Advertisement

ಸಾಲಿಗ್ರಾಮ ಪ.ಪಂ.: ವರ್ಷದಿಂದ ಗೋಡೌನ್‌ನಲ್ಲಿ ಕಸ ಬಾಕಿ

12:58 AM Jan 30, 2023 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ಕಸದ ಸಮಸ್ಯೆ ಹೊಸ-ಹೊಸ ರೂಪದಲ್ಲಿ ಹೊರಹೊಮ್ಮುತ್ತಿದೆ. ವರ್ಷದ ಹಿಂದೆ ಕಸ ವಿಲೇವಾರಿಗೆ ಸ್ಥಳಾವಕಾಶವಿಲ್ಲದೆ ಸಮಸ್ಯೆ ಆಗಿತ್ತು. ಅನಂತರ ದಿನದಲ್ಲಿ ಪಾರಂಪಳ್ಳಿಯಲ್ಲಿ ಗೋಡೌನ್‌ ದೊರತ್ತಿದ್ದರಿಂದ ಸ್ವಲ್ಪ ಮಟ್ಟಿಗೆ ನಿರಾಳವಾಗಿತ್ತು. ಆದರೆ ಇದೀಗ ಗೋಡೌನ್‌ನಲ್ಲಿ ಶೇಖರಣೆಯಾದ ಕಸವನ್ನು ವಿಲೇವಾರಿ ಮಾಡಲು ಟೆಂಡರ್‌ ಪಡೆದ ಕಂಪೆನಿ ಕೈಕೊಟ್ಟಿದೆ. ಹೊಸ ಗುತ್ತಿಗೆದಾರರು ಕಸ ವಿಲೇವಾರಿಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಸ್ಥಳೀಯಾಡಳಿತಕ್ಕೆ ಸಮಸ್ಯೆಯಾಗಿದೆ.

Advertisement

ಗೋಡೌನ್‌ನಲ್ಲಿ ಶೇಖರಣೆಯಾದ ಕಸವನ್ನು ಪೂರ್ತಿಯಾಗಿ ವಿಲೇವಾರಿ ಮಾಡಲು ಮಂಗಳೂರು ಮೂಲದ ಗ್ರೀನ್‌ ಇಂಪ್ಯಾಕ್ಟ್ ಫೌಂಡೇಶನ್‌ ಎನ್ನುವ ಕಂಪೆನಿಗೆ 2022 ಜು. 20ರಂದು 3.5 ಲಕ್ಷ ರೂಗೆ ಒಪ್ಪಂದ ಮಾಡಿಕೊಂಡು ಮುಂಗಡವಾಗಿ 1.75ಲಕ್ಷ ರೂ ನೀಡಲಾಗಿತ್ತು. ಆದರೆ ಕಂಪೆನಿ ಕೇವಲ 7 ಲೋಡ್‌ ಕಸ ಮಾತ್ರ ವಿಲೇವಾರಿ ಮಾಡಿ ಸುಮ್ಮನಾಗಿದೆ.

ಒಪ್ಪಂದದ ದೋಷ
ಸಾಮಾನ್ಯವಾಗಿ ಕಸ ವಿಲೇವರಿಗೆ ಒಪ್ಪಂದ ಮಾಡಿಕೊಳ್ಳುವಾಗ 3ರಿಂದ 6 ತಿಂಗಳಲ್ಲಿ ವಿಲೇ ಮಾಡಬೇಕು ಎನ್ನುವ ಶರತ್ತನ್ನು ಸ್ಥಳೀಯಾಡಳಿತ ವಿಧಿಸುತ್ತದೆ. ಆದರೆ ಈ ಒಪ್ಪಂದಲ್ಲಿ ಕಾಲಮಿತಿ ವಿಧಿಸಿಲ್ಲ. ಹೀಗಾಗಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಆದರೆ ಪ.ಪಂ. ಮುಖ್ಯಸ್ಥರು ಹೇಳುವ ಪ್ರಕಾರ ಒಪ್ಪಂದದಲ್ಲಿ ನಮೂದಾಗದಿದ್ದರೂ 6ತಿಂಗಳೊಳಗೆ ವಿಲೇ ಮಾಡಬೇಕು ಎನ್ನುತ್ತಾರೆ.

