Advertisement

ಸಾಲಿಗ್ರಾಮ ಪ.ಪಂ.: ಇನ್ನೂ ಆಗಿಲ್ಲ ಮಳೆಗಾಲ ಸಿದ್ಧತೆ

12:16 AM Jun 16, 2019 | Team Udayavani |

ಕೋಟ: ಕರಾವಳಿಗೆ ಮುಂಗಾರು ಆಗಮನವಾಗಿದ್ದು, ಮಳೆಗಾಲದ ಸಮಸ್ಯೆಗಳು ಅಲ್ಲಲ್ಲಿ ಗೋಚರಿಸತೊಡಗಿವೆ. ಮುಂಗಾರಿಗೆ ಮೊದಲೇ ಸಿದ್ಧಗೊಂಡಿರಬೇಕಿದ್ದ ಸಾಲಿಗ್ರಾಮ ಪ.ಪಂ. ಈ ವಿಚಾರದಲ್ಲಿ ಹಿಂದೆ ಬಿದ್ದಿದೆ.

Advertisement

ಚರಂಡಿ ಹೂಳೆತ್ತುವ ಕೆಲಸವಾಗಿಲ್ಲ

ಪ್ರತಿ ಬಾರಿ ಮಳೆಗಾಲಕ್ಕೆ ಮೊದಲು ಚರಂಡಿ ಹೂಳೆತ್ತಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಈ ಬಾರಿ ಪ.ಪಂ. ವ್ಯಾಪ್ತಿಯಲ್ಲಿ ಕಸಕಡ್ಡಿ ತೆಗೆದಿದ್ದು ಬಿಟ್ಟರೆ, ಹೂಳೆತ್ತಿಲ್ಲ.

ಮುನ್ನೆಚ್ಚರಿಕೆ ಇಲ್ಲ

ಕಳೆದ ಬಾರಿ ಸಾಸ್ತಾನ-ಕೋಡಿ ರಸ್ತೆಯಲ್ಲಿ ಚೆಲ್ಲೆಮಕ್ಕಿ ಮಸೀದಿ ಸಮೀಪ ಪ್ರಮುಖ ತೋಡು ಒತ್ತುವರಿಯಾದ್ದರಿಂದ ಈ ಭಾಗದ ಹತ್ತಾರು ಮನೆಗಳಿಗೆ ನೀರು ನುಗ್ಗಿತ್ತು. ಸಾಲಿಗ್ರಾಮ ಮುಖ್ಯ ಪೇಟೆಯಲ್ಲಿ ಚರಂಡಿ ಹೂಳೆತ್ತದಿರುವುದು ಕೃತಕ ನೆರೆ ಸೃಷ್ಟಿಯಾಗಿತ್ತು. ಕಾರ್ಕಡ, ಬೆಟ್ಲಕ್ಕಿ, ಹೊಳೆಕೆರೆ, ಹೆಗ್ಗಡ್ತಿ ಓಣಿ ಮುಂತಾದ ಕಡೆಗಳಲ್ಲಿ ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿತ್ತು. ಈ ಸಮಸ್ಯೆಗಳ ಬಗ್ಗೆ ಈವರೆಗೂ ಮುನ್ನೆಚ್ಚರಿಕೆ ವಹಿಸಿಲ್ಲ.

Advertisement

ಬಿಸಿ ಮುಟ್ಟಿಸುವವರಿಲ್ಲ

ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ಮುಗಿದು 10 ತಿಂಗಳಾದರೂ ಮೀಸಲಾತಿ ಗೊಂದಲದಿಂದ ಇದುವರೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಇದರಿಂದ ಸದಸ್ಯರಿಗೆ ಸಂಪೂರ್ಣ ಅಧಿಕಾರವಿಲ್ಲ. ಹೀಗಾಗಿ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿಲ್ಲ. ಸದಸ್ಯರಿಗೆ ಅಧಿಕಾರವಿದ್ದಾಗ ಸಾಮಾನ್ಯಸಭೆಯಲ್ಲಿ ಚರ್ಚಿಸಿ, ಅಧಿಕಾರಗಳ ಗಮನಸೆಳೆದು ಸಮಸ್ಯೆ ಪರಿಹರಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಆಡಳಿತ ವ್ಯವಸ್ಥೆ ಎಚ್ಚರಗೊಳಿಸುವವರು ಇಲ್ಲವಾಗಿದೆ.

ರಾಜಕಾಲುವೆಗಳ ಅಭಿವೃದ್ಧಿ

ಪೇಟೆ ಮುಂತಾದ ಪ್ರಮುಖ ಭಾಗದ ನೀರನ್ನು ಹೊಳೆಗೆ ಸಂಪರ್ಕಿಸುವ ರಾಜಕಾಲುವೆಗಳು ಒತ್ತುವರಿಯಾಗುವುದರೊಂದಿಗೆ ಹೂಳು ತುಂಬಿ ಮುಚ್ಚಿವೆ. ಅವುಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಇಲ್ಲವಾದರೆ ಮುಂದಿನ ದಿನದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎನ್ನುವುದು ಜನರ ಅಭಿಪ್ರಾಯವಾಗಿದೆ.

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next