆ ನೀರು ಈ ಹೊಳೆಯನ್ನು ಸೇರುತ್ತಿರುವುದರಿಂದ ನೀರಿನ ಹರಿವು ಸಾಕಷ್ಟು ಹೆಚ್ಚಿದೆ. ಆದ್ದರಿಂದ ಉಳಿತಾಯವಾಗುವ 4 ಎಂ.ಸಿ. ಎಫ್.ಟಿ.ಗಿಂತಲೂ ಹೆಚ್ಚು ನೀರನ್ನು ಪಕ್ಕದ ವಡ್ಡರ್ಸೆ, ಪಾಂಡೇಶ್ವರ, ಕೋಟ ಮುಂತಾದ ಗ್ರಾ.ಪಂ.ಗಳಿಗೆ ನೀಡಲು ಅವಕಾಶವಿದೆ. ಇದು ಅಲ್ಲಿನ ನೀರಿನ ಸಮಸ್ಯೆಗೂ ಪರಿಹಾರ ನೀಡಲಿದೆ.
ಇಲ್ಲಿನ ಕಾರ್ಕಡ ಸಮೀಪ ದೊಡ್ಡ ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ 2 ಕಿಂಡಿ ಅಣೆಕಟ್ಟುಗಳನ್ನು ಬಳಸಿ ಬೇಸಗೆಯಲ್ಲಿ ಅಗತ್ಯವಿರುವ 8.9. ಎಂ.ಸಿ.ಎಫ್.ಟಿ. ನೀರನ್ನು ಶುದ್ಧೀಕರಿಸಿ ಕುಡಿಯಲು ನೀಡುವ ಕುರಿತು 2015ರಲ್ಲಿ 29.32 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿತ್ತು. ಅನಂತರ ಎರಡು ಬಾರಿ ಪರಿಷ್ಕರಣೆಯಾಗಿ 2017ರಲ್ಲಿ ಯೋಜನಾ ವೆಚ್ಚ 41 ಕೋಟಿ ರೂ.ಗೆ ತಲುಪಿತ್ತು. ವಾಟರ್ ಟ್ಯಾಂಕ್, ಶುದ್ಧೀಕರಣ ಘಟಕದ ನಿರ್ಮಾಣಕ್ಕೆ ಅಗತ್ಯವಿರುವ ಸರಕಾರಿ ಭೂಮಿಯನ್ನು ಕೂಡ ಗುರುತಿಸಲಾಗಿತ್ತು. ಆದರೆ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಕಡತದಲ್ಲೇ ಉಳಿದಿದೆ. ಅಂಗೀಕರಿಸಿಲ್ಲ
ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ನೀರಿನ ಕೊರತೆ ನೀಗಿಸಲು ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಸರಕಾರಕ್ಕೆ 2015ರಲ್ಲಿ ಸರ್ವೆ ನಡೆಸಿ ವರದಿಯೊಂದನ್ನು ಸಲ್ಲಿಸಲಾಗಿತ್ತು. ಅನಂತರ 2017ರಲ್ಲಿ ಅಂದಾಜು ವೆಚ್ಚ ಹೆಚ್ಚಿಸಿ ಮತ್ತೂಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಅಂಗೀಕಾರಗೊಂಡಿಲ್ಲ.
– ಶ್ರೀಪಾದ್ ಪುರೋಹಿತ್,ಮುಖ್ಯಾಧಿಕಾರಿಗಳು, ಸಾಲಿಗ್ರಾಮ ಪ.ಪಂ.
Related Articles
Advertisement