ಮೃದು ಧೋರಣೆ
ಒಂದು ಅಂದಾಜಿನ ಪ್ರಕಾರ ಗೋಡೌನ್‌ನಲ್ಲಿರುವ ಎಲ್ಲ ಕಸ ವಿಲೇವಾರಿ ಮಾಡಲು 6-7ಲಕ್ಷ ರೂ ಬೇಕಾಗುತ್ತದೆ. ಆದರೆ ಗುತ್ತಿಗೆ ವಹಿಸಿಕೊಂಡ ಕಂಪೆನಿ 3.5ಲಕ್ಷಕ್ಕೆ ಬಿಡ್‌ ಮಾಡುವ ಮೂಲಕ ಆರಂಭದಲ್ಲೇ ಎಡವಿದೆ ಎನ್ನಲಾಗಿದೆ. ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಕ್ಕೆ ಗುತ್ತಿಗೆ ಪಡೆದ ವ್ಯಕ್ತಿಗೆ ತೀವ್ರ ಅಪಘಾತವಾಗಿದ್ದು, ಓಡಾಡುವ ಪರಿಸ್ಥಿತಿ ಇಲ್ಲ. ಮೂರು ಬಾರಿ ಅವರಿಗೆ ನೋಟೀಸು ನೀಡಿದ್ದೇವೆ. 7 ಲೋಡ್‌ ಕಸ ವಿಲೇವಾರಿ ಮಾಡಲು 56 ಸಾವಿರ ರೂ. ಖರ್ಚಾಗಿದ್ದು ಮಿಕ್ಕುಳಿದ ಹಣ ವಾಪಾಸು ಮಾಡುತ್ತೇನೆ ಎಂದವರು ತಿಳಿಸಿದ್ದಾರೆ. ಆದ್ದರಿಂದ ಕಾದು ನೋಡುತ್ತಿದ್ದೇವೆ ಎಂದು ಮುಖ್ಯಾಧಿಕಾರಿಗಳು ಹೇಳುತ್ತಾರೆ.

ಕ್ರಮ ಕೈಗೊಳ್ಳುತ್ತೇವೆ
ಒಪ್ಪಂದದಂತೆ ಕಾಮಗಾರಿ ನಿರ್ವಹಿಸಲು ವಿಫಲವಾಗಿರುವುದರಿಂದ ನಾವು ನೀಡಿದ ಹಣವನ್ನು ಹಿಂದಿರುಗಿಸುವಂತೆ ಮೂರು ಬಾರಿ ನೋಟೀಸು ನೀಡಿದ್ದೇವೆ. ಆದರೆ ಅನಾರೋಗ್ಯದ ಕಾರಣ ಕಾಲಾವಕಾಶ ಕೇಳಿದ್ದಾರೆ. ಇನ್ನೊಮ್ಮೆ ವಿಚಾರಿಸಿ ಕ್ರಮಕೈಗೊಳ್ಳುತ್ತೇವೆ.
-ಶಿವ ನಾಯ್ಕ, ಮುಖ್ಯಾಧಿಕಾರಿಗಳು

Advertisement

ಸಾರ್ವಜನಿಕ ಹಿತಾಸಕ್ತಿ ದೂರು
ಸ್ಥಳೀಯಾಡಳಿತ ನಿಗದಿಪಡಿಸುವ ಮೊತ್ತವನ್ನು, ಸೀಮಿತ ದಿನದೊಳಗೆ ಗುತ್ತಿಗೆ ವಹಿಸಿಕೊಂಡವರು ವಾಪಾಸು ನೀಡಬೇಕಿತ್ತು. ಇಲ್ಲವಾದರೆ ಅವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಬೇಕಿತ್ತು. ಸಾರ್ವಜನಿಕರ ತೆರಿಗೆ ಹಣ ಪೋಲಾಗಬಾರದು ಎನ್ನುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಲಾಗು ವುದು.
-ಶ್ಯಾಮ್‌ಸುಂದರ್‌ ನಾೖರಿ, ಸದಸ್ಯರು, ಪ.ಪಂ.

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